ಉಡುಪಿ, ಡಿಸೆಂಬರ್ 13: ದೇಶದ ಯಾವುದೇ ಭಾಗದಲ್ಲಿ ಕೋಮು ಗಲಭೆ ನಡೆದರೆ ಅದನ್ನು ಹತ್ತಿಕ್ಕುವಲ್ಲಿ ರಾಜ್ಯ ಸರಕಾರ ವಿಫಲವಾದರೆ ಅಂತಹ ಪ್ರದೇಶವನ್ನು ಕೇಂದ್ರ ಸರಕಾರ ಸ್ವಾಧೀನ ಪಡಿಸಿಕೊಂಡು ಗಲಭೆ ನಿಯಂತ್ರಿಸುವ ಕಾನೂನು ರೂಪಿಸುವುದಾಗಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿಯವರು ಹೇಳಿದರು.
ಅವರು ಭಾನುವಾರ ಇಲ್ಲಿಗೆ ಸಮೀಪದ ಮಂಗಳೂರಿನ ಡಿಕೆಎಸ್ಸಿ ಅಧೀನದಲ್ಲಿರುವ ಮರ್ಕಝ್ ತಅಲೀಮಿಲ್ ಇಹ್ಸಾನ್ ಇದರ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಸಮುದಾಯದ ಮೇಲೆ ಅಥವಾ ಕಾನೂನಿನ ಮೇಲೆ ದಾಳಿ ನಡೆದಾಗ ರಾಜಕೀಯ ಶಕ್ತಿಯಿಂದ ರಾಜ್ಯ ಸರಕಾರ ತಡೆಯುವಲ್ಲಿ ಹಿಂದೇಟು ಹಾಕುತ್ತದೆ. ಆ ಸಂದರ್ಭದಲ್ಲಿ ಕಾನೂನು ಎಲ್ಲರಿಗೂ ಒಂದೇ ಎನ್ನುವ ನಿಟ್ಟಿನಲ್ಲಿ ಸ್ಥಳೀಯ ರಾಜ್ಯ ಸರಕಾರಕ್ಕೆ ಗಲಭೆ ನಿಯಂತ್ರಿಸಲು ಕೇಂದ್ರ ಸೂಚನೆ ನೀಡುತ್ತದೆ. ಅದಕ್ಕೆ ತಪ್ಪಿದಲ್ಲಿ ಕೇಂದ್ರವೇ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದರು.
ಕರ್ನಾಟಕ, ಗುಜರಾತ್, ಒರಿಸ್ಸಾದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಧಾಳಿಯ ವೇಳೆ ಸ್ಥಳೀಯ ಸರಕಾರಗಳು ಸುಮ್ಮನಿದ್ದುದನ್ನು ಕೇಂದ್ರ ಸರಕಾವು ಬಹಳ ಹತ್ತಿರದಿಂದ ವೀಕ್ಷಿಸಿದೆ. ಕೇಂದ್ರದ ಈ ಕಾನೂನನ್ನು ಅನುಷ್ಠಾನಗೊಳ್ಳುವುದರ ಮೂಲಕ ದೇಶದಲ್ಲಿ ಅಯೋಧ್ಯ, ಗುಜರಾತ್, ಒರಿಸ್ಸಾ, ಮಂಗಳೂರಿನಂತಹ ಗಲಭೆ ನಡೆಯಲು ಸಾಧ್ಯವಿಲ್ಲ ಎಂದರು.
ಮೂಳೂರು ಇದರ ವತಿಯಿಂದ ಅಲ್ ಇಹ್ಸಾನ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗ್ರೌಂಡ್ ನಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪದವಿ ಪೂರ್ವ ವಿದ್ಯಾರ್ಥಿನಿಯರ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸಗೈದು ಮಾತನಾಡಿದರು.
ಮುಸ್ಲಿಂ ಸಮುದಾಯಕ್ಕೆ ಈಗಾಗಲೇ ಸಾಚಾರ್ ಸಮಿತಿಯ ವರದಿಯಂತೆ ಅವರಿಗೆ ನೀಡಲಾಗಿರುವ ಮೀಸಲಾತಿಯನ್ನು ಎಲ್ಲೆಡೆಯಲ್ಲಿ ಅಳವಡಿಸಿ ಕೊಳ್ಳುವಂತಾಗಲು ಮತ್ತು ಸರಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳು ವಂತಾಗಲು ವಿಶೇಷ ಕಾನೂನನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರವು ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸಚಿವ ಸಲ್ಮಾನ್ ಖುರೇಶಿಯವರೊಂದಿಗೆ ಸಮಾಲೋಚನೆಯನ್ನೂ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪೌಂಡೇಷನ್ಗೆ ಎರಡು ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗಾಗಿ ವಸತಿ ಗೃಹಗಳನ್ನು ನಿರ್ಮಾಣ ಗೊಳಿಸಲೂ ಅನುದಾನ ನಿಗಧೀಕರಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಿಕೆಗೆ ಆಯಾ ಜಿಲ್ಲೆಗಳ ಮುಸ್ಲಿಂ ಸಮುದಾಯದ ಜಮಾತ್ ನವರು ಕಾರ್ಯೋನ್ಮುಖರಾಗ ಬೇಕೆಂದು ಕರೆ ನೀಡಿದರು.
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನ ಅಧ್ಯಕ್ಷ ಅಸದಸಯಿದ್ ಕೆ.ಎಸ್.ಆಟಕ್ಕೋಯ ತಂಗಳ್ ಕುಂಬೋಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ ಹಾಜ್ ಜಾಫರ್ ಸಾಧಿಕ್ ತಂಗಳ್ ಕುಂಬೋಳ್, ಸುನ್ನಿ ಸೆಂಟರ್ ನ ಕಾರ್ಯಾಧ್ಯಕ್ಷ ಜ| ಇಸ್ಮಾಯಿಲ್ ಕಿನ್ಯಾ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಭಾವಾ ಕಾಂಗ್ರೇಸ್ ನ ಜಿಲ್ಲಾಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿ ವಸಂತ ವಿ.ಸಾಲ್ಯಾನ್, ಕಾರ್ಪೋರೇಟರ್ ಭಾಸ್ಕರ ಮೊಯಿಲಿ, ಡಿ.ಕೆ.ಎಸ್.ಚಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಜೀದ್ ಸೂರಲ್ಪಾಡಿ, ಜಲೀಲ್ ಕರೋಪಾಡಿ, ಉಮ್ಮರ್ ಇಸ್ಮಾಯಿಲ್, ಆಜಬ್ಬ ಮೂಳೂರು, ಉಪಾಧ್ಯಕ್ಷ ಹಾತಿಂ ಕಂಚೀ ಮುಖ್ಯ ಅತಿಥಿಗಳಾಗಿದ್ದರು. ಮೌಲಾನಾ ಮುಸ್ತಾಫಾ ಸದಿ ಸ್ವಾಗತಿಸಿದರು. ಸಾದಿಕ್ ಮಲೆಬೆಟ್ಟು ವಂದಿಸಿದರು. ಇಸಾಕ್ ಬೊಳ್ವಾಯಿ ಕಾರ್ಯಕ್ರಮ ನಿರೂಪಿಸಿದರು.