ಕಾಂಗ್ರೇಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಹೇಳುಕೊಳ್ಳುತ್ತಿರುವ ಸಿದ್ಧರಾಮಯ್ಯನವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನೆಲೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ಧರಾಮಯ್ಯನವರನ್ನು ಕಟುಕಿದರು.
ಸೋಮವಾರ ಭಟ್ಕಳದಲ್ಲಿ ನಡೆದ ವಿಜಯ ಸಂಕಲ್ಪಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೇಸ್ ಪಕ್ಷದಲ್ಲಿ ಕಚ್ಚಾಟ ಹೆಚ್ಚಾಗಿದ್ದು, ಚುನಾವಣೆ ಎದುರಿಸಲು ಹಲವರಿಗೆ ಕ್ಷೇತ್ರವೆ ಇಲ್ಲದಂತಾಗಿದೆ. ಜನರಿಗೆ ಸುಳ್ಳು ಗ್ಯಾರಂಟಿ ನೀಡುವ ಕಾಂಗ್ರೇಸ್ ಪಕ್ಷ ಮೊದಲು ಚುನಾವಣೆಯಲ್ಲಿ ಗೆಲ್ಲುವ ಗ್ಯಾರಂಟಿ ನೀಡಲು ಎಂದು ಟಾಂಟ್ ನೀಡಿದರು.
ಕಾಂಗ್ರೇಸ್ ನ ಪ್ರಜಾದ್ವನಿ, ಜೆ.ಡಿ.ಎಸ್ ನ ಪಂಚರತ್ನ ಯಾತ್ರೆಗಳು ಫೇಲಾಗಿದ್ದು ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಮುಂದೆ ಮಂಕಾಗಿ ಹೋಗಿವೆ. ಈ ಬಾರಿ ನಾವು(ಬಿಜೆಪಿ)೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಕಾಂಗ್ರೇಸ್ ಕಾಡಿಗೆ ಅಲೆಯಬಹುದಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಕರಾವಳಿಯಲ್ಲಿ ಕಾಂಗ್ರೇಸ್ ತನ್ನೆಲ್ಲ ಸ್ಥಾನವನ್ನೂ ಕಳೆದುಕೊಂಡು ಕಾಂಗ್ರೇಸ್ ಮುಕ್ತ ಕರಾವಳಿಯಾಗಲಿದೆ ಎಂದ ಅವರು, ವಿರೋಧಪಕ್ಷದಲ್ಲಿದ್ದು ಗ್ಯಾರಂಟಿ ಕಾರ್ಡ ಹಂಚಿದರೆ ಜನತೆ ನಂಬುವುದಿಲ್ಲ. ಜನತೆ ಇವರನ್ನು ತಿರಸ್ಕಾರ ಮಾಡಿದ್ದು, ಮತ್ತೆ ಯಾವುದೇ ಅಧಿಕಾರಕ್ಕೆ ತರುವುದಿಲ್ಲ ಎಂದರು. ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ಸಿಗರು ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ ಎಂದ ಅವರು ಉರಿಗೌಡ, ನಂಜೇಗೌಡರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇವರಿಬ್ಬರ ಬಗ್ಗೆಯೂ ಚರ್ಚೆ ಆಗುತ್ತಿದ್ದು ಸತ್ಯಾಸತ್ಯತೆ ಹೊರಬರಲಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇತಿಹಾಸ ತಜ್ಞನಲ್ಲ ಎಂದರು. ಬಿಜೆಪಿ ಸರಕಾರ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸಿದೆ. ಆದರೆ ಈ ವಿಚಾರ ನ್ಯಾಯಾಲಯದಲ್ಲಿದ್ದು, ಸ್ಪಷ್ಟ ಆದೇಶ ಇನ್ನಷ್ಟೇ ಬರಬೇಕು ಎಂದ ಅವರು ರಾಹುಲ್ ಗಾಂಧಿಯವರ ಯುವ ಕ್ರಾಂತಿ ಸಮಾವೇಶದ ಬಗ್ಗೆ ಮತ್ತು ಕ್ಷೇತ್ರ ಪರ್ಯಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರ ರಾಹುಲ್ ಗಾಂಧಿ ಅವರು ಹತ್ತು ವರ್ಷದ ಹಿಂದೆಯೇ ಇಂತಹ ಯುವ ಸಮಾವೇಶ ಮಾಡಬೇಕಿತ್ತು. ಆದರೆ ಅವರು ಇದೀಗ ರಿಟೈರ್ಡ ಮೂಡಲಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಂಚಾರ ಮಾಡಬೇಕು. ಏಕೆಂದರೆ ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆ ಮತ್ತು ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು. ಕಾಂಗ್ರೆಸ್ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗೆ ಮಾಡಲಿದೆ ಎಂದಾಗ, ಬಿಜೆಪಿ ಪ್ರತಿ ಕ್ಷೇತ್ರಕ್ಕೂ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದರು. ಕಳೆದೊಂದು ವರ್ಷದಿಂದ ಮೊಗೇರ ಸಮಾಜದವರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು ಈ ವಿಚಾರವನ್ನು ಕಾನೂನಾತ್ಮಕವಾಗಿ ಪರಿಶೀಲಿಸಬೇಕಾಗಿದ್ದು, ನ್ಯಾಯ ಸಿಗಲಿದೆ ಎಂದರು.