ಭಟ್ಕಳ, ನವೆಂಬರ್ 2: ವರ್ತಮಾನದಲ್ಲಿ ಭೃಮಾತ್ಮಕ ವಿಕಲ್ಪಗಳು ಅಟ್ಟಹಾಸ ಗೈಯುತ್ತಿದ್ದು, ದ್ವೇಷದ ಕಿಡಿ ಹೊತ್ತಿಕೊಳ್ಳುತ್ತಿದೆ. ರಾಜಕೀಯ ಲಾಭಕ್ಕಾಗಿ ಧರ್ಮದ ಬಳಕೆಯೂ ಚಾಲ್ತಿಯಲ್ಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಶ್ರೀಕಾಂತ ಕುಡಿಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಅವರು ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಕನ್ನಡ, ಉರ್ದು, ಹಿಂದಿ ಭಾಷಾ ಬಾಂಧವ್ಯದ ಕುರಿತಂತೆ ನಡೆಯುತ್ತಿರುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಜಗತ್ತಿನ ಎಲ್ಲ ಧರ್ಮ, ಭಾಷೆಯನ್ನು ಹೊಂದಿರುವ ಜನಸಮೂಹದಲ್ಲಿ ಕ್ರೌರ್ಯ, ಆತಂಕಕ್ಕೆ ಮಿಡಿಯುವ ಮನಸ್ಸುಗಳು ಇನ್ನೂ ಜಾಗೃತವಾಗಿಯೇ ಉಳಿದುಕೊಂಡಿವೆ. ಭಿನ್ನತೆಯ ಕಾರಣಕ್ಕಾಗಿ ವ್ಯಕ್ತಿಗಳ ಖಾಸಗಿ ಜೀವನದಲ್ಲಿಯೂ ಮೂಗು ತೂರಿಸುವ ಪರಿಪಾಠ ಬೆಳೆದುಕೊಂಡಿದೆ ಎಂದ ಅವರು ಭಾಷೆಯು ಯಾವುದೇ ವ್ಯಕ್ತಿ ಯಾ ಧರ್ಮಕ್ಕೆ ಸೇರಿದುದಲ್ಲ. ಉರ್ದು ‘ಸಾಬ’ರ ಭಾಷೆ ಎಂದು ಕೊಳ್ಳುವವರು ಇದನ್ನು ಗಮನಿಸಬೇಕು ಎಂದು ಹೇಳಿದರು. ನೀವು ಯಾವ ಸ್ಥಳದಲ್ಲಿರುತ್ತಿರೋ ಆ ಭಾಷೆಗೆ ಗೌರವ ಕೊಡಿ ಎಂಬ ಮಹಮ್ಮದ್ ಪೈಗಂಬರರ ಮಾತನ್ನು ನೆನಪಿಸಿದ ಅವರು ಪ್ರತಿಯೋರ್ವರಲ್ಲಿಯೂ ಸವಿಯುವ ಗುಣ ಇರಬೇಕು. ಮುಖ್ಯ ಪ್ರವಾಹದಲ್ಲಿ ನಾವೆಲ್ಲ ಒಂದಾಗಬೇಕು ಎಂದು ವಿವರಿಸಿದರು. ನಮ್ಮ ಮುಂದೆ ಇಂದು ರೋಲ್ ಮಾಡೆಲ್ಗಳೇ ಕಾಣೆಯಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮೌಲ್ಯಗಳ ಅಧಃಪತನ ಕಂಡುಬರುತ್ತಿದ್ದು, ಒತ್ತಡದಲ್ಲಿ ಇದನ್ನೆಲ್ಲ ಸರಿಪಡಿಸುವುದು ಅಸಾಧ್ಯ ಎಂಬಂತಾಗಿದೆ ಎಂದು ಹೇಳಿದರು.
ಭಟ್ಕಳದಲ್ಲಿನ ಬುರ್ಖಾ ಕಡ್ಡಾಯ ಕುರಿತಂತೆ ಮಾತನ್ನು ಹೊರಳಿಸಿದ ಕುಡಿಗಿ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಈ ಅಧಿಕಾರವನ್ನು ಕೊಟ್ಟವರು ಯಾರು? ಭಟ್ಕಳದಲ್ಲಿ ಸೌಹಾರ್ದತೆ ಇದ್ದರೆ ಕರ್ನಾಟಕದಲ್ಲಿಯೇ ಸೌಹಾರ್ದತೆ ನೆಲೆಸುತ್ತದೆ ಎಂದು ಮಾರ್ಮಿವಾಗಿ ನುಡಿದರು. ಕಾಲೇಜು ಪ್ರಾಚಾರ್ಯ ಡಾ. ಜಮಿರುಲ್ಲಾ ಷರೀಫ ಎಲ್ಲರನ್ನೂ ಸ್ವಾಗತಿಸಿದರು. ಭಾಷಾ ಬಾಂಧವ್ಯದ ಕುರಿತಂತೆ ಪ್ರಬಂಧ ಮಂಡಿಸಲು ಆಗಮಿಸಿದ ಡಾ.ಎಚ್.ಎಮ್.ಮಹೇಶ್ವರಯ್ಯ, ಡಾ.ಆರ್.ಲಕ್ಷ್ಮಿನಾರಾಯಣ, ಡಾ. ಸುಮಂಗಲಾ ಮುಮ್ಮಿಕಟ್ಟಿ, ಡಾ.ಪಂಚಾಕ್ಷರಿ ಹೀರೇಮಠ, ಡಾ. ಸೈಯದ್ ಖಲೀಲ್, ಕೆ.ಸಿ.ನಜೀರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾ ರಶಾದ್ ಉಸ್ಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್.ಶಬ್ಬರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.