ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಂಚಾಯತ ಹಾಗೂ ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡ ಭೀಮಕೋಲ್. ಪಂಚವಟಿ ವನ ಉದ್ಘಾಟನಾ ಕಾರ್ಯಕ್ರಮ.

ಪಂಚಾಯತ ಹಾಗೂ ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡ ಭೀಮಕೋಲ್. ಪಂಚವಟಿ ವನ ಉದ್ಘಾಟನಾ ಕಾರ್ಯಕ್ರಮ.

Sat, 18 Mar 2023 04:29:13  Office Staff   SO News

ಕಾರವಾರ : ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದಲ್ಲಿಯೇ ಪ್ರವಾಸೋದ್ಯಮಕ್ಕೆ ಪ್ರಸಕ್ತವಾದ ಸ್ಥಳವಾಗಿದೆ. ಈಗ ಭೀಮಕೋಲ್ ಪಂಚವಟಿ ವನವು ಅದಕ್ಕೆ ಸೇರ್ಪಡೆಯಾಗಿದ್ದು, ಈ ಸ್ಥಳವನ್ನು ಸಾವಿರಾರು ಪ್ರವಾಸಿಗರು ಬಂದು ಪಕೃತಿ ಸೌಂದರ್ಯವನ್ನು ಆಸ್ವಾದಿಸಲಿ ಎಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ  ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ  ಗೋಟಗಾಳಿ ಗ್ರಾಮದಲ್ಲಿ ಜರುಗಿದ ಭೀಮಕೋಲ್ ಪಂಚವಟಿ ವನವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾರವಾರ ಅಂಕೋಲಾ ವಿಧಾನಸಭೆ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ, ಪಂಚವಟಿ ವನವನ್ನು ಒಂದು ಪೌರಾಣಿಕ ಹಿನ್ನಲೆಯ ಉದ್ದೇಶವನ್ನಿಟ್ಟುಕೊಂಡು ನಿರ್ಮಿಸಲಾಗಿದ್ದು, ಸ್ಥಳೀಯರು ಮತ್ತು ಊರ ನಾಗರಿಕರು ಅದನ್ನು ಉಳಿಸಿಕೊಂಡು ಹೋಗಬೇಕು. ಹಾಗೂ ಇಲ್ಲಿಗೆ ಬರುವ ಪ್ರವಾಸಿಗರು ಗಿಡಗಳನ್ನು ನಾಶ ಮಾಡದೇ, ಪ್ಲಾಸ್ಟಿಕ್ ಬಿಸಾಡದೇ, ಕೆರೆಯಲ್ಲಿರುವ ನೀರನ್ನು ಕಲುಷಿತಗೋಳಿಸದೇ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ವನವನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಭೀಮಕೋಲ್ ಕೆರೆಯನ್ನು 2021-22 ನೇ ಸಾಲಿನಲ್ಲಿ ನರೇಗಾ ಯೋಜನೆಯ ಅಮೃತ ಸರೋವರ ಮಿಶನ್ ಅಡಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಭೀಮಕೋಲ್ ಕೆರೆಯ ತಡೆಗೋಡೆ ಮೇಲೆ ಸುಂದರವಾದ ವಿಹಾರ ಮಾರ್ಗ ಮತ್ತು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ಕೆರೆಗೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. 

2022-23 ನೇ ಸಾಲಿನಲ್ಲಿ ಪ್ರವಾಸಿಗರಿಗೆ ಅರಣ್ಯದ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಈ ಪ್ರದೇಶದಲ್ಲಿ ಪಂಚವಟಿ ವನ, ರಾಶಿ ವನ, ಚಿಟ್ಟೆ ವನ, ಪರ್ಣಕುಠಿರ, ಅಣಬೆ ಪ್ರತಿಮೆಗಳನ್ನು ಸ್ಥಾಪಿಸಿ ವಿವಿಧ ಇಲಾಖಾ ಯೋಜನೆಗಳಲ್ಲಿ ಅನುದಾನ ಬಳಕೆ ಮಾಡಿ ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಭೀಮಕೋಲನ್ನು ಮಾರ್ಪಡಿಸಿರುತ್ತಾರೆ.  ಜಿಲ್ಲಾ ಪಂಚಾಯತನ 15 ನೇ ಹಣಕಾಸು ಯೋಜನೆಯಲ್ಲಿ ಟಿಕೇಟ್ ಕೌಂಟರ್, ನೆಲ ಸಮತಟ್ಟು ಮಾಡುವುದು, ಪಂಚವಟಿ ವನದ ಬದಿಗೆ ಮತ್ತು ಮುಂಬಾಗದಲ್ಲಿ ಪೇವರ್ಸ್ ಅಳವಡಿಸಲಾಗಿದೆ. 

ತಾಲೂಕ ಪಂಚಾಯತನ ಅನಿರ್ಬಂಧಿತ ಯೋಜನೆಯಡಿ ಅಣಬೆ ಪ್ರತಿಮೆ, ಕುಳಿತುಕೊಳ್ಳುವ ಆಸನ ಮತ್ತು ಮರದ ರೂಪದ ಮೆಟ್ಟಿಲು  ಕಂಬಗಳನ್ನು  ಹಾಗೂ ತಾಲೂಕ ಪಂಚಾಯತನ 15 ನೇ ಹಣಕಾಸು ಹಣಕಾಸು ಯೋಜನೆಯಡಿ ಪರ್ಣಕುಠಿರ, ದ್ವಾರಬಾಗಿಲು ನಿರ್ಮಿಸಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗೆ 80 ಅಡಿ ಪಿಚ್ಚಿಂಗ್ ಮತ್ತು ಅಪ್ರೋಚ್ ವೇ, ರಾಶಿವನ, ಚಿಟ್ಟೆ ವನದಲ್ಲಿ ತಡೆಗೋಡೆ ನಿರ್ಮಿಸಿ ಬಣ್ಣದಿಂದ ಅಲಂಕರಿಸಲಾಗಿದೆ. 

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್, ಜಿಲ್ಲಾ ಪಂಚಾಯತನ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜನಾ ಆರ್. ಪವಾರ, ಉಪಾಧ್ಯಕ್ಷರಾದ ಶ್ರದ್ಧಾ ಸಿ.ನಾಯ್ಕ್, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಶಾಂತಕುಮಾರ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಜಿ. ನಾವಿ, ಹಾಗೂ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕ ಪಂಚಾಯತನ ನರೇಗಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


Share: