ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ : ನಿವೃತ್ತನಾದ ವೀರಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಜನತೆ.

ಭಟ್ಕಳ : ನಿವೃತ್ತನಾದ ವೀರಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಜನತೆ.

Wed, 04 Jan 2023 05:49:41  Office Staff   SO News

ಭಟ್ಕಳ : ಭಾರತೀಯ ಸೇನೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ತಾಲ್ಲೂಕಿನ ಬೆಳಕೆ ಗ್ರಾಮದ ಗಣಪತಿ ಮಂಜುನಾಥ ಮೊಗೇರ ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದರು. ಅವರನ್‌ನ ಭಟ್ಕಳ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.

ಭಟ್ಕಳದ ಸಂಶುದ್ದಿನ್ ವೃತ್ತದಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು ಸ್ವಾಗತಿಸಿದರು‌. ಭಟ್ಕಳ ಮಾಜಿ ಸೈನಿಕರ ಸಂಘ, ಭಟ್ಕಳ ಮೊಗೇರ ಸಮಾಜ, ಜೈಭೀಮ್ ಮೊಗೇರ ಸಂಘಟನೆ ಜೊತೆಗೆ ಬೆಳ್ಕೆಯ ಗಜಾನನ ಯುವಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಬೆಳ್ಕೆಯ ಸಾರ್ವಜನಿಕರು ಹಾರ ಹಾಕಿ ಗೌರವಿಸಿದರು.

ಸಂಶುದ್ದೀನ್ ವೃತ್ತದಿಂಸ ಬೆಳ್ಕೆಯ ಜನತಾ ಕಾಲೋನಿ , ಅಲ್ಲಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ವೀರಯೋಧನಿಗೆ ಗ್ರಾಮಸ್ಥರು ಪುಷ್ಪವೃಷ್ಟಿಗೈದು ಸಂತಸಪಟ್ಟರು‌

 ಕಾವಿನಮನೆ  ಮಂಜುನಾಥ ದಂಪತಿಗಳ ಪುತ್ರರಾದವ  ಗಣಪತಿ ಅವರು  ಹೊನ್ನೆಮಡಿಯ ಶಾಲೆಯಲ್ಲಿ ಕಿರಿಯ ಪ್ರಾಥಮಿಕ, ಜಿಲ್ಲಾ ಪರಿಷತ್ ಹಿರಿಯ ಪ್ರಾಥಮಿಕ ಶಾಲೆ ಬೆಳಕೆಯಲ್ಲಿ ಹಿರಿಯ ಪ್ರಾಥಮಿಕ, ಮುಗಳಿಹೊಂಡದ ನಾಗಪ್ಪ ಜ್ಞಾನಪ್ರಸಾರಕ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಅಂಜುಮನ್ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಡಿಗ್ರಿ ಪದವಿಯನ್ನು ಪಡೆದಿದ್ದಾರೆ. ಮುದ್ದಿನ ಮಗಳು ಆಶಿತಾ, ಮಡದಿ ಸಾವಿತ್ರಿ, ತಂದೆ ತಾಯಿಯೊಂದಿಗೆ ತುಂಬಿದ ಕುಟುಂಬದೊಂದಿಗೆ ತಮ್ಮ ಹೊಸ ಬದುಕಿಗೆ ಮುನ್ನುಡಿಯಿಟ್ಟಿದ್ದರು. 

28ನೇ ಜನವರಿ, 2002ನೇ ಇಸವಿಯಲ್ಲಿ  ಇಂಜಿನಿಯರ್ಸ್ ಗ್ರೂಪ್ ನ(MEG and CENTRE) ಬೆಂಗಳೂರಿನ ಇಂಜಿನಿಯರ್ಸ್ ದಳಕ್ಕೆ ಸೇರ್ಪಡೆಗೊಂಡು ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಎರಡು ವರ್ಷದ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು.  ತರಬೇತಿಯ ನಂತರ 7 ENGR Regimentಗೆ ಸೇರ್ಪಡೆಯಾದರು. ಜಗತ್ತಿನ ಅತ್ಯಂತ ಕಠಿಣ ಯುದ್ಧಸ್ಥಳವಾದ ಹಿಮಾಲಯದ ತಪ್ಪಲಿನ "ಭೂಲೋಕದ ಸ್ವರ್ಗ"ವೆಂದೇ ಖ್ಯಾತಿಯನ್ನು ಪಡೆದಿರುವ ಜಮ್ಮು ಮತ್ತು ಕಾಶ್ಮೀರದ "ಕುಪ್ವಾರ್" ದಲ್ಲಿ ಸತತ ಮೂರು ವರ್ಷಗಳ ಮೊದಲ ಸೇವೆಯು ಆರಂಭವಾಯಿತು. ನಂತರ, ಮರುಭೂಮಿಯ ಕಣಜ "ರಾಜಾಸ್ಥಾನ"ದ "ನಸೀರಾಬಾದ್" ನಲ್ಲಿ ಒಂದು ವರ್ಷದ ಸೇವೆ. ಭಾರತೀಯ ಸೇನೆಯಲ್ಲಿ "ರಾಷ್ಟ್ರೀಯ ರೈಫಲ್ಸ್" ಒಂದು ಮಹತ್ವಪೂರ್ಣವಾದ ಸೇನಾ ವಿಭಾಗ. ಈ ವಿಭಾಗದಲ್ಲೂ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದುಕೊಂಡು ಮತ್ತೆ ಜಮ್ಮು ಮತ್ತು ಕಾಶ್ಮೀರದ "ಶ್ರೀನಗರ" ದ  ವಿಭಾಗಕ್ಕೆ ಎರಡು ವರ್ಷ ಸೇವೆ ಸಲ್ಲಿಕೆ. ಅರುಣಾಚಲ ಪ್ರದೇಶದ "ತವಾಂಗ್" ನಲ್ಲಿ ಸತತ  ಮೂರು ವರ್ಷಗಳ ಕಾಲ  ಸೇವೆ.  2011ರ ಏಪ್ರಿಲ್ 27ರಂದು ಸಾವಿತ್ರಿಯೊಂದಿಗೆ ವಿವಾಹ.  ಮತ್ತೆ, ರಾಜಸ್ಥಾನದ " ಜೋಧಪುರ" ದಲ್ಲಿ  ಒಂದು ವರ್ಷದ ಸೇವೆ ಮುಂದುವರಿಕೆ. ದೇಶದ ಸೇನೆಯಲ್ಲಿ "ರಾಷ್ಟ್ರೀಯ ಭದ್ರತಾ ದಳ" (NSG) ಬಹುಮುಖ್ಯವಾದ ಪಾತ್ರವನ್ನು ವಹಿಸಿದೆ. NSG ದಳದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತು ಮೂರು ವರ್ಷಗಳ ಕಾಲ ಅತ್ಯಂತ ಕಠಿಣವಾದ ತರಬೇತಿಯನ್ನು ಪಡೆದು ಪುನಃ ಜಮ್ಮು ಮತ್ತು ಕಾಶ್ಮೀರದ "ಬಾರಾಮುಲ್ಲಾ" ದಲ್ಲಿ ಎರಡು ವರ್ಷಗಳ ಕಾಲ ಸೇವೆ. ಆನಂತರ, ಮತ್ತೆ ರಾಜಾಸ್ಥಾನದ "ಶ್ರೀಗಂಗಾನಗರ" ದಲ್ಲಿ ಮೂರು ವರ್ಷಗಳ ಕಾಯಕ. ನಿವೃತ್ತಿಗೆ ಅವಕಾಶವಿದ್ದರೂ, ದೇಶ ಸೇವೆಯನ್ನು ಮುಂದುವರೆಸುವ ಛಲದಿಂದ ಅಸ್ಸಾಂನ "ಗೌಹಾಟಿ" ಯಲ್ಲಿ ಒಂದು ವರ್ಷಗಳ ಸೇವೆಯೊಂದಿಗೆ ಸತತ 21 ವರ್ಷಗಳ ಅತ್ಯುತ್ತಮ ಸೇವೆಯನ್ನು ಪೂರೈಸಿ ಡಿಸೆಂಬರ್ 31 ಬೆಂಗಳೂರಿನ MEG  ಕೇಂದ್ರ ಕಛೇರಿಯಲ್ಲಿ ಸೇನಾ ಗೌರವದೊಂದಿಗೆ ತಮ್ಮ ನಿವೃತ್ತಿ ಜೀವನಕ್ಕೆ ಕಾಲಿಟ್ಟರು. 

ತಮ್ಮೂರ ಸುಪುತ್ರನ ಕಂಡು ಊರವರು ಭಾವುಕರಾದರಲ್ಲದೆ ದೇಶದ ಬಗ್ಗೆ ಅಭಿಮಾನ, ಗೌರವ ಹೆಚ್ಚಾಯಿತು.


Share: