ಭಟ್ಕಳ: ಆಜಾದ್ ನಗರದ ಕೋಗ್ತಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಅಂದಾಜು 1.25 ಲಕ್ಷ ರೂಪಾಯಿ ನಗದು, ಮೊಬೈಲ್ ಫೋನ್ ದೋಚಿದ್ದಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬುಧವಾರ ಸಂಜೆಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಬೀಗ ಹಾಕಿದ ಮನೆಯಲ್ಲಿ ಈ ಘಟನೆ ನಡೆದಿದೆ.
ಇರ್ಷಾದ್ ಅಹಮದ್ ಗಂಗಾವಳಿ ಎಂಬುವವರಿಗೆ ಈ ಮನೆ ಸೇರಿದ್ದು, ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದರು. ಮನೆಯಲ್ಲಿ ಜನವಸತಿ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲು ಎರಡನ್ನೂ ಮುರಿದು ಮೂರು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೂಚಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಗುರುವಾರ ಬೆಳಗ್ಗೆ ಮನೆಯವರು ಹಿಂತಿರುಗಿ ನೋಡಿದಾಗ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳು, ಬಟ್ಟೆಬರೆಗಳು ಕಂಡು ಬಂದಿದ್ದು, ಹಾನಿಯ ಪ್ರಮಾಣ ಗೊತ್ತಾಗಿದೆ.
ಈ ಕುರಿತಂತೆ ಭಟ್ಕಳ ಪಿಎಸ್‌ಐ ಹುನುಮಂತ ಕುಡಗುಂಟಿ ಪೊಲೀಸ್ ಸಿಬ್ಬಂಧಿಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಕೂಲಂಕುಷವಾಗಿ ಪರಿಶೀಲಿಸಿದ್ದು ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.