ಬಂಟ್ವಾಳ, ಡಿಸೆಂಬರ್ 16:ಅವ್ಯವಸ್ಥೆಯ ಆಗರವಾಗಿರುವ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರವನ್ನು ಸುವ್ಯವಸ್ಥಿತಗೊಳಿಸಿ ಅಗತ್ಯವಿರುವ ಮೂಲ ಸೌಕರ್‍ಯವನ್ನು ಒದಗಿಸ ಬೇಕು, ತಪ್ಪಿದಲ್ಲಿ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಾಣೂರು ಸತೀಶ್ ಸಾಲಿಯಾನ್ ಹೇಳಿದರು.
ಬುಧವಾರ ಬಿಸಿರೋಡಿನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳದ ಸರ್ಕಾರಿ ಆರೋಗ್ಯ ಕೇಂದ್ರ ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿ ವೈದ್ಯರು,ದಾದಿಯರು,ಆರೋಗ್ಯ ಸಹಾಯಕಿಯರು,ನೌಕರರ ಕೊರತೆಯಿದೆ. ಇದರಿಂದಾಗಿ ರೋಗಿಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ,ತುರ್ತು ಚಿಕಿತ್ಸಾ ಘಟಕವಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ಆರೋಪಿಸಿದರು.
೩೦ ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ತಕ್ಷಣ 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದ ಅವರು ಸರಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್.ಮಹಮ್ಮದ್, ಮಹಿಳಾ ಜಿಲ್ಲಾ ಧ್ಯಕ್ಷೆ ಆಲಿಸ್ ಆಲ್ವಿನ್ ಸಿಕ್ವೇರಾ,ಬಂಟ್ವಾಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಕೃಷ್ಣ ಪ್ರಸಾದ್ ಪೂಜಾರಿ,ಮಹಿಳಾ ಅಧ್ಯಕ್ಷೆ ಜಯಲಕ್ಷ್ಮೀ ಪ್ರಭು,ಪ್ರಧಾನ ಕಾರ್ಯದರ್ಶಿ ಸತೀಶ್ ಕಕ್ಕೆ ಪದವು,ಮಹಿಳಾ ಪ್ರಧಾನ ಕಾರ್ಯದರ್ಶಿ ಕು.ನಳಿನಿ,ಜಿಲ್ಲಾ ಸಮಿತಿ ಸಂಚಾಲಕಿ ರವಿಕಲಾ ಉಪಸ್ಥಿತರಿದ್ದರು.