ಕಾರವಾರ : ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ಕರೆ ಬಂದ 72 ಗಂಟೆಗಳಲ್ಲಿ
ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ವಿಡಿಯೋ ಸಂವಾದದ ಮೂಲಕ ಆಯೋಜಿಸಲಾಗಿದ್ದ ಇಲಾಖೆಗಳ ಅಧಿಕಾರಿಗಳ 72 ಗಂಟೆಗಳಲ್ಲಿ ಪಿಂಚಣಿಯನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾಗರಿಕರು ಶುಲ್ಕರಹಿತ ಸಂಖ್ಯೆ 155245 ಗೆ ದೂರವಾಣಿ ಕರೆ ಮೂಲಕ ತಮ್ಮ ಆಧಾರ ಸಂಖ್ಯೆ ಹೇಳಿದರೆ ಫಲಾನುಭವಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ ಅಗತ್ಯ ದಾಖಲಾತಿ, ಭಾವಚಿತ್ರ ಸಂಗ್ರಹಿಸಿ, ಅರ್ಹರ ಅರ್ಜಿಯನ್ನು ನಾಡಕಛೇರಿ ಉಪತಹಶೀಲ್ದಾರರು ಅನುಮೋದಿಸಿ ನಂತರ ಪಿಂಚಣಿ ಮಂಜೂರಾತಿ ಆದೇಶವನ್ನು ಗ್ರಾಮಲೆಕ್ಕಾಧಿಕಾರಿಗಳು ಫಲಾನುಭವಿಗಳ ಮನೆಬಾಗಿಲಿಗೆ 72 ಗಂಟೆಯೊಳಗೆ ತಲುಪಿಸಬೇಕೇಂದು ಸೂಚಿಸಿದರು.
ಪಿಂಚಣಿ ಪಡೆಯಲು ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಕುಟುಂಬದ ಆದಾಯ 32,000 ಕ್ಕಿಂತ ಕಡಿಮೆ ಇದ್ದವರು ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿದ್ದು ಅಂತಹ ಫಲಾನುಭವಿಗಳ ದಾಖಲಾತಿ ಪಡೆದು ಒಂದು ವೇಳೆ ದಾಖಲಾತಿ ಸರಿ ಇಲ್ಲದ ಸಂದರ್ಭದಲ್ಲಿ ಅವರಿಗೆ ಅಲ್ಲಿಯೇ ಅದರ ಬಗ್ಗೆ ಅರಿವು ಮೂಡಿಸಿ ಯಾವುದೇ ಅರ್ಜಿಗಳು ತೀರಸ್ಕøತವಾಗದಂತೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪ ತಹಶೀಲ್ದಾರರು, ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಿಗರು, ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.