ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಆಸ್ತಿ ವಿಷಯಕ್ಕೆ ಬಿತ್ತು ನಾಲ್ವರ ಹೆಣ:ಅನಾಥವಾದ ಇಬ್ಬರು ಮಕ್ಕಳು

ಭಟ್ಕಳ: ಆಸ್ತಿ ವಿಷಯಕ್ಕೆ ಬಿತ್ತು ನಾಲ್ವರ ಹೆಣ:ಅನಾಥವಾದ ಇಬ್ಬರು ಮಕ್ಕಳು

Sat, 25 Feb 2023 06:23:29  Office Staff   S O News

ಭಟ್ಕಳ : ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಡುವಳ್ಳಿ ನಿವಾಸಿ ಶಂಭು ವೆಂಕಟರಮಣ ಭಟ್ಟ (65), ಅವರ ಪತ್ನಿ ಮಾದೇವಿ ಶಂಭು ಭಟ್ಟ (58) ಅವರ ಪುತ್ರ ರಾಜೀವ ಶಂಭು ಭಟ್ಟ (40) ಹಾಗೂ ಸೊಸೆ ಕುಸುಮಾ ರಾಜೀವ ಭಟ್ಟ (32) ಮೃತರು.

ಮಧ್ಯಾಹ್ನದ ಸುಮಾರು ಹಾಡುವಳ್ಳಿಯ ತಮ್ಮ ಮನೆಯ ಸಮೀಪವೇ ನಾಲ್ವರು ಕೊಲೆಯಾಗಿ ಬಿದ್ದುಕೊಂಡಿದ್ದು ನಾಲ್ವರಿಗೂ ಕೂಡಾ ಮುಖ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಕತ್ತಿ ಅಥವಾ ತಲವಾರಿನಿಂದ ತೀವ್ರವಾಗಿ ಕಡಿದ ಗಾಯಗಳಾಗಿವೆ. ಮೂವರ ಹತ್ತಿರದಲ್ಲಿಯೇ ಬಿದ್ದುಕೊಂಡಿದ್ದರೆ ಶಂಭು ಭಟ್ಟರ ಶವ ಸ್ವಲ ದೂರದಲ್ಲಿ ಬಿದ್ದುಕೊಂಡಿದ್ದು ಕಂಡು ಬಂದಿದೆ. ಮೂವರನ್ನು ಹತ್ಯೆ ಮಾಡಿದನ್ನ ಕಂಡ ಇವರು ಓಡಿ ಹೋಗುವಾಗ ಕೊಲೆಗಾರ ಬೆನ್ನಟ್ಟಿ ಕೊಲೆ ಮಾಡಿದನೇ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರುವವರನ್ನು ಅಲ್ಲಿಯೇ ಕೊಚ್ಚಿ ಕೊಂದರೇ ಎನ್ನುವುದು ತಿಳಿಯ ಬೇಕಿದೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದ ದ್ವೇಷವೇ ಕೊಲೆಗೆ ಕಾರಣ ಎಂಬ ಸುದ್ದಿ ಸ್ಥಳದಿಂದ ಕೇಳಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದಲೇ ಗೊತ್ತಾಗಬೇಕಿದೆ.

ಶಂಭು ಭಟ್ಟ ಮತ್ತು ಅವರ ಮಗ ರಾಜೀವ ಭಟ್ಟ ಪೌರೋಹಿತ್ಯ ಮಾಡುತ್ತಿದ್ದು, ರಾಜೀವ ಭಟ್ಟ ಮಧ್ಯಾಹ್ನ ಭಟ್ಕಳ ಪಟ್ಟಣದ ಮನೆಯೊಂದಲ್ಲಿ ಪೂಜೆ ಮುಗಿಸಿ ಮನೆಗೆ ಹೋಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಉಳಿದವರಾದ ಶಂಭು ಭಟ್ಟ, ಅವರ ಪತ್ನಿ ಮಾದೇವಿ ಭಟ್ಟ ಮತ್ತು ಸೊಸೆ ಕುಸುಮಾ ಭಟ್ಟ ಅವರು ಮನೆಯಲ್ಲೇ ಇದ್ದರೆನ್ನಲಾಗಿದೆ.

ಸ್ಥಳದಲ್ಲಿನ ಭೀಕರ ದೃಶ್ಯ ಗಮನಿಸಿದರೆ ಎಂಥವರಿಗೂ ಭಯ ಹುಟ್ಟದೇ ಇರದು. ಹಾಡವಳ್ಳಿಯಲ್ಲಿ ಈ ಭೀಕರ ಕೃತ್ಯದಿಂದ ಆತಂಕದ ಛಾಯೆ ಮೂಡಿದ್ದು, ಘಟನೆ ನಡೆದ ಸ್ಥಳದಲ್ಲಿ ಶುಕ್ರವಾರ ಸಂಜೆ ನೂರಾರು ಜನರು ಜಮಾಯಿಸಿದ್ದರು. ಶುಕ್ರವಾರ ಸಂಜೆ ನಾಲ್ಕೂ ಜನರ ಮೃತದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ತಂದು ಇಡಲಾಗಿದೆ.

ಕೊಲೆ ಸಂದರ್ಭದಲ್ಲಿ ರಾಜೀವ ಭಟ್ಟರ ಮಗಳು ಶಾಲೆಗೆ ಹೋಗಿ ಪಕ್ಕದ ಮನೆಯಲ್ಲಿ ಬಂದು ಇದ್ದುದರಿಂದ ಮತ್ತು ಅವರ ಪುಟ್ಟ ಮಗ ಮನೆಯಲ್ಲೇ ಮಲಗಿ ನಿದ್ದೆ ಮಾಡುತ್ತಿದ್ದರಿಂದ  ಬದುಕುಳಿದಿದ್ದಾರೆ. ಇಲ್ಲದಿದ್ದಲ್ಲಿ ಇಬ್ಬರೂ ಮಕ್ಕಳೂ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು ಎಂದು ಸ್ಥಳದಲ್ಲಿ ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

ಯಾವುದೇ ಕನಿಕರ ಇಲ್ಲದೇ ಇಬ್ಬರು ಮಹಿಳೆಯರು ಸೇರಿದಂತೆ ಮತ್ತಿಬ್ಬರನ್ನು ಕೊಚ್ಚಿ ಕೊಂದಿರುವುದಕ್ಕೆ ಹಾಡವಳ್ಳಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ದ್ವೇಷವಿದ್ದರೂ ಕೊಲೆ ಪರಿಹಾರವೇ? ಎಂದು ಜನರು ಆಕ್ರೋಶದಿಂದ ಮಾತನಾಡುತ್ತಿರುವುದು ಕೇಳಿ ಬಂತು.

ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಆಸ್ತಿ ಸಂಬಂಧಿತ ದ್ವೇಷವೇ ಕೊಲೆಗೆ ಕಾರಣ ಎನ್ನುವುದರ ಬಗ್ಗೆಯೇ ತನಿಖೆ ಆರಂಭಿಸಿರುವ ಪೊಲೀಸ್ ಇಲಾಖೆ ಕೊಲೆಗಾರ ಸ್ಥಳದಲ್ಲಿ ಏನಾದರೂ ಪುರಾವೆ ಬಿಟ್ಟಿರಬಹುದೇ. ಕೊಲೆಗಾರರು ಶುಕ್ರವಾರ ಮಧ್ಯಾಹ್ನ ಶಂಭು ಭಟ್ಟರ ಮನೆಗೆ ಬಂದಿರುವುದನ್ನು ಯಾರಾದರೂ ನೋಡಿದ್ದಾರೋ ಎನ್ನುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪೊಲೀಸರು  ಪರಿಶೀಲಿಸುತ್ತಿದ್ದಾರೆ.

ಕೊಲೆಗೆ ಸಂಬಂಧ ಪಟ್ಟಂತೆ ಈಗಾಗಲೇ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿದ್ದಾರೆ ಎನ್ನಲಾಗಿದೆ.


Share: