ಕಾರವಾರ : ಜುಲೈ 8ರಂದು ರಾಜ್ಯದ ಎಲ್ಲಾ ಜಿಲ್ಲಾದ್ಯಂತ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಉದ್ದೇಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರ ಡಿ.ಎಸ್ ವಿಜಯ ಕುಮಾರ ರವರು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 36976 ಪ್ರಕರಣಗಳಿದ್ದು, ಅದರಲ್ಲಿ 1831 ಕೇಸ್ ಗಳನ್ನು ಈಗಾಗಲೇ ರಾಜಿಗೆ ಸೂಕ್ತ ಪ್ರಕರಣ ಎಂದು ಗುರುತಿಸಲಾಗಿದ್ದು, ಇನ್ನು ಹಲವು ಪ್ರಕರಣಗಳು ರಾಜಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪ್ರಕರಣಗಳು ಇರುವ ಕಕ್ಷಿಧಾರರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಸ್ವಯಂವಾಗಿ ಭಾಗವಹಿಸಿ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಇದರಿಂದ ರಾಜಿಗಳು ಬೇಗ ಇತ್ಯರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಒಮ್ಮೆ ಲೋಕ ಅದಾಲತ್ ಮುಂದೆ ತೀರ್ಮಾನವಾಯಿತು ಎಂದರೇ ಮತ್ತೆ ಮೇಲೆ ಮೇಲ್ಮಮನವಿಗೆ ಅವಕಾಶ ವಿರುವುದಿಲ್ಲ. ಪ್ರಕರಣಗಳು ಒಂದೇ ಭಾರಿಗೆ ಅಂತಿಮವಾಗಿ ಇತ್ಯರ್ಥವಾಗುತ್ತವೆ . ಹಾಗೆಯೇ ನ್ಯಾಯದ ಶುಲ್ಕ ಪಾವತಿ ಮಾಡಿರುವ ಪಾವತಿ ಶುಲ್ಕ ಸಹ ಮರು ಪಾವತಿಸಲಾಗುತ್ತದೆ ಎಂದರು.
ಅನೇಕ ಪ್ರಕರಣಗಳು ಸಣ್ಣಪುಟ್ಟ ಕಾರಣಗಳಿಗಾಗಿ ರಾಜಿ ಮಾಡಿಕೊಳ್ಳದೆ ಹಾಗೆ ಮುಂದುವರಿಸಿಕೊಂಡು ಬಂದಿರುತ್ತಾರೆ. ಇದರಿಂದ ಸಮಯ, ಹಣ ಹಾಗೂ ಸಂಬಂಧದಲ್ಲಿ ಬಾಂಧವ್ಯ ಉಳಿಯುವುದಿಲ್ಲ. ರಾಜಿಯನ್ನು ಮಾಡಿಕೊಳ್ಳುವುದರಿಂದ ಸಮಯ, ಹಣದ ಜೊತೆಗೆ ಸಂಬಂಧಗಳು ಉಳಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.