ಉಜಿರೆ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಿದ ಆನೆಯ ಹಸ್ತಾಂತರ ಮತ್ತು ನಾಮಕರಣ ಕಾರ್ಯಕ್ರಮ ಧರ್ಮಸ್ಥಳದಲ್ಲಿ ಭಾನುವಾರ ನಡೆಯಿತು.
ದಾನವಾಗಿ ನೀಡಿದ ಮರಿ ಆನೆಗೆ `ಲಕ್ಷ್ಮೀ' ಎಂದು ನಾಮಕರಣ ಮಾಡಲಾಯಿತು. ಶಾಸಕ ಆನಂದ್ ಸಿಂಗ್ ಹಾಗೂ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಮರಿ ಆನೆಯನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಾ| ಡಿ. ವೀರೇಂದ್ರ ಹೆಗ್ಗಡೆ, ಕ್ಷೇತ್ರದ ಇತಿಹಾಸದಲ್ಲಿ ಗಜದಾನ ಮೊದಲ ಬಾರಿಗೆ ಆಗುತ್ತಿದೆ. ಶ್ರೀಕ್ಷೇತ್ರದ ಉತ್ಸವಗಳಲ್ಲಿ ಗಜಸೇವೆ, ದೀಪಾವಳಿ ಹಬ್ಬಗಳಂದು ಗಜಪೂಜೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಈ ರೀತಿ ಗಜರಕ್ಷಣೆ ನಡೆದುಕೊಂಡು ಬಂದಿದೆ ಎಂದರು.
ಮಾನವಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗಬೇಕಿದೆ. ಪ್ರಾಣಿಗಳ ಮೇಲೆ ಹಿಂಸೆ ಹೆಚ್ಚುತ್ತಿದೆ ಎಂಬ ಕಾರಣಕ್ಕಾಗಿ ಸರ್ಕಾರ ಪ್ರಾಣಿಗಳನ್ನು ಸಾಕಲು ಅನುಮತಿ ನೀಡುತ್ತಿಲ್ಲ. ಆದರೆ ಪ್ರೀತಿ ಯಿಂದ ಸಾಕುವವರಿಗೆ ಅವಕಾಶ ನೀಡಬೇಕು ಎಂದು ಡಾ| ಹೆಗ್ಗಡೆ ಹೇಳಿದರು.
-ಪತ್ನಿಯ ಹೆಸರಲ್ಲಿ: ಶಾಸಕ ಆನಂದ್ ಸಿಂಗ್ ಮಾತನಾಡಿ, ಭಗವಂತ ಸೇವೆಗೆ ಇದೊಂದು ಅವಕಾಶವಾಗಿದ್ದು, ಪತ್ನಿಯ ಹೆಸರಿನಲ್ಲಿ ಈ ಆನೆಯನ್ನು ಕ್ಷೇತ್ರಕ್ಕೆ ನೀಡುತ್ತಿರುವುದಾಗಿ ತಿಳಿಸಿದ ರು. ಆನೆಯ ಸಾಕಾಣಿಕಾ ವೆಚ್ಚವಾಗಿ ೨ ಲಕ್ಷ ರು. ಚೆಕ್ಕನ್ನು ಆನಂದ ಸಿಂಗ್ ಡಾ| ಹೆಗ್ಗಡೆಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಆನಂದ ಸಿಂಗ್‌ರ ತಂದೆ ಪೃಥ್ವಿರಾಜ್‌ಸಿಂಗ್, ಪತ್ನಿ ಲಕ್ಷ್ಮೀ, ಮಕ್ಕಳು ಹಾಗೂ ಕುಟುಂಬದವರು ಇದ್ದರು. ಈ ಹಿಂದೆ ಆನಂದ್ ಸಿಂಗ್ ತಿರುಪತಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆನೆಯನ್ನು ದಾನವಾಗಿ ನೀಡಿದ್ದನ್ನು ಸ್ಮರಿಸಬಹುದು.
ಅಸ್ಸಾನಿಂದ ಪರವಾನಗಿ
ಆನೆಯ ದಾನಿ ಆನಂದ ಸಿಂಗ್ ಅವರು ಆನೆಯನ್ನು ಅಸ್ಸಾಂನ ಅರಣ್ಯ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದು ಧರ್ಮಸ್ಥಳಕ್ಕೆ ತರಿಸಿದ್ದಾರೆ. ಈ ಕುರಿತ ದಾಖಲೆಗಳನ್ನು ಸಿಂಗ್ ಅವರು ಹೊಂದಿದ್ದಾರೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ. ಆನೆಯ ಎತ್ತರ ೧.೭೦ ಮೀ. ಎತ್ತರ ವಿದ್ದು, ೨೦೦೪ರ ಜ. ೧೩ರಂದು ಜನಿಸಿದ್ದು, ೬ ವರ್ಷ ಪ್ರಾಯವಾಗಿದೆ.
ಸೌಜನ್ಯ: ಕನ್ನಡಪ್ರಭ