ಬೆಂಗಳೂರು, ಜನವರಿ ೨೯: ಭೂ ಪರಿವರ್ತನೆ ಮಾಡಲು ವಿಳಂಬಮಾಡಿದ ತುಮಕೂರು ವಿಧಾನಸಭಾ ಕ್ಷೇತ್ರದ ಶಾಸಕ ಸೊಗಡು ಶಿವಣ್ಣ, ತುಮಕೂರು ನಗರ ಸಭೆ ಅಧ್ಯಕ್ಷ ಹಾಗೂ ಆಯುಕ್ತರಿಗೆ ರಾಜ್ಯ ಹೈಕೋರ್ಟ್ ಶೋಕಾಸ್ ನೋಟೀಸ್ ನೀಡಿದೆ.
ನ್ಯಾಯಮೂರ್ತಿ ಶ್ರೀಧರ್ ರಾವ್, ನ್ಯಾಯಮೂರ್ತಿ ಸುಭಾಷ್ ಅಡಿ ಅವರಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ ಈ ನೋಟಿಸ್ ಜಾರಿ ಮಾಡಿದ್ದು, ತುಮಕೂರಿನ ಉಪ್ಪಾರಹಳ್ಳಿಯ ಸರ್ವೇ ನಂ. ೨೩ ರ ೯ ಎಕರೆ ಜಮೀನನ್ನು ಭೂಪರಿವರ್ತನೆ ಮಾಡಲು ವಿಳಂಬ ಮಾಡಿದ ಕಾರಣಕ್ಕಾಗಿ ನಗರ ಸಭೆ ಅಧ್ಯಕ್ಷ ಶ್ರೀಧರ ಮೂರ್ತಿ, ಆಯುಕ್ತ ಅಗಸ್ತಕುಮಾರ್ ಅವರಿಂದ ಸ್ಪಷ್ಟೀಕರಣ ಬಯಸಿದೆ.
ಬೆಂಗಳೂರಿನ ಟಿ. ದಾಸರಹಳ್ಳಿಯ ಮಂಜುನಾಥ್ ಪ್ಯಾಕೇಜಿಂಗ್ ಲಿಮಿಟೆಡ್ ಸಂಸ್ಧೆಯವರು ಉಪ್ಪಾರ ಹಳ್ಳಿಯಲ್ಲಿ ೯ ಎಕರೆ ಜಮೀನನ್ನು ಆಫೀಸರ್‍ಸ್ ಮಾಡೆಲ್ ಕಾಲೋನಿ ಮಾಡಲು ತುಮಕೂರು ನಗರ ಸಭೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಭೂಪರಿವರ್ತನೆಗೆ ವಿಳಂಬ ಮಾಡಿದ ಕಾರಣಕ್ಕಾಗಿ ಸಂಸ್ಧೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅವರ ಅರ್ಜಿಯನ್ನು ಪರಿಗಣಿಸಿ ವಿಲೇವಾರಿ ಮಾಡುವಂತೆ ಸೂಚಿಸಿತ್ತು.
ನಿಗಧಿತ ಕಾಲಾವಧಿ ಮೀರಿದರೂ ನಗರ ಸಭೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂಸ್ಧೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆಯನ್ನು ಅರ್ಜಿಯನ್ನು ಪರಿಗಣಿಸಿ, ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮೂವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.