ಕಾರವಾರ, ಜನವರಿ 27: ಧಾರ್ಮಿಕ ಕೇಂದ್ರಗಳಿಗೆ ಕಲ್ಲು ಹೊಡೆಯುವವರ ಕೈಕಡಿಯಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.
ಅವರು ಇಂದು ಉ.ಕ. ಜಿಲ್ಲೆಯ ಜೊಯಡಾ ತಾಲೂಕಿನ ಉಳವಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಧಾರ್ಮಿಕ ಕೇಂದ್ರಗಳ ಮೇಲೆ ಕಲ್ಲು ಹೊಡೆಯುವ ಷಡ್ಯಂತ್ರದ ಹಿಂದೆ ಕಾಣದ ಕೈಗಳಿವೆ. ದುಷ್ಟಶಕ್ತಿಗಳು ಆಡಳಿತದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವುದರ ಮೂಲಕ ನಮ್ಮ ಧರ್ಮ, ಸಂಸ್ಕೃತಿಯನ್ನು ನಾಶಮಾಡಲು ಹೊರಟಿದ್ದಾರೆ. ಅಂತಹವರ ಬಗ್ಗೆ ಹಿಂದು ಮುಂದು ನೋಡದೇ ಅವರ ಕೈಗಳನ್ನೇ ಕತ್ತರಿಸಬೇಕು ಎಂದು ಸೀಎಂ ಯಡಿಯೂರಪ್ಪ ಉಗ್ರವಾಗಿ ಮಾತನಾಡಿದರು.
ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ ರಾಜ್ಯದ ಅಲ್ಲಲ್ಲಿ ಧಾರ್ಮಿಕ ಕೇಂದ್ರಗಳ ಮೇಲೆ ಕಲ್ಲು ಎಸೆಯುವ ಕೃತ್ಯ ನಡೆದಿದೆ. ಹೀಗಾಗಿ ರಾಜ್ಯೋತ್ಸವ ದಿನ ಒಳ್ಳೆಯ ವಿಷಯಗಳು ಚರ್ಚೆಯಾಗಿಲ್ಲ. ರಾಜ್ಯಪಾಲರ ಗಣರಾಜ್ಯೋತ್ಸವದ ಸಂದೇಶ ಕೇಳಿ ಕಣ್ಣೀರು ಸುರಿಸಿದ್ದೇನೆ. ಆಡಳಿತದ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಧರ್ಮ ಸಂಸ್ಕೃತಿ ಹಾಳು ಮಾಡಲು ಹೊರಟ ಈ ಘಟನೆಗೆ ಹೊಣೆ ಹೊತ್ತು ರಾಜೀನಾಮೆ ಕೇಳುವದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ 19 ತಿಂಗಳ ಆರಂಭದಿಂದಲೂ ಕಾಲೆಳೆಯುವ ಯತ್ನ ಆರಂಭವಾಗಿದೆ. ಇದನ್ನು ಮಾಡುತ್ತಿರುವದು ಬೇರಾರೂ ಅಲ್ಲ. ನಮ್ಮವರಿಂದಲೇ ಈ ಪ್ರಯತ್ನ ನಡೆಯುತ್ತಿದೆ. ಯಡಿಯೂರಪ್ಪಗೆ ಜಾತಿ ಗೊತ್ತಿಲ್ಲ. ಎಲ್ಲರೂ ಮಾನವ ಧರ್ಮದವರು ಎಂದು ನಂಬಿದ್ದೇನೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದವನು ನಾನು. ಆದರೆ ಅವಧಿ ಮಧ್ಯದಲ್ಲಿಯೇ ಸರ್ಕಾರವನ್ನು ಬೀಳಿಸುವ ಯತ್ನ ನಡೆದಿದೆ ಎಂದು ಅವರು ವಿಷಾದಿಸಿದರು.
ಉದ್ದೇಶ ಅದಲ್ಲ
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೈಕಡಿಯಿರಿ ಎಂಬ ಬಗ್ಗೆ ಸ್ಪಷ್ಟೀಕರಿಸಿದ ಯಡಿಯೂರಪ್ಪ, ನನ್ನ ಉದ್ದೇಶ ಕೈಕಡಿಯಬೇಕು ಎಂಬುದಲ್ಲ. ಚರ್ಚ, ಮಸೀದಿ, ದೇಗುಲ ಮತ್ತಿತರ ಶ್ರದ್ಧಾಕೇಂದ್ರಗಳಿಗೆ ಹಾನಿ ಉಂಟುಮಾಡಿ ಜನರ ಭಾವನೆಯನ್ನು ಕೆರಳಿಸುವಂತಹ ದುಷ್ಟಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬಂರ್ಥದಲ್ಲಿ ಮಾತನಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.