ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪ್ರತಿಭಟನೆ ಮಧ್ಯೆ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

ಪ್ರತಿಭಟನೆ ಮಧ್ಯೆ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

Fri, 15 Apr 2022 12:20:59  Office Staff   Vb

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಸಂಘ ಪರಿವಾರದ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಸಂಸ್ಕಾರ ಸ್ವಗ್ರಾಮ ಬಡಸದಲ್ಲಿನ ಅವರ ಜಮೀನಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಗುರುವಾರ ನೆರವೇರಿತು.

ಈಶ್ವರಪ್ಪ ಬಂಧನ ಹಾಗೂ ಸಂತೋಷ್ ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಅಂತ್ಯಕ್ರಿಯೆ ನಡೆಸಬಾರದು ಎಂದು ಕೆಲವರು ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಅವರ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಸಂತೋಷ್ ಅಂತ್ಯಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಥವಾ ಮುಖಂಡರು ಯಾರೂ ಪಾಲ್ಗೊಂಡಿರಲಿಲ್ಲ. ಸಂತೋಷ್ ಪಾರ್ಥಿವ ಶರೀರಕ್ಕೆ ಕೇಸರಿ ಶಾಲು ಹೊದಿಸಲಾಗಿತ್ತು. ಎ.12ರಂದು ಆತ್ಮಹತ್ಯೆಗೆ ಶರಣಾಗಿದ್ದ ಸಂತೋಷ್ ಮೃತದೇಹ ಉಡುಪಿಯಿಂದ ಬೆಳಗ್ಗೆ ಎಂ.ಕೆ. ಹುಬ್ಬಳ್ಳಿ ಸಮೀಪ ಬರುತ್ತಿದ್ದಂತೆಯೇ ತಮಗೆ ಎದುರಾದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಎನ್.ವಿ. ಭರಮನಿ ಮೊದಲಾದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಕುಟುಂಬದ ಸದಸ್ಯರು, ಆರೋಪಿಗಳನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.


Share: