ನೀತಿ ಸಂಹಿತೆ ಉಲ್ಲಂಘನೆ: ಬಿರಾಳ(ಬಿ) ಬಿಲ್ ಕಲೆಕ್ಟರ್ ಸಸ್ಪೆಂಡ್
ಗುಲಬರ್ಗಾ: ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ(ಬಿ) ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ದೇವರಾಜ್ ಪರಮೇಶ್ವರ ಸಾಕಿನ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜೇವರ್ಗಿ ತಹಶೀಲ್ದಾರ್ ಅವರು ತಿಳಿಸಿದ್ದಾರೆ. ಈ ಬಿಲ್ ಕಲೆಕ್ಟರ್ ಅವರು ಹಲವಾರು ವರ್ಷಗಳಿಂದ ಅನೇಕ ಅವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ರಾಜಕೀಯ ನಾಯಕರೊಂದಿಗೆ ಶ್ಯಾಮೀಲಾಗಿರುವ ಬಗ್ಗೆ ಬಿರಾಳ(ಬಿ) ಗ್ರಾಮಸ್ಥರು ಏಪ್ರಿಲ್ ೨೭ ರಂದು ದೂರು ನೀಡಿರುತ್ತಾರೆ. ಇದಲ್ಲದೆ ಇವರ ನಡತೆಯ ಬಗ್ಗೆ ಪತ್ರಿಕೆಯೊಂದರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದಾಗಿ ಭಾವಚಿತ್ರ ಸಹಿತ ಪ್ರಕಟಗೊಂಡಿರುತ್ತದೆ. ಇದು ಗ್ರಾಮ ಪಂಚಾಯತ್ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಲ್ ಕಲೆಕ್ಟರ್ ದೇವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಜೇವರ್ಗಿಯ ಆರಕ್ಷಕ ಉಪ ನಿರೀಕ್ಷಕರಿಗೆ ಪತ್ರ ಬರೆಯಲಾಗಿದೆ ಎಂದು ತಹಶಿಲ್ದಾರರು ತಿಳಿಸಿದ್ದಾರೆ.