ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಣಿಪಾಲ ಟ್ಯಾಪ್ಮಿಯಲ್ಲಿ ಜ್ಞಾನ ಕೇಂದ್ರದ ಉದ್ಘಾಟನೆ

ಮಣಿಪಾಲ ಟ್ಯಾಪ್ಮಿಯಲ್ಲಿ ಜ್ಞಾನ ಕೇಂದ್ರದ ಉದ್ಘಾಟನೆ

Wed, 04 Nov 2009 03:07:00  Office Staff   S.O. News Service
ಮಣಿಪಾಲ, ನ.3: ಇಲ್ಲಿನ 80 ಬಡಗುಬೆಟ್ಟಿನಲ್ಲಿರುವ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ)ಯಲ್ಲಿ ನೂತನ ಜ್ಞಾನ ಕೇಂದ್ರ  (ನಾಲೇಡ್ಜ್ ಸೆಂಟರ್)ವನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೇಕ್ ಸಿಂಗ್ ಅಹ್ಲುವಾಲಿಯಾ ಮಂಗಳವಾರ ಉದ್ಘಾಟಿಸಿದರು.
4-mnp2.jpg

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯಗಳು ಪ್ರಧಾನ ಪಾತ್ರ ವಹಿಸುತಿದ್ದು, ಸುಸ್ಥಿತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ, ವಿದ್ಯುತ್, ಕುಡಿಯುವ ನೀರು ಹಾಗೂ ರೈಲ್ವೆ ಸೌಕರ್ಯವನ್ನು ಒದಗಿಸುವುದು ಸರಕಾರಕ್ಕೆ ಮಹತ್ತರ ಸವಾಲಾಗಿ ಪರಿಣಮಿಸಿದೆ ಎಂದರು.


ನಗರ ಪ್ರದೇಶಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸವಾಲಾಗಿದ್ದು, ಇದರ ನಿಧಾನಗತಿಯ ಪ್ರಗತಿಯಿಂದಾಗಿ ಈಗಲೂ ಶೇ.೩೦ರಷ್ಟು ಜನರು ಮಾತ್ರ ನಗರ ಪ್ರದೇಶಗಳಲ್ಲಿ ವಾಸಿಸುತಿದ್ದಾರೆ. ಈ ಸವಾಲುಗಳನ್ನು ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಹೆಚ್ಚು ಮುತುವರ್ಜಿಯಿಂದ ಎದುರಿಸಬೇಕಾಗಿದ್ದು, ಮೂಲಸೌಕರ್ಯಗಳನ್ನು ಉತ್ತಮ ಪಡಿಸಬೇಕಾಗಿದೆ ಎಂದು ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದರು. 

ಭಾರತದ ಆರ್ಥಿಕ ಪ್ರಗತಿಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದ್ದು, ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.೨೦ಕ್ಕಿಂತಲೂ ಕಡಿಮೆ. ಆದರೆ ದೇಶದ ಒಟ್ಟು ಜನಸಂಖ್ಯೆಯ ಶೇ.೫೦ರಷ್ಟು ಮಂದಿ ಈಗಲೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ತಾರತಮ್ಯವನ್ನು ಮೊದಲು ಸರಿಪಡಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಅಹ್ಲುವಾಲಿಯಾ ನುಡಿದರು.
4-mnp3.jpg
ದೇಶದಲ್ಲಿ ಕೃಷಿಯಾಧಾರಿತ ಚಟುವಟಿಕೆಗಳಲ್ಲಿ ಶೇ.೧೦೦ರಷ್ಟು ಹೆಚ್ಚಳವಾಗಬೇಕು. ಇದಕ್ಕೆ ಕೃಷಿ ಹೆಚ್ಚು ಹೆಚ್ಚು ಆಧುನೀಕರಣಗೊಳ್ಳಬೇಕಾಗಿದೆ. ಇದಕ್ಕೆ ಭಾರೀ ಆರ್ಥಿಕ ಸಹಾಯದ ಅಗತ್ಯವಿದೆ. ದೇಶದ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯವಾಗಬೇಕಿದ್ದರೆ, ಅದಕ್ಕೆ ಆರ್ಥಿಕ ಬೆಂಬಲವೂ ಸಿಗಲೇಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ವಿಚಾರ ಸಂಕಿರಣ: ಇದೇ ಸಂದರ್ಭದಲ್ಲಿ ಟ್ಯಾಪ್ಮಿ ‘ಭಾರತದ ಮುಂದಿನ ಹಂತದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕಿಂಗ್ ಮತ್ತು ಆರ್ಥಿಕ ಸಂಸ್ಥೆಗಳ ಪಾತ್ರದ ಮರುನಿರೂಪಣೆ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಹೊಸದಿಲ್ಲಿಯ ಐಸಿ‌ಆರ್‌ಐ‌ಇ‌ಆರ್‌ನ ಅಧ್ಯಕ್ಷೆ ಡಾ.ಇಷಾರ್ ಜಡ್ಜ್ ಅಹ್ಲುವಾಲಿಯ ಅವರು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ವಾರ್ಷಿಕ ೯ ಶೇ.ಆರ್ಥಿಕ ಪ್ರಗತಿಯ ನಿರಂತರ ನಿರ್ವಹಣೆಯನ್ನು ಬಹಳಷ್ಟು ಮಂದಿ ಪ್ರಶ್ನಿಸುತಿದ್ದಾರೆ. ಇದಕ್ಕೆ ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯ, ಕುಶಲಕರ್ಮಿಗಳ ಅಲಭ್ಯತೆ, ನಿಂತನೀರಾಗಿರುವ ಕೃಷಿ ಕ್ಷೇತ್ರ ಹಾಗೂ ರಿಯಲ್ ಎಸ್ಟೇಟ್ ಎಂಬ ಗುಳ್ಳೆಯನ್ನು ಉದಾಹರಣೆಯಾಗಿ ನೀಡುತ್ತಾರೆ. ಇದರಿಂದಾಗಿಯೇ ಕಳೆದ ವರ್ಷ ಕಂಡುಬಂದ ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ಭಾರತದ ಆರ್ಥಿಕ ರಂಗದ ಮೇಲೂ ಉಂಟಾಯಿತು ಎಂದವರು ಅಭಿಪ್ರಾಯಪಟ್ಟರು.

ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಹಾಗೂ ಟ್ಯಾಪ್ಮಿ ಆಡಳಿತ ಮಂಡಳಿಯ ಡಾ.ಎಚ್.ಎಸ್.ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ಯಾಪ್ಮಿಯ ನಿರ್ದೇಶಕ ಡಾ.ಸಜಿ ಗೋಪಿನಾಥ್ ಸ್ವಾಗತಿಸಿದರೆ, ಟ್ಯಾಪ್ಮಿಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ರಾಮದಾಸ ಎಂ.ಪೈ ಪ್ರಾಸ್ತಾಕಿ ಮಾತುಗಳನ್ನಾಡಿದರು. ಪ್ರೊ.ರಾಜೀವ್ ಶಾ ವಂದಿಸಿದರೆ, ನಟರಾಜನ್ ಕಾರ್ಯಕ್ರಮ ನಿರ್ವಹಿಸಿದರು.

Share: