ಭಟ್ಕಳ: ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಅಸ್ತಿ ಪಾಸ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಭಟ್ಕಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಶೆಟ್ಟಿಗೆ ಮುಖ್ಯಮಂತ್ರಿ ಬಂಗಾರದ ಪದಕವನ್ನು ಸರಕಾರ ಘೋಷಿಸಿದೆ.
ರಮೇಶ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು 1992 ರಲ್ಲಿ ಇಲಾಖೆಗೆ ಸೇರಿ ಬೆಂಗಳೂರಿನಲ್ಲಿ ತರಬೇತಿ ಮುಗಿಸಿದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಪದನ್ನೊತಿ ಹೊಂದಿ ಕದ್ರಿ-ಮಂಗಳೂರು ಶಿವಮೊಗ್ಗ ಮಲ್ಪೆ ಅಗ್ನಿಶಾಮಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2016 ರಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ವರ್ಗಾವಣೆಗೊಂಡು ಪ್ರಸ್ತುತ ಭಟ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭಟ್ಕಳದಲ್ಲಿ ಎಲ್ಲೇ ಪ್ರಕೃತಿ ವಿಕೋಪ ಉಂಟಾಗಲಿ,ಬೆಂಕಿ ಅವಘಡವಾಗಲಿ ತಮ್ಮ ಸಿಬ್ಬಂಧಿಗಳೊಂದಿಗೆ ಮೊದಲು ಹಾಜರಿದ್ದು ಸಂಭವಿತ ಅನಾಹುತ ವನ್ನು ತಪ್ಪಿಸುವಲ್ಲಿ ಶ್ರಮಿಸುತ್ತಿರುವ ಶೆಟ್ಟಿ, ಸಾರ್ವಜನಿಕರಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಶಾಲಾ ಮಕ್ಕಳಿಗೆ ಸುರಕ್ಷತೆಯ ಕುರಿತಂತೆ ಪಾಠ ಮಾಡುವ ಇವರು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅಗ್ನಿ ಅನಾಹುತ ಸಂಭವಿಸಿದಾಗ ಯಾವ ರೀತಿ ತಮ್ಮನ್ನು ಸುರಕ್ಷಿತಗೊಳಿಸಿಕೊಳ್ಳಬಹುದೆಂಬ ಕುರಿತು ಪ್ರಾತ್ಯಾಕ್ಷಿಕತೆಯನ್ನು ನೀಡುತ್ತ ಬಂದಿದ್ದಾರೆ.
ಸದಾ ಸಾರ್ವಜನಿಕರೊಂದಿಗೆ ಬೆರೆತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ಇವರಿಗೆ ಸರ್ಕಾರ ಮುಖ್ಯಮಂತ್ರಿ ಬಂಗಾರದ ಪದಕ ನೀಡಿ ಗೌರವಿಸಿದ್ದು ಅತ್ಯಂತ ಸೂಕ್ತವಾಗಿದೆ ಎಂಬ ಶ್ಲಾಘನೀಯ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.