ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನರೇಗಾದಡಿ ಕೂಲಿಕಾರರ ನಿಯೋಜನೆಯ ಶೂನ್ಯ ಪ್ರಗತಿ ದಾಖಲಾಗದಂತೆ ಕ್ರಮವಹಿಸಿ- ಸಿಇಒ ಈಶ್ವರ ಕಾಂದೂ

ನರೇಗಾದಡಿ ಕೂಲಿಕಾರರ ನಿಯೋಜನೆಯ ಶೂನ್ಯ ಪ್ರಗತಿ ದಾಖಲಾಗದಂತೆ ಕ್ರಮವಹಿಸಿ- ಸಿಇಒ ಈಶ್ವರ ಕಾಂದೂ

Sat, 18 Feb 2023 04:48:59  Office Staff   SO News

ಕಾರವಾರ : ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳಲ್ಲಿ ನರೇಗಾದಡಿ ಕೂಲಿಕಾರರನ್ನು ನಿಯೋಜಿಸಿ ಕೂಲಿ ಕೆಲಸ ಒದಗಿಸುವ ಪ್ರಗತಿ ಶ್ಯೂನ್ಯವಿದ್ದು, ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರನ್ನು ನಿಯೋಜಿಸಿ ಕೂಲಿ ಕೆಲಸ ನೀಡಬೇಕು. ಜೊತೆಗೆ ಯಾವ ಗ್ರಾಮ ಪಂಚಾಯತಿಯಲ್ಲೂ ಕೂಲಿಕಾರರ ನಿಯೋಜನಾ ಪ್ರಗತಿ ಶೂನ್ಯ ಪ್ರಮಾಣದಲ್ಲಿ ದಾಖಲಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದರು.

ಜಿಲ್ಲೆಯ ಅಂಕೋಲಾ ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಜರುಗುವ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಿ ಗ್ರಾಮೀಣ ಪ್ರದೇಶದ ಜನರಿಗೆ ಮತದಾರ ಪಟ್ಟಿಯಲ್ಲಿ ಯುವ ಮತದಾರರ ಹೆಸರು ನೋಂದಣಿ, ಮತದಾನದ ಮಹತ್ವದ ಕುರಿತಾದ   ಜಾಗೃತಿ ಮೂಡಿಸಬೇಕು ಎಂದರು.
ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳು ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಲಿದ್ದು, ತಾಲೂಕಿನಲ್ಲಿ ಅಭಿವೃಪಡಿಸಲು ಕೈಗೆತ್ತಿಕೊಂಡಿರುವ ಹಾಗೂ ಪ್ರಗತಿಯಲ್ಲಿರುವ ಅಮೃತ ಸರೋವರ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪೂರ್ಣಗೊಂಡ ಅಮೃತ ಸರೋವರದ ಕಾಮಗಾರಿಯ ಪೂರ್ವ, ಪ್ರಗತಿ ಹಾಗೂ ಪೂರ್ಣಗೊಂಡ ನಂತರದ ಉತ್ತಮ ಫೋಟೋಗಳನ್ನು ಮತ್ತು ಮಾಹಿತಿಯನ್ನು ಸಂಗ್ರಹಿಸಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಯಶೋಗಾಥೆ ತಯಾರಿಸಿ ಅಮೃತ ಸರೋವರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.

ನರೇಗಾದಡಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಸಮುದಾಯ ಕಾಮಗಾರಿಗಳಾದ ಅಂಗನವಾಡಿ, ಪೌಷ್ಟಿಕ ಕೈತೋಟ, ಸಮಗ್ರ ಶಾಲಾ ಅಭಿವೃದ್ಧಿ, ಕೆರೆ  ಕಾಮಗಾರಿಗಳಿಗೆ ಆಧ್ಯತೆ ನೀಡಿ ಜನರಿಗೆ ಕೂಲಿ ಕೆಲಸ ಒದಗಿಸಬೇಕು. ಜೊತೆಗೆ ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಸಿ ಜಿಐಎಸ್ ತಂತ್ರಜ್ಞಾನದ ಮೂಲಕ ನೀರು, ಮಣ್ಣು ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಎಸ್‌ಬಿಎಂ ಯೋಜನೆಯಡಿ ಕಸ ಸಂಗ್ರಹಣೆ ವಾಹನಕ್ಕೆ ಸ್ವಸಹಾಯ ಸಂಘಗಳ ಮಹಿಳಾ ಚಾಲಕರ ನೇಮಕಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನೇಮಕಗೊಂಡ ಮಹಿಳಾ ವಾಹನ ಚಾಲಕರಿಗೆ ಸೂಕ್ತ ತರಬೇತಿ ಕೊಡಿಸಿ ಗ್ರಾಮೀಣ ಪ್ರದೇಶದಲ್ಲಿನ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಪ್ರಕ್ರಿಯನ್ನು ಯಶಸ್ವಿಗೊಳಿಸಿ ಸ್ವಚ್ಛ ಸಮೃದ್ಧ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ತಾಪಂ ಕಚೇರಿಗೆ ಭೇಟಿನೀಡಿ ಕಚೇರಿಯಲ್ಲಿ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿ, ಕಾರ್ಯವೈಖರಿ,  ಪ್ರಗತಿಯಲ್ಲಿರುವ ತಾಪಂ ಹೊಸ ಕಟ್ಟಡ ಕಾಮಗಾರಿ ವೀಕ್ಷಿಸಿ ಸ್ಥಳದಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಹಟ್ಟಿಕೇರಿ ಗ್ರಾಪಂ ಕಚೇರಿಗೆ ತೆರಳಿ ಕರ್ತವ್ಯ ನಿರತ ಸಿಬ್ಬಂದಿ ಸಂಖ್ಯೆ, ಕಾರ್ಯವೈಖರಿ ಪರಿಶೀಲಿಸಿದರು. ಜೊತೆಗೆ ಅಂಗನವಾಡಿಗೆ ಭೇಟಿನೀಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹಾಜರಾತಿ, ಮಕ್ಕಳ ಸಂಖ್ಯೆ, ಸರಕಾರದಿಂದ ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ, ವಿತರಣಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಹಾಗೇ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೆರಳಿ ಕಸ ಸಂಗ್ರಹಣೆ, ವಿಂಗಡಣೆ ಕುರಿತು ಚರ್ಚಿಸಿದರು. ನಂತರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸುತ್ತಿರುವ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಕಾಮಗಾರಿ ಸ್ಥಳದಲ್ಲಿದ್ದ 25ಕ್ಕೂ ಅಧಿಕ ಕೂಲಿಕಾರರೊಂದಿಗೆ ಸಮಾಲೋಚನೆ ನಡೆಸಿದರು. ಜೊತೆಗೆ ಕಾಮಗಾರಿ ಪ್ರಾರಂಭದ ದಿನಾಂಕ, ಕೂಲಿಕಾರರು ಎಷ್ಟು ದಿನದಿಂದ ಕೆಲಸ ಮಾಡುತ್ತಿದ್ದಾರೆ. ಮೇಟ್ ಅವರು ಎನ್‌ಎಮ್‌ಎಮ್‌ಎಸ್ ಮೂಲಕ ಸರಿಯಾಗಿ ಕೂಲಿಕಾರರ ಹಾಜರಾತಿ ಹಾಕಲಾಗುತ್ತಿದ್ದಾರಾ, ಕೂಲಕಾರರಿಗೆ ಕಾಮಗಾರಿ ಸ್ಥಳದಲ್ಲಿ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆಯಾ ಎಂದು ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ಅವರಿಂದ ಮಾಹಿತಿ ಪಡೆದು ಕಾಮಗಾರಿಯ ದಾಖಲೆಗಳನ್ನು ಪರಿಶೀಲಿಸಿದರು.

ಹಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ನಿರ್ಮಿತ ಅಂಗನವಾಡಿ ಕಟ್ಟಡ, ಬೇಲೆಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ತಾಪಂ 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಹೈಟೆಕ್ ಅಂಗನವಾಡಿ, ಬೊಬ್ರುವಾಡ ಗ್ರಾಪಂ ವ್ಯಾಪ್ತಿಯ ನದಿಭಾಗ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಪ್ರಗತಿಯಲ್ಲಿರುವ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ, ನದಿಬಾಗ ಬೀಚ್ ಬಳಿ ನರೇಗಾದಡಿ ಪ್ರಗತಿಯಲ್ಲಿರುವ ಉದ್ಯಾನವನ ನಿರ್ಮಾಣ ಕಾಮಗಾರಿ, ವಂದಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸಲಾದ ಜಲ ಚೇತನ ದಾಮ, ಅಮೃತ ಸರೋವರ ಕೆರೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಲೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ಮಿತ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ರ್ಯಾಪಿಡ್ ಸ್ಟ್ಯಾಂಡ್ ಫಿಲ್ಟರ್ ಘಟಕಕ್ಕೆ ತೆರಳಿ ನೀರಿನ ಶುದ್ಧೀಕರಣ ಪ್ರಕ್ರಿಯೆ, ಸಂಗ್ರಹಣೆ, ಸರಬರಾಜು ಪ್ರಮಾಣ ಕುರಿತು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ, ಅಂಕೋಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ, ಕುಮಟಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನ, ನರೇಗಾ ಸಹಾಯಕ ನಿರ್ದೇಶಕ ಸುನಿಲ್ ಎಂ., ಆರ್‌ಡಬ್ಲ್ಯುಎಸ್‌ನ ಎಇಇ, ಎಇ, ಜೆಇ, ಪಿಆರ್‌ಇಡಿ ಎಇಇ, ನರೇಗಾ ತಾಲೂಕ ಎಐಎಸ್, ಐಇಸಿ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.


Share: