ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯರಾದ ಪುರಸಭಾ ಉಪಾಧ್ಯಕ್ಷ ಕೈಸ ಮೊತೇಶಮ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾಯಿ ಅಧ್ಯಕ್ಷ ಇಮ್‌ಶಾದ್, ಸದಸ್ಯರಾದ ಅಬ್ದುಲ್ ರವೂಫ್ ನಾಯಿತೇ, ಅಲ್ತಾಫ್ ಖರೂರಿ, ನಾಮ ನಿರ್ದೇಶನ ಸದಸ್ಯ ಶ್ರೀಕಾಂತ ನಾಯ್ಕ ಮತ್ತಿತರರು, ಪುರಸಭಾ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಹಳೆಯ ಚೇಂಬರ್ ಬದಲಾವಣೆಗೆ ಗುತ್ತಿಗೆದಾರ ಕಂಪನಿ ಆಸಕ್ತಿ ತೋರಿಸುತ್ತಿಲ್ಲ. ಹೊಸ ಒಳಚರಂಡಿ ಕಾಮಗಾರಿಯ ಕಾರಣಕ್ಕೆ ಅಲ್ಲಲ್ಲಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ರಸ್ತೆಯುದ್ದಕ್ಕೂ ಹೊಂಡಗಳೇ ತುಂಬಿಕೊಂಡಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಕೆಲವು ಕಡೆ ಈ ಹಿಂದೆ ನಡೆಸಲಾಗಿದ್ದ ಅರ್ಧಂಬರ್ಧ ಕಾಮಗಾರಿಯನ್ನು ಈಗ ಪುನರಾರಂಭಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ, ಸಂಗ್ರಹ ಘಟಕ ಕಾಮಗಾರಿ ಕೈಗೊಳ್ಳದೇ ಕೇವಲ ಚೇಂಬರ್ ಅಳವಡಿಸುತ್ತಿರುವುದು ಕೇವಲ ಬಿಲ್ ಪಾವತಿಗಾಗಿ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವರಾಮ ನಾಯ್ಕ, 2018ರಲ್ಲಿ ಮಂಜೂರಾದ ಕಾಮಗಾರಿ 18 ತಿಂಗಳ ನಂತರ ಅನುಷ್ಠಾನ ಮಾಡಲಾಗುತ್ತಿದೆ. ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅಡೆತಡೆ ಮಾಡಿದರೆ ಪುರಸಭೆಯೇ ನಷ್ಟ ಅನುಭವಿಸಬೇಕಾಗುತ್ತದೆ. ಸರಿಪಡಿಸಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರೆ, ಖಂಡಿತವಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಪ್ರತಿ ತಿಂಗಳು 60 ಹಳೆಯ ಚೇಂಬಗಳನ್ನು ಬದಲಾವಣೆ ಮಾಡಲಾಗುವುದು. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯರು, ಪುರಸಭಾ ವ್ಯಾಪ್ತಿಯಲ್ಲಿನ ಹಳೇ ಚೇಂಬರಗಳನ್ನು ಮೊದಲು ಬದಲಾವಣೆ ಮಾಡಿ, ಅದರ ಜೊತೆಗೆ ಹಾಳಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಿ, ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕಾಮಗಾರಿ ಹಾಗೂ ಅದರ ಗುಣಮಟ್ಟದಲ್ಲಿ ಯಾವುದೇ ಪ್ರಗತಿ ಕಾಣದಿದ್ದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಾಕೀತು ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಭಿಯಂತರ ಶಿವರಾಮ, ಹಳೇ ಚೇಂಬರ ಬದಲಾವಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಗೂ ಕಟ್ಟಡ ಸಾಮಾಗಿ ಎಸೆಯವವರ ಮೇಲೆ ಸೂಕ್ತ ದಂಡ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಗಿಡಗಳನ್ನು ಕತ್ತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಹಿರಿಯ ನಾಗರಿಕರು ಹಾಗೂ ವಿಕಲನಚೇತರು ಪುರಸಭೆ ಕಚೇರಿಗೆ ಮೇಲೆ ಬರಲು ಅನುಕೂಲವಾಗುವಂತೆ ಅಪ್ಪ ಅಳವಡಿಸುವ ಬಗ್ಗೆ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ ಸದಸ್ಯರ ಗಮನಕ್ಕೆ ತಂದರು. ಮುಖ್ಯಾಧಿಕಾರಿ ಕೆ.ಎಂ.ಸುರೇಶ, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತ್ರೀ, ಅಭಿಯಂತರ ಉಮೇಶ ಮಡಿವಾಳ, ಆರೋಗ್ಯಾಧಿಕಾರಿ ಸೋಜಿಯಾ ಸಭೆಯಲ್ಲಿ ಉಪಸ್ಥಿತರಿದ್ದರು