ಭಟ್ಕಳ: ಭಟ್ಕಳದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲಾ ಸರಕಾರಿ ನೌಕರರ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕೂಟ ಡಿ.30 ಹಾಗೂ 31ರಂದು ತಾಲೂಕಿನ ಶ್ರೀ ಗುರುಸುಧೀಂದ್ರ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಈ ಕುರಿತು ಭಟ್ಕಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪುರುಷ ಸರಕಾರಿ ನೌಕರರಿಗೆ 40ಕ್ಕಿಂತ ಕಡಿಮೆ, 40ರಿಂದ 50, 50ರಿಂದ 60 ಹಾಗೂ ಮಹಿಳಾ ಸರಕಾರಿ ನೌಕರರಿಗೆ 35ಕ್ಕಿಂತ ಕಡಿಮೆ, 35ರಿಂದ 45, 50-60 ವರ್ಷ ವಯೋಮಿತಿಗೆ ಒಳಪಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 35 ವಿವಿಧ ಕ್ರೀಡಾ ಸ್ಪರ್ಧೆಗಳು, ಭಾವಗೀತೆ, ಜಾನಪದ ಗೀತೆ, ನಾಟಕ, ಭರತನಾಟ್ಯ ಇತ್ಯಾದಿ ಸಾಂಸ್ಕೃತಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಈಜು ಸ್ಪರ್ಧೆ ಶಿರಸಿಯಲ್ಲಿ ಹಾಗೂ ಕುಸ್ತಿ ಸ್ಪರ್ಧೆಯನ್ನು ಹಳಿಯಾಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವೈಯಕ್ತಿಕ ವಿಭಾಗದಲ್ಲಿ 5 ಕ್ಕಿಂತ ಕಡಿಮೆ ಸ್ಪರ್ಧಾಳುಗಳು ಹಾಗೂ ಗುಂಪು ಸ್ಪರ್ಧೆಯಲ್ಲಿ 3ಕ್ಕಿಂತ ಕಡಿಮೆ ತಂಡಗಳು ಭಾಗವಹಿಸಿದ್ದರೆ ಅಂತಹ ಸ್ಪರ್ಧೆಗಳನ್ನು ರದ್ದುಗೊಳಿಸಲಾಗುವುದು. ಓರ್ವ ಕ್ರೀಡಾಪಟು ಗರಿಷ್ಠ 3 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ನಿಗಮ ಮಂಡಳಿ, ಗುತ್ತಿಗೆ ಆಧಾರಿತ ಸರಕಾರಿ ನೌಕರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ 12 ತಾಲೂಕುಗಳ ಸರಕಾರಿ ನೌಕರರು ಡಿ.22, ಸಂಜೆ 5 ಗಂಟೆಯೊಳಗೆ ಗೂಗಲ್ ಫಾರ್ಮನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ನಂತರ ಬಂದವರ ಹೆಸರುಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಸ್ಪರ್ಧಾಳುಗಳಿಗೆ ಗುಣಮಟ್ಟದ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಭಟ್ಕಳದಲ್ಲಿ ನಡೆಯುವ ಜಿಲ್ಲಾ ಸರಕಾರಿ ನೌಕರರ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಶಾಸಕ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಡಿ.30ರಂದು ರಾತ್ರಿ 9 ಗಂಟೆಯಿಂದ 11 ಗಂಟೆಯವರೆಗೆ ರಸಮಂಜರಿ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಸರಕಾರಿ ನೌಕರರಲ್ಲಿ ಇರುವ ಗಾಯಕ, ಗಾಯಕಿಯರಿಗೂ ಅವಕಾಶ ನೀಡಲಾಗುತ್ತದೆ. ಭಟ್ಕಳದಲ್ಲಿ ಈ ಸ್ಪರ್ಧಾಕೂಟವನ್ನು ನಡೆಸಲು ಜಿಲ್ಲಾ ಪ೦ಚಾಯತ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಿಯಾಂಗ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ನಾಯಕ, ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯ ಅಧಿಕಾರಿ ಪ್ರವೀಣ ಅವರ ಸಹಕಾರವೇ ಕಾರಣವಾಗಿದೆ ಎಂದು ವಿವರಿಸಿದರು. ಭಟ್ಕಳ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಯುವಜನಸೇವಾ ಕ್ರೀಡಾ ಇಲಾಖೆಯ ಪ್ರಭಾರ ಅಧಿಕಾರಿ ನಾಗರಾಜ ಪಟಗಾರ, ಡಾ.ಭಾಗೀರಥಿ ನಾಯ್ಕ, ಮಂಜುನಾಥ ನಾಯ್ಕ, ಸುಶೀಲಾ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.