ಭಟ್ಕಳ: ಭಾರತದ ಮೂಲ ನಿವಾಸಿಗಳ ಸಂಖ್ಯೆ ತೀರ ಚಿಕ್ಕದಾಗಿದ್ದು, 90% ವಲಸಿಗರೇ ಇಲ್ಲಿನ ನಿವಾಸಿಗಳಾಗಿದ್ದಾರೆ. ವಲಸಿಗರೇ ಕಟ್ಟಿದ ವೈವಿಧ್ಯತೆಯ ಭಾರತದಲ್ಲಿ ಸರ್ವರಿಗೂ ಸಮಾನ ಗೌರವ, ಘನತೆ ಸಿಗುವಂತೆ ಮಾಡಬೇಕಾದ ಹೊಣೆಗಾರಿಕೆ ನಮ್ಮ ಮೇಲೆ ಇದೆ ಎಂದು ಸುಪ್ರೀಮ್ ಕೋರ್ಟ ನಿವೃತ್ತ ಮುಖ್ಯ ನ್ಯಾಯಾಧೀಶ ಮಾಕಾರ್ಂಡೇಯ ಕಾಟ್ಜು ಹೇಳಿದ್ದಾರೆ.
ಅವರು ರವಿವಾರ ಭಟ್ಕಳ ಅಂಜುಮನ್ ಹಾಮಿ ಇ ಮುಸ್ಲಿಮೀನ್ ಸಂಸ್ಥೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತ ಭೌಗೋಳಿಕವಾಗಿ ಸಮೃದ್ಧಿಯನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿರುವ ನದಿ, ಹೊಳೆ, ಹಳ್ಳ, ಗುಡ್ಡ ಬೆಟ್ಟ, ಹೊಲಗಳು ಕೃಷಿ ಚಟುವಟಿಕೆಗೆ ಪೂರಕವಾದ ತಾಣವಾಗಿದೆ. ಆ ಕಾರಣದಿಂದಲೇ ಬೇರೆ ಬೇರೆ ಕಡೆಗಳಿಂದ ಜನರು ಭಾರತದತ್ತ ವಲಸೆ ಬಂದಿದ್ದಾರೆ. ಇಲ್ಲಿ ಹಲವಾರು ವರ್ಣ, ಭಾಷೆ ಹಾಗೂ ದೈಹಿಕ ವ್ಯತ್ಯಾಸವನ್ನು ಹೊಂದಿರುವ ಜನರು ನೆಲೆ ಕಂಡುಕೊಂಡಿದ್ದಾರೆ. ಇಲ್ಲಿರುವ ಎಲ್ಲರಿಗೂ ಸಮಾನ ಗೌರವ ಪ್ರಾಪ್ತವಾಗದೇ ಇದ್ದರೆ ದೇಶ ಹೋಳಾಗಲಿದೆ ಎಂದು ಎಚ್ಚರಿಸಿದರು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ರಾಷ್ಟ್ರಪಿತನಾಗಿದ್ದ ಅಕ್ಬರ್‍ನ ಆಡಳಿತ ದೇಶಕ್ಕೆ ಮಾದರಿಯಾಗಿದೆ, ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ ನೂರಾರು ದೇವಸ್ಥಾನಗಳಿಗೆ ನೆರವು ನೀಡಿ ರಕ್ಷಣೆ ಒದಗಿಸಿದ್ದ. ಆದರೆ ಈಗ ಎಲ್ಲವೂ ತಿರುಗುಮುರುಗಾಗಿ ಕೇಳಿಸುತ್ತಿದೆ.
ದೇಶದ ನೈಜ್ಯ ಚಿತ್ರಣವನ್ನು ಎಲ್ಲರೆದುರಿಗೆ ತೆರೆದಿಡುವ ಕೆಲಸ ಆಗಬೇಕಾಗಿದೆ ಎಂದರು.
ಭಾರತ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಎಸ್.ವಾಯ್.ಖುರೇಷಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಹಲವಾರು ಮುಸ್ಲೀಮರು ಈ ಹಿಂದೆ ಇದ್ದರು. ಆದರೆ ಕಾಲಕ್ರಮೇಣ ಮುಸ್ಲೀಮ್ ಪಾಲ್ಗೊಳ್ಳುವಿಕೆ ಕಡಿಮೆಯಾಯಿತು. ಇದೀಗ ನೊಬೆಲ್ ಪ್ರಶಸ್ತಿ ಪಡೆಯುವ ಮುಸ್ಲೀಮರ ಸಂಖ್ಯೆ ವಿರಳವಾಗಿದೆ. ಮುಸ್ಲೀಮರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಪರಸ್ಪರ ಮಾತುಕತೆ, ಚರ್ಚೆಯ ಮೂಲಕ ಭಿನ್ನಾಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದರು.
ಜನಸಂಖ್ಯೆಯ ಏರಿಕೆ ಬಗ್ಗೆ ರಾಜಕೀಯ ಕಾರಣಕ್ಕಾಗಿ ಮುಸ್ಲೀಮರನ್ನು ಗುರಿ ಮಾಡಲಾಗುತ್ತಿದೆ. ಆದರೆ ಅಂಕಿಅಂಶಗಳು ಇದಕ್ಕೆ ವ್ಯತಿರಿಕ್ತ ಸಂಗತಿಗಳು ತಿಳಿಸುತ್ತಿದ್ದು, ಆ ಬಗ್ಗೆ ಪುಸ್ತಕವನ್ನು ಬರೆದಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಭಾರತದಲ್ಲಿ ಶಿಕ್ಷಣ ಎನ್ನುವುದು ಬಹಳ ದೊಡ್ಡ ಇತಿಹಾಸವನ್ನೇನೂ ಹೊಂದಿಲ್ಲ. ಲಾರ್ಡ ಮೆಕಾಲೆ ಬರುವ ಪೂರ್ವದಲ್ಲಿ ಭಾರತದಲ್ಲಿ ಇದ್ದುದು 3% ಸಾಕ್ಷರತೆ. ಸ್ವಾತಂತ್ರ್ಯ ಬರುವ ಹೊತ್ತಿಗೆ 11% ತಲುಪಿತ್ತು. ಈಗ ದೇಶದಲ್ಲಿ 500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇವೆ. ಈಗ ದೇಶದಲ್ಲಿ ಸಾಕ್ಷರತೆ 75% ದಾಟಿದೆ ಎಂದರು.
ಉತ್ತರಪ್ರದೇಶ ಜಮಾಅತೇ ಉಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಅಶ್‍ಹದ್ ರಶೀದಿ, ಶಾಸಕ ಸುನಿಲ್ ನಾಯ್ಕ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಅಬ್ದುಲ್ ಅಝೀಮ್ ಮಾತನಾಡಿದರು. ಭಟ್ಕಳ ಅಂಜುಮನ್ ಹಾಮಿ ಇ ಮುಸ್ಲಿಮೀನ್ ಇದರ ಅಧ್ಯಕ್ಷ ಖಾಜಿಯಾ ಮಹ್ಮದ್ ಮುಝಮಿಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಇಸ್ಮೈಲ್ ಸಿದ್ದಿಕ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸಾದೀಕ್ ಪಿಲ್ಲೂರ್ ವಂದಿಸಿದರು. ಆಫ್ತಾಬ್ ಕೋಲಾ ಮತ್ತು ಯಾಸೀನ್ ಆಸ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಮೌಲಾನಾ ಮಹ್ಮದ್ ಶಫಿ ಖಾಸಿಮಿ ಮಲ್ಫಾ ಬರೆದ ಅಂಜುಮನ್ ಶಿಕ್ಷಣ ಸಂಸ್ಥೆಯ 100 ವರ್ಷಗಳ ಯಶೋಗಾಥೆ ಪುಸ್ತಕವನ್ನು ಇಶಾಕ್ ಶಾಬಂದ್ರಿ, ಅಂಜುಮನ್ ಶತಮಾನೋತ್ಸವ ಕೃತಿಯನ್ನು ಮೌಲಾನಾ ಅಬ್ದುರ್ರಕೀಬ್ ಎಮ್.ಜೆ., ಅಬ್ದುರ್ರಹೀಮ್ ಜುಕಾಕೋ ಬರೆದ ಮುಸ್ಲೀಮ್ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರ ಪುಸ್ತಕವನ್ನು ಆಫ್ತಾಬ್ ಹುಸೇನ್ ಕೋಲಾ ಬಿಡುಗಡೆಗೊಳಿಸಿದರು. ಆರಂಭದಲ್ಲಿ ವಿದ್ಯಾರ್ಥಿ ಉಮೈರ್ ಕುರಾನ್ ಪಠಿಸಿದರು.
ಮೌಲಾನಾ ಅಶ್‍ಹದ್ ರಶಿದಿ: ಸನ್ನಡತೆ, ಸತ್ಯ ಇಂದಿನ ಅಗತ್ಯವಾಗಿದೆ:
ಪ್ರಸ್ತುತ ಗೆಳೆಯರು ವೈರಿಗಳಾಗುತ್ತಿದ್ದಾರೆ. ಪ್ರತಿಯೊಬ್ಬರೂ ಸತ್ಯ, ಸನ್ನಡತೆಯನ್ನು ಪಾಲಿಸಬೇಕು. ಮಾತು ತಪ್ಪುವುದು ಧರ್ಮವಲ್ಲ. ಈಗ ಕಾಣಿಸುತ್ತಿರುವ ಗದ್ದಲ, ಗಲಾಟೆಗಳು ಒಳ್ಳೆಯ ಮತ್ತು ಕೆಡುಕಿನ ನಡುವಿನ ಸಂಘರ್ಷವಾಗಿದೆ.
ಎಸ್.ವಾಯ್.ಖುರೇಶಿ, ಭಾರತ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತರು: ರಾಜಕೀಯ ಕಾರಣಕ್ಕಾಗಿ ಮುಸ್ಲೀಮರು ಗುರಿಯಾಗುತ್ತಿದ್ದಾರೆ
ದೇಶದಲ್ಲಿ ಜನಸಂಖ್ಯೆ ಏರಿಕೆಗೆ ಮುಸ್ಲೀಮರನ್ನು ಗುರಿ ಮಾಡಲಾಗುತ್ತಿದೆ. ಆದರೆ ಅಂಕಿ ಅಂಶಗಳು ಹೇಳುವ ಸಂಗತಿಗಳೇ ಬೇರೆ. ಮುಸ್ಲೀಮರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದೆ.
ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು:ರಾಮ ರಹಿಮರ ನಡುವಿನ ಕಂದಕ ತಾತ್ಕಾಲಿಕ:
ರಾಮ ರಹಿಮರ ನಡುವೆ ಕಂದಕ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಮುಂದೆ ಎಲ್ಲವೂ ಸರಿಯಾಗಲಿದೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹೇಳಿರುವ ` ಬದುಕಲು ರಾಜಕೀಯಕ್ಕೆ ಬರಬೇಡಿ, ಬದುಕು ಬದಲಾಯಿಸಲು ರಾಜಕೀಯಕ್ಕೆ ಬನ್ನಿ ಮಾತು ಸರ್ವ ಕಾಲಕ್ಕೂ ವೇದ್ಯ.
ಸುನಿಲ್ ಬಿ. ನಾಯ್ಕ, ಶಾಸಕರು, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ: ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಪೂರ್ಣ ನೆರವು:
ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆ ಯಾವುದೇ ಹಣದ ಆಸೆಗೆ ಬಲಿ ಬೀಳದೇ, ಜಾತಿ, ಧರ್ಮ ಭೇದವಿಲ್ಲದೇ ಎಲ್ಲರಿಗೂ ಶಿಕ್ಷಣ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಅಂಜುಮನ್ ಸಂಸ್ಥೆಯ ವತಿಯಿಂದ ಮೆಡಿಕಲ್ ಕಾಲೇಜು ಸ್ಥಾಪಿಸುವುದಾದರೆ ಅದಕ್ಕೆ ನನ್ನಿಂದ ಆಗುವ ಎಲ್ಲ ನೆರವನ್ನು ನೀಡಲು ಸಿದ್ಧನಿದ್ದೇನೆ