ಕಾರ್ಕಳ, ಮಾರ್ಚ್ 2: ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.
ಶಾಸಕ ಎಚ್.ಗೋಪಾಲ ಭಂಡಾರಿಯವರು ಸುಮಾರು ೧೩ಲಕ್ಷ ರೂ. ವೆಚ್ಚದ ಸಮೂದಾಯ ಭವನ, ಲಿಲ್ಲಾ ಪಂಚಾಯತ್ ನೆರವಿನಿಂದ ಕುಕ್ಕುಜೆಯಲ್ಲಿ ನಿರ್ಮಾಣವಾದ ೨.೫ಲಕ್ಷ ರೂ. ವೆಚ್ಚದ ಕಿರುನೀರಾವರಿ ಯೋಜನೆ, ನಬಾರ್ಡ ನೆರವಿನಿಂದ ಸುಮಾರು ೨೫ಲಕ್ಷ ರೂ. ಎಳ್ಳಾರೆ-ಕೆರಿಂಜೆ ರಸ್ತೆ ಡಾಮರೀಕರಣ ಮತ್ತು ಎಳ್ಳಾರೆಯಲ್ಲಿ ನ್ಯಾಯಬೆಲೆ ಅಂಗಡಿ ಮೊದಲಾದ ೫೦ಲಕ್ಷ ರೂ.ಗಳ ಕಾಮಗಾರಿಗಳನ್ನು ಉದ್ಘಾಟಿಸಿದರು.
ಸುವರ್ಣಗ್ರಾಮ ಯೋಜನೆಯಲ್ಲಿ ೧ಕೋಟಿ ರೂ.ಗಳ ಕಾಮಗಾರಿ ಮಂಜೂರು ಆಗಿದ್ದು,ಪ್ರಗತಿಯಲ್ಲಿದೆ. ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಜಿ.ಪಂ.ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಶಾಸಕ ಸುನಿಲ್ ಕುಮಾರ್, ಜಿ.ಪಂ.ಸದಸ್ಯೆ ಸುನಂದ ಎಸ್.ಕೋಟ್ಯಾನ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ರಾಜೇಂದ್ರ ಬೇಕಲ್, ಪಂಚಾಯತ್ ರಾಜ್ನ ಸಹಾಯಕ ಇಂಜಿನಿಯರ್ ಸತ್ಯೇಂದ್ರ ಸಾಲಿಯಾನ್, ಹರೀಶ್ ಪೂಜಾರಿ,ನಂದಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.