ಮಂಜೇಶ್ವರ, ಫೆಬ್ರವರಿ 4: ಕುಂಬಳೆ ಗ್ರಾಮ ಪಂಚಾಯತಿನಲ್ಲಿ ನಡೆದ ಇ.ಎಂ.ಎಸ್.ಭವನ ಯೋಜಣೆ ಮತ್ತು ಬಿಪಿಎಲ್ ಪಟ್ಟಿ ಬಗ್ಗೆ ಹಲವು ಸಂಘಟನೆಗಳು ಹಾಗೂ ಇತರ ರಾಜಕೀಯ ನೇತಾರರು ಆಡಳಿತ ಸಮಿತಿಗೆದುರಾಗಿ ನಡೆಸುತ್ತಿರುವ ಸುಳ್ಳಾರೋಪಗಳಿಗೆ ಯಾವುದೇ ಹುರುಳಿಲ್ಲವೆಂದು ಕುಂಬಳೆ ಗ್ರಾಮ ಪಂ. ಅಧ್ಯಕ್ಶರಾದ ಎಂ.ಅಬ್ಬಾಸ್ ರವರು ಪತ್ರಿಕಾ ಗೋಷ್ಟಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳ ಪಟ್ಟಿಯನ್ನು ಕುಟುಂಬಶ್ರೀ ಕಾರ್ಯಕರ್ತರ ಮೂಲಕ ಸರ್ವೇ ಮಾಡಲಾಗಿದ್ದು ಇದರಲ್ಲಿ ನ್ಯೂನತೆಗಳು ಇದೆಯೆಂಬ ಆರೋಪದಲ್ಲಿ ಸರಕಾರವು ಆ ಪಟ್ಟಿಯನ್ನು ತಳ್ಳಿ ಹಾಕಿತ್ತು.ತದ ನಂತರ ಕೇರಳ ಸರಕಾರದ ಗ್ರಾಮಾಭಿವೃದ್ದಿ ಇಲಾಖೆಯ ಮೂಲಕ ಶಾಲಾ ಅಧ್ಯಾಪಕರ ಮೂಲಕ ಬಿ.ಪಿ.ಎಲ್ ಸರ್ವೇ ನಡೆಸಲಾಯ್ತು.ಸಂಪೂರ್ಣ ಸರಕಾರದ ಹೊಣೆಗಾರಿಕೆಯಿಂದ ನಡೆಸಿದ ಈ ಸರ್ವೇಯಲ್ಲಿ ಪಂಚಾಯತನ್ನು ಹೊರಗಿಡಲಾಗಿದೆ.ಇದರಲ್ಲಿ ಏನಾದರೂ ಲೋಪ ದೋಷಗಳಿದ್ದರೆ ಅದಕ್ಕೆ ಸರಕಾರವೇ ಹೊಣೆ ಹೊರತು ಪಂಚಾಯತ್ ಆಡಳಿತ ಸಮಿತಿ ವಿರುದ್ದ ಆರೋಪ ಹೊರಿಸುವುದು ಸರಿಯಲ್ಲವೆಂದು ಅಧ್ಯಕ್ಷರು ಹೇಳಿದರು.
ಅದೇ ರೀತಿ ಇ.ಎಂ.ಎಸ್.ಭವನ ಪದ್ದತಿಯಲ್ಲೂ ಸರಕಾರದ ಮಾನ ದಂಡಗಳನ್ನು ಅನುಸರಿಸಿಯೇ ಫಲಾನುಬವಿಗಳನ್ನು ಆರಿಸಲಾಗಿದೆ ಹೊರತು ಪಂಚಾಯತ್ ಆಡಳಿತ ಸಮಿತಿ ಇದಕ್ಕೆ ನೇರವಾಗಿ ಕೈಹಾಕಿಲ್ಲ.ಕುಂಬಳೆ ಪಂಚಾಯತಿನಲ್ಲಿ ಅರ್ಹ ಫಲಾನುಭವಿಗಳು ರೇಶನ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕಾಗಿ ವಿಫಲರಾಗುತಿದ್ದು ಸರಕಾರವು ಇ.ಎಂ.ಎಸ್ ಭವನ ಯೋಜಣೆಗಾಗಿ ದಿನಕ್ಕೊಂದರಂತೆ ಆದೇಶವನ್ನು ಹೊರಡಿಸಿ ಬಡವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ ಎಂದು ಅವರು ಆರೋಪಿಸಿದರು.ಸರಕಾರವು ಎಷ್ಟೋ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುವವರನ್ನು,ಲೈನ್ ಮನೆಗಳಲ್ಲಿ ವಾಸಿಸುವವರನ್ನು ಅವಿಭಕ್ತ ಕುಟುಂಬಗಳಲ್ಲಿ ವಾಸಿಸುತ್ತಿರುವ ಬಡವರನ್ನು ನಿರ್ಲಕ್ಷಿಸುತಿದ್ದು ಕೂಡಲೇ ಸರಕಾರವು ಈ ನಿಯಮಕ್ಕೆ ತಿದ್ದು ಪಡಿ ತಂದು ಅರ್ಹರಿಗೆ ಮನೆ ನಿರ್ಮಾನ ಸಹಾಯ ದೊರಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.ಪತ್ರಿಕಾ ಗೋಷ್ಟಿಯಲ್ಲಿ ಪಂ.ಉಪಾಧ್ಯಕ್ಷರಾದ ಕೇಶವ ಪ್ರಸಾದ್ ನಾಣಿಹಿತ್ತಿಲು,ಸ್ಥಾಯೀ ಸಮಿತಿ ಅಧ್ಯಕ್ಷ ಅಸ್ರಫ್ ಕೊಡ್ಯಮ್ಮೆ ಮೊದಲಾದವರು ಉಪಸ್ಥರಿದ್ದರು.
-ಆರಿಫ್ ಮಚ್ಚಂಪಾಡಿ, ಮಂಜೇಶ್ವರ