ಭಟ್ಕಳ, ಜನವರಿ 15: ಶತಮಾನದ ಸುದೀರ್ಘ ಸೂರ್ಯಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಸ್ತಿಕ ಹಾಗೂ ನಾಸ್ತಿಕ ಎಲ್ಲರಲ್ಲಿಯೂ ಕುತೂಹಲವನ್ನು ಹುಟ್ಟು ಹಾಕಿರುವ ಈ ಗ್ರಹಣದ ಕುರಿತು ಈಗಾಗಲೇ ಚರ್ಚೆ ಆರಂಭವಾಗಿದೆ.
ಶುಕ್ರವಾರ ಬೆಳಿಗ್ಗೆ ೧೧.೧೬ಕ್ಕೆ ಗ್ರಹಣ ದೇಶವನ್ನು ಆವರಿಸಿಕೊಳ್ಳಲಿದ್ದು, ಸಂಜೆ ೩.೧೧ಕ್ಕೆ ಗ್ರಹಣದ ಅವಧಿ ಮುಗಿಯಲಿದೆ. ಜಗತ್ಪ್ರಸಿದ್ಧ ಮುರುಡೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿದೆಡೆ ಬೆಳಿಗ್ಗೆ ೧೧.೧೫ರ ಹೊತ್ತಿಗೆ ಅಭಿಷೇಕ, ಪೂಜೆ ನೆರವೇರಿಸಿ ಗ್ರಹಣದ ಅವಧಿಯವರೆಗೂ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಇದೊಂದು ದೇವರ ಶಾಪ ಎಂಬಂತೆ ಕೆಲವರು ಆಡಿಕೊಳ್ಳುತ್ತಿದ್ದು, ಭವಿಷ್ಯದ ಮುನ್ಸೂಚನೆಯಾಗಿ ಇವೆಲ್ಲ ಎದುರಾಗುತ್ತಿದೆ ಎಂಬ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಹಳೆಯ ತಲಮಾರಿನ ಜನರು ತಾವು ಹಿಂದೆ ಕಂಡಿದ್ದ ಗ್ರಹಣದ ಅನುಭವವನ್ನು ಮೆಲುಕು ಹಾಕಲಾರಂಭಿಸಿದ್ದಾರೆ. ಇಲ್ಲಿಯ ವಿವಿಧ ಮಸೀದಿಗಳಲ್ಲಿ ಗ್ರಹಣದ ಅವಧಿಯಲ್ಲಿ ವಿಶೇಷ ನಮಾಜು ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವಿಜ್ಞಾನ ಆಸಕ್ತ ವಿದ್ಯಾರ್ಥಿಗಳಲ್ಲಿ ಗ್ರಹಣದ ಕುರಿತಂತೆ ಕುತೂಹಲ ಇಮ್ಮಡಿಗೊಂಡಿದೆ. ಈ ಕುರಿತಂತೆ ವಿವಿಧ ಲೇಖನಗಳ ಅಧ್ಯಯನದತ್ತ ಕೆಲವರು ತಮ್ಮನ್ನು ತೊಡಗಿಸಿಕೊಂಡಿರುವುದು ಕಂಡು ಬಂದಿದೆ.
ಶಾಲೆ, ಕಾಲೇಜುಗಳಿಗೆ ರಜೆ: ಗ್ರಹಣದ ನಿಮಿತ್ತ ತಾಲೂಕಿನ ಬಹುತೇಕ ಶಾಲೆಗಳು ರಜೆ ಘೋಷಿಸುವ ಬಗ್ಗೆ ಮಾಹಿತಿ ದೊರೆತಿದೆ. ಈಗಾಗಲೇ ಸರಕಾರ ಈ ಕುರಿತಂತೆ ಆಯಾ ಶಾಲೆಯ ಆಡಳಿತ ಮಂಡಳಿಗೆ ಈ ಅಧಿಕಾರವನ್ನು ನೀಡಿದ್ದು, ಇಲ್ಲಿಯ ಶಾಲೆಗಳು ಶುಕ್ರವಾರ ವಿಶೇಷ ರಜೆಯ ಮೊರೆ ಹೋಗುವ ಸಾಧ್ಯತೆ ಇದೆ. ಈ ಕುರಿತು ಮುಂಜಾವಿನೊಂದಿಗೆ ಮಾತನಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಶಾಲೆಗಳ ಮುಖ್ಯೋಪಾಧ್ಯಾಯರು ಈ ಸಂಬಂಧ ಇಲಾಖೆಯನ್ನು ಸಂಪರ್ಕಿಸಿದ್ದು, ಪಾಲಕರ ಅನಿಸಿಕೆ ಹಾಗೂ ಶಾಲೆಯ ವಾತಾವರಣವನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.