ಭರ್ಜರಿ ಗೆಲುವಿಗೆ ಕಾರಣರಾದವರನ್ನು ಸ್ಮರಿಸಿದ ಸಚಿವ
ಭಟ್ಕಳ: ಕ್ಯಾಬಿನೆಟ್ ದರ್ಜೆಯ ಸಚಿವ ಸಂಪೂಟ ಸೇರಿದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ಎಸ್.ವೈದ್ಯ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೆನರಾ ಮುಸ್ಲಿಂ ಗಲ್ಫ್ ಕೌನ್ಸಿಲ್ ಅಧ್ಯಕ್ಷ ಯೂನೂಸ್ ಕಾಜಿಯಾರೊಂದಿಗೆ ಬೆಂಗಳೂರಿನ ದಿ.ಎಸ್.ಎಂ.ಯಾಹ್ಯ ಸ್ಮಾರಕ ವಸತಿ ನಿಲಯಕ್ಕೆ ತೆರಳಿ ಭಟ್ಕಳ್ ಮುಸ್ಲಿಮ್ ಜಮಾಅತ್ ಬೆಂಗಳೂರು ಇದರ ಪ್ರತಿನಿಧಿಗಳನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಜಮಾತ್ ಬೆಂಗಳೂರು ಮಾಂಕಾಳ್ ವೈದ್ಯ ಅವರನ್ನು ಅಭಿನಂದಿಸಿ ಮಂತ್ರಿಗಿರಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಭನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಮಾಂಕಾಳ್ ವೈದ್ಯ, ಭಟ್ಕಳದ ಮಾಜಿ ಸಚಿವ ಎಸ್.ಎಂ.ಯಾಹ್ಯಾ ಅವರು ನಿಧನರಾಗಿ ಸುಮಾರು 40 ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರ ಭಟ್ಕಳದ ಜನತೆಯನ್ನು ಸರ್ಕಾರ ಮಟ್ಟದಲ್ಲಿ ಪ್ರತಿನಿಧಿಸಲು ಅವಕಾಶ ದೊರಕಿದ್ದು ಇದು ಕ್ಷೇತ್ರದ ಜನತೆಗೆ ಸಿಕ್ಕಿ ಗೆಲುವು. ಇಂತಹ ಅವಕಾಶ ಮಾಡಿಕೊಟ್ಟ ಜನರಿಗೆ ಚಿರ ಋಣಿಯಾಗಿದ್ದೇನೆ ಎಂದರು.
ಮಾಂಕಾಳ್ ವೈದ್ಯ ಅವರು ಭಟ್ಕಳ್ ಮುಸ್ಲಿಮ್ ಜಮಾಆತ್ ಬೆಂಗಳೂರು ಇದರ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತಾ ತಮ್ಮ ಗೆಲುವಿಗೆ ಮಜ್ಲಿಸ್ ಇಸ್ಲಾಹ್-ವ-ತಂಝೀಮ್ ಸಂಸ್ಥೆ ತನಗೆ ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸಿಕೊಂಡರು. ವಿಶೇಷವಾಗಿ ಅನಿವಾಸಿ ಉದ್ಯಮಿ ಕೆನರಾ ಮುಸ್ಲಿಮ್ ಗಲ್ಫ್ ಕೌನ್ಸಿಲ್ ನ ಯೂನುಸ್ ಕಾಜಿಯಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಭಟ್ಕಳದ ಜನತೆ ನನಗೆ ಪ್ರಚಂಡ ಬಹುಮತದಿಂದ ಗೆಲುವು ತಂದುಕೊಟ್ಟಿದ್ದಾರೆ. ನಾನು ಭಟ್ಕಳದ ಭಟ್ಕಳದ ಅಭಿವೃದ್ಧಿಗೆ ಬದ್ಧನಾಗಿದ್ದುಕೊಂಡು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಹಿಲ್ ಆನ್ಲೈನ್ ಪ್ರತಿನಿಧಿಯೊಂದಿಗೆ ನಡೆಸಿದ ವಿಶೇಷ ಸಂವಾದದಲ್ಲಿ ಮಾಂಕಾಳ್ ವೈದ್ಯ ಅವರು ಶಿಕ್ಷಣ ನನ್ನ ಮೊದಲ ಆದ್ಯತೆ, ಭಟ್ಕಳದ ಯಾವುದೇ ವ್ಯಕ್ತಿ ಶಿಕ್ಷಣದಿಂದ ವಂಚಿತರಾಗಬಾರದು, ಭಟ್ಕಳದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು, ಇದಕ್ಕಾಗಿ ಎಲ್ಲ ರೀತಿಯ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ. ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ವಿವಿಧ ಜಾತಿ, ಪಂಗಡಗಳನ್ನು ಒಗ್ಗೂಡಿಸುವುದು ಮತ್ತು ಎಲ್ಲರನ್ನು ಒಗ್ಗೂಡಿಸುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದ ಮಾಂಕಾಳ್ ವೈದ್ಯ ಅವರು ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಭಟ್ಕಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಸ್.ಎಂ.ಅಫ್ತಾಬ್, ಮಾಜಿ ಅಧ್ಯಕ್ಷ ನಿಜಾಮುದ್ದೀನ್ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಫೈಜಾನ್ ಬರ್ಮಾವರ್, ಜಂಟಿ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ರುಕ್ನುದ್ದೀನ್, ಇಂಡಿಯನ್ ನವಯತ್ ಫೋರಂನ ಜಂಟಿ ಕಾರ್ಯದರ್ಶಿ ಮೋಅಝ್ ಜುಕಾಕು, ಸೈಫಾನ್ ಶಿಂಗೇರಿ, ನಜೀಬ್ ದಾಮೋದಿ, ಅಬ್ದುಲ್ ಮೋಅಜ್ ಕಡ್ಲಿ ಸೇರಿದಂತೆ ಹಲವು ಪದಾಧಿಕಾರಿಗಳು ಇದ್ದರು.