ಭಟ್ಕಳ:ತಾಲೂಕಿನಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ನಿರ್ಮಿಸಲು ಉದ್ದೇಶಿಸಲಾದ ಕಾಳಜಿ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ನಮ್ಮ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಅವರು ಭಟ್ಕಳ ಸರಕಾರ ಆಸ್ಪತ್ರೆಯಲ್ಲಿ ನಡೆದ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 5 ವರ್ಷಗಳ ಹಿಂದೆ ಬೆಳಕೆಯಲ್ಲಿ ಎಂಡೋಸಲಾನ್ ಪೀಡಿತರಿಗಾಗಿ ಶಿಬಿರವನ್ನು ನಡೆಸಲಾಗಿತ್ತು. ಅವರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಭಟ್ಕಳದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಆದರ ಹಿಂದಿನ ಸರಕಾರದ ಅವಧಿಯಲ್ಲಿ ಪ್ರಸ್ತಾವನೆ ಮುಂದಕ್ಕೆ ಹೋಗಿಲ್ಲ. ಈಗ ನಮ್ಮ ಸರಕಾರವೇ ಅಧಿಕಾರಕ್ಕೆ ಬಂದಿರುವುದರಿಂದ ಬೆಳಕ, ಶಿರಾಲಿ, ಮಂಕಿ ಪ್ರದೇಶಗಳ ಪೈಕಿ ಒಂದು ಕಡೆ ಕಾಳಜಿ ಕೇಂದ್ರವನ್ನು ನಿರ್ಮಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಸರಕಾರಿ ಆಸ್ಪತ್ರೆಯಲ್ಲಿ 100ರಷ್ಟು ಒಳರೋಗಿಗಳು ಇರುತ್ತಿದ್ದು, ಆಸ್ಪತ್ರೆಗೆ ಪೊಲೀಸ್ ರಕ್ಷಣೆ ಅತ್ಯಗತ್ಯವಾಗಿದೆ. ಪ್ರತಿ 8 ಗಂಟೆಯ ಪಾಳೆಯಂತೆ ಪೊಲೀಸ್ ಕಾವಲು ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಭಟ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಭಟ್ಕಳಕ್ಕೆ ಹೆಚ್ಚಿನ ತಜ್ಞ ವೈದ್ಯರ ನೇಮಕಾತಿ ಮಾಡಿಕೊಳ್ಳುವಂತೆ ಸಭೆಯಲ್ಲಿ ಆಗ್ರಹ ಕೇಳಿ ಬಂತು.
ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ ಇದರಿಂದ ಚಿಕಿತ್ಸೆಗೆ ತೊಡಕು ಉಂಟಾಗಿದೆ ಎಂದು ಆರೋಗ್ಯ ಕೇಂದ್ರದ ಡಾ.ಬಾಲಚಂದ್ರ ಮೇಸ್ತ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ, ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನನ್ನ ಶಾಸಕತ್ವದ ಅವಧಿಯಲ್ಲಿ ಸುಧಾರಣೆ ಕಂಡಿತ್ತು. ಇದೀಗ ಆಸ್ಪತ್ರೆ ಸೋರುತ್ತಿರುವುದು ಬೇಸರ ತ0ದಿದೆ. ಜಿಲ್ಲಾ ಪಂಚಾಯತ ಇಲಾಖೆಯ ವತಿಯಿಂದ ಮೇಲ್ಬಾವಣಿ ದುರಸ್ತಿ ಮಾಡಿ ಕೊಡುತ್ತೇವೆ ಎಂದರು.
ಮುರುಡೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ನೀರಿನ ಪೂರೈಕೆ ಫೆಬ್ರುವರಿ ತಿಂಗಳಿನಿಂದಲೇ ಸ್ಥಗಿತಗೊಂಡಿದೆ.
ಪಕ್ಕದ ಹಾಸ್ಟೆಲ್‌ನ ನೀರನ್ನು ಉಪ
ಯೋಗಿಸಿಕೊಳ್ಳಲಾಗುತ್ತಿದೆಯ ಅನಾದರೂ ಆಸ್ಪತ್ರೆಗೆ ಸಾಲುತ್ತಿಲ್ಲ. ಆಸ್ಪತ್ರೆಯ ಮುಂಭಾಗದಲ್ಲಿ ಹೊಡೆಸಲಾದ ಬೋರ್‌ನಲ್ಲಿ ನೀರು ಬಾರದೇ ವ್ಯರ್ಥವಾಗಿದೆ.ಆದರೆ ಆಸ್ಪತ್ರೆಯ ಹಿಂಭಾಗದಲ್ಲಿ ಬೋರ್ ಹೊಡೆದರೆ ನನೀರು ಲಭ್ಯವಾಗುವ ಸಾಧ್ಯತೆ ಹೆಚ್ಚಿದ.
ಈ ಬಗ್ಗೆ ನೆರವು ನೀಡುವಂತೆ ಮುರುಡೇಶ್ವರ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರಿಯಾ ಸಚಿವರ ಗಮನಕ್ಕೆ ತಂದರು. ಮುರುಡೇಶ್ವರ ಆಸ್ಪತ್ರೆಯು ಮಾವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿದೆ. ಆದರೆ ಆಸ್ಪತ್ರೆಯ ಕಾರ್ಯವ್ಯಾಪ್ತಿ ಮಾವಳ್ಳಿ2 ಗ್ರಾಮ ಪಂಚಾಯತಕ್ಕೆ ಸಂಬಂಧಿಸಿದ್ದು, ಆಸ್ಪತ್ರೆಯಲ್ಲಿ ಏನೇ ಸಣ್ಣಪುಟ್ಟ ಸಮಸ್ಯೆ ಪರಿಹಾರ ಅಥವಾ ಸಣ್ಣಪಟ್ಟಿ ಕಾಮಗಾರಿ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ನಾಯಿ ಸತ್ತು ಬಿದ್ದರೂ ವಿಲೇವಾರಿ ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಎಂದು ವೈದ್ಯ ಡಾ.ಪ್ರಿಯಾ ಅಳಲನ್ನು ತೋಡಿಕೊಂಡರು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ಸಚಿವರು ಸೂಚನೆ ನೀಡಿದರು. ಎಂಡೋಸಲ್ಫಾನ್ ಪೀಡಿತರಿಗೆ ವಾಹನ ಹಾಗೂ ಅಗತ್ಯ ಸಲಕರಣೆಗಳನ್ನು ಸಚಿವರು ನೀಡಿದರು.
ಸಭೆಯಲ್ಲಿ ಡಿವಾಯ್ ಎಸ್ಪಿ ಶ್ರೀಕಾಂತ, ತಹಸೀಲ್ದಾರ ತಿಪ್ಪೇಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ, ಚಿಕ್ಕನಮನೆ, ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ಡಾ.ಸತೀಶ ಮೊದಲಾದವರು ಉಪಸ್ಥಿತರಿದ್ದರು.