ಭಟ್ಕಳ, ಜನವರಿ 27: ತಾಲೂಕಿನ ಮುಂಡಳ್ಳಿ, ತೆರನಮಕ್ಕಿಯಲ್ಲಿ ಕಿಡಿಗೇಡಿಗಳು ನಡೆಸಿರುವ ಕೃತ್ಯವನ್ನು ಖಂಡಿಸಿ ತಾಲೂಕಿನ ಕ್ರೈಸ್ತ ಸಮುದಾಯದ ಮುಖಂಡರು ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
2009ರ ಸೆಪ್ಟೆಂಬರಿನಲ್ಲಿ ಮಾವಿನ ಕುರ್ವೆ ಪಂಚಾಯತ ವ್ಯಾಪ್ತಿಯಲ್ಲಿ ಶಿಲುಬೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಯಾರನ್ನೂ ದೂಷಿಸದೇ ಶಿಲಬೆಯ ಪುನರ್ ಪ್ರತಿಷ್ಟಾಪನೆ ನಡೆಸಲಾಗಿದೆ. ಆದರೆ ಶ್ರೀರಾಮ ಸೇನಾ ಕಾರ್ಯಕರ್ತರು ಎನಿಸಿಕೊಂಡ ಕೆಲವರು ಜನೇವರಿ ೧೯ರಂದು ಶಂಕರ ಸಂಕಪ್ಪ ನಾಯ್ಕನ ನೇತೃತ್ವದಲ್ಲಿ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಹಿಂದುಗಳ ಮೇಲೆ ಹಲ್ಲೆ ನಡೆಯುತ್ತಿವೆ. ಇನ್ನು ಮುಂದೆ ಆಸ್ಟ್ರೇಲಿಯಾದಲ್ಲಿ ಒಬ್ಬನೇ ಒಬ್ಬ ಹಿಂದೂವಿನ ಮೇಲೆ ಹಲ್ಲೆ ನಡೆದರೂ ಭಟ್ಕಳದಲ್ಲಿ ಒಂದೇ ಒಂದು ಚರ್ಚ ಇಲ್ಲದ ಹಾಗೆ ದಾಳಿ ಮಾಡಿ ನಾಶಪಡಿಸುತ್ತೇವೆ. ಆಸ್ಟ್ರೇಲಿಯಾ ಪ್ರಜೆಯನ್ನು ಕಂಡರೆ ಕೊಲೆಗೈಯುತ್ತೇವೆ ಎಂದು ಲಿಖಿತ ಮನವಿ ಸಲ್ಲಿಸಿದ ನಾಲ್ಕು ದಿನಗಳಲ್ಲಿ ಮುಂಡಳ್ಳಿಯ ಕ್ರೈಸ್ತ ಶಿಲುಬೆಯನ್ನು ಭಾಗಶಃ ಹಾನಿಗೊಳಿಸಲಾಗಿದೆ. ತಾಲೂಕಿನ ತೆರನಮಕ್ಕಿಯ ಮೇರಿ ಮಾತೆಯ ಪ್ರತಿಮೆಗೆ ಕಲ್ಲು ಹೊಡೆದು ಗ್ಲಾಸುಗಳನ್ನು ಪುಡಿಗೈಯಲಾಗಿದೆ ಎಂದಿರುವ ಅವರು ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕಚಂದ್ರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಂಡಳ್ಳಿ ಚರ್ಚಿನ ಧರ್ಮಗುರು ಫಾದರ್ ಆಲ್ಫಾನ್ಸೋ, ಜಾನ್ ಎಫ್. ಗೋಮ್ಸ, ನ್ಯಾಯವಾದಿ ಸೈಮಂಡ್, ಡುಮಿಂಗ್, ಬಸ್ತ್ಯಾಂವ ರುಜಾರ ಡಿ,ಸೋಜಾ, ಮಾರ್‍ಯನ್ ಎಸ್, ಬಸ್ತ್ಯಾಂವ ಫ್ರಾನ್ಸಿಸ್, ಫ್ರಾನ್ಸಿಸ್ ಬಿ. ಡಿಕೋಸ್ತಾ, ಫೆಟ್ರಿಕ್ , ಸಿಸ್ಟರ್ ಲೂರಾ ಮುಂತಾದವರು ಉಪಸ್ಥಿತರಿದ್ದರು.