ಭಟ್ಕಳ: ತಾಲೂಕಿನ ಎಲ್ಲೆಡೆ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಸ್ಲಾಂ ಧರ್ಮೀಯರು ರವಿವಾರ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಬಕ್ರೀದ್ ನಿಮಿತ್ತ ತಾಲೂಕಿನ ಸರಿಸುಮಾರು 20 ಜುಮ್ಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಏರ್ಪಾಡು ಮಾಡಲಾಗಿತ್ತು. ಶ್ವೇತ ವಸ್ತ್ರಧಾರಿಗಳಾಗಿ ರವಿವಾರ ಬೆಳಿಗ್ಗೆ ಮಸೀದಿಗೆ ತೆರಳಿದ ಸಾವಿರಾರು ಮುಸ್ಲೀಮ್ ಧರ್ಮೀಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ಜಾಮೀಯಾ ಮೊಹಲ್ಲಾದ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಖಲೀಫಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಖಾಜಾ ಅಕ್ರಮಿ ಮದನಿ, ಮಗ್ದೂಮ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ನಿಯಾಮತುಲ್ಲಾ ಆಸ್ಕೇರಿ ನದ್ವಿ, ತಂಜೀಮ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅನ್ಸಾರ್ ಖತೀಬ್ ಮದನಿ, ಮದೀನಾ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಝಕರಿಯಾ ಬರ್ಮಾವರ್ ನದ್ವಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ ನೂರ್ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಆಮೀನ್ ರುಕ್ನುದ್ದೀನ್ ನದ್ವಿ ಇವರು ಧಾರ್ಮಿಕ ಪ್ರವಚನ ನೀಡಿ, ಬಕ್ರೀದ್ ತ್ಯಾಗದ ಸಂಕೇತವಾಗಿದೆ. ಅಲ್ಲಾಹುನ ಆಜ್ಞೆಗೆ ಎಲ್ಲರೂ ತಲೆ ಬಾಗಲೇ ಬೇಕು, ಪ್ರಸಕ್ತವಾಗಿ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬೆಳೆಸುವುದು ಈ ಕಾಲದ ಬೇಡಿಕೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಇಂದ್ರೀಯಗಳ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು, ಸಮುದಾಯವನ್ನು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯುವ ಕೆಲಸವನ್ನು ಮುಖಂಡರಾದವರು ಮಾಡಬೇಕು ಎಂದು ವಿವರಿಸಿದರು.
ತಾಲೂಕಿನ ಎಲ್ಲೆಡೆ ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಡಿವಾಯ್‍ಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ದಿವಾಕರ, ಸಿಪಿಐ ಮಹಾಬಲೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.