ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ತೆಲಂಗಾಣ: ಮತ್ತೆ ಬಂದ್, ರಾಜಕೀಯ ಸಂವಾದದ ಮಾತು

ತೆಲಂಗಾಣ: ಮತ್ತೆ ಬಂದ್, ರಾಜಕೀಯ ಸಂವಾದದ ಮಾತು

Wed, 13 Jan 2010 03:06:00  Office Staff   S.O. News Service

ಕೇಂದ್ರ ಸರಕಾರ ತನ್ನ ಡಿಸೆಂಬರ್ 9ರ ಮಧ್ಯರಾತ್ರಿ ಹೇಳಿಕೆಯಿಂದ ಹಿಂದೆ ಸರಿಯುತ್ತಿದೆ ಎಂದು ಡಿಸೆಂಬರ್ 30ರಂದು ಮತ್ತೆ ಒಂದು ಬಂದ್ ನಡೆದಿದೆ. ಇದೀಗ ನಾಲ್ಕನೇ ಬಂದ್. ಇದರಿಂದಾಗಿ ಮತ್ತೆ ಗೃಹಮಂತ್ರಿಗಳು ಜನವರಿ 5ರಂದು ರಾಜ್ಯದಲ್ಲಿನ ಎಂಟು ಮಾನ್ಯತೆ ಪಡೆದ ಪಕ್ಷಗಳೊಂದಿಗೆ ಸಂವಾದ ನಡೆಸುವುದಾಗಿ ಪ್ರಕಟಿಸಿದ್ದಾರೆ. ತಕ್ಷಣಕ್ಕೆ ಇದರಿಂದಾಗಿ 'ಬಿಸಿ' ತುಸು ಇಳಿದಿದೆ ಎಂದು ಹೇಳಲಾಗಿದೆ, ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಒಳಗಿನ ಬಿಸಿ. ಇದಕ್ಕಾಗಿ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿಯವರಿಗೆ ಕೃತಜ್ಷತೆ ಅರ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ತೆಲಂಗಾಣದ ಮಂತ್ರಿಗಳು ಕೆಲಸ ಮಾಡುತ್ತಿರಲಿಲ್ಲವಂತೆ. ಕಾಂಗ್ರೆಸ್ ತನ್ನ ನಿಲುವನ್ನು ತಿರುಗು ಮುರುಗುಗೊಳಿಸುತ್ತಿಲ್ಲ ಎಂದು ಪಕ್ಷದ ವಕ್ತಾರೆ ಜಯಂತಿ ನಟರಾಜನ್ ಹೇಳಿದರೆ, ಹಿರಿಯ ಕಾಂಗ್ರೆಸ್ ಮುಖಂಡರು ತಿರುಗು ಮುರುಗಾಗಲು ಯುಪಿಎ ಅಂಗಪಕ್ಷಗಳ ವಿರುದ್ಧ ನಿಲುವು ಕಾರಣ ಎಂದು ದೂಷಿಸಿದ್ದಾರಂತೆ.

ಕಾಂಗ್ರೆಸ್ ಮಾತ್ರವೇ.............!

ಈ ನಡುವೆ ಕಾಂಗ್ರೆಸ್ ಮಾತ್ರವೇ ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಶಕ್ತ ಎಂದು ಪ್ರಧಾನ ಮಂತ್ರಿಗಳು ಕಾಂಗ್ರೆಸಿನ 125ನೇ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಹೇಳಿದ್ದಾರೆ. ಅವರ 'ಆಮ್ ಆದ್ಮಿ' 'ದಾಲ್-ರೋಟಿ'ಗೆ ತಡಕಾಡುತ್ತಲೇ 2009ನ್ನು ಮುಗಿಸುತ್ತಿರುವ ವೇಳೆಗೆ ಆರ್ಥಿ ಕ ತಜ್ಷರ ಸಮ್ಮೇಳನದಲ್ಲಿ ಬಡತನ ನಿರೀಕ್ಷಿತ ಮಟ್ಟದಲ್ಲಿ ಇಳಿಯದಿದ್ದರೂ ಆರ್ಥಿಕ ಸುಧಾರಣೆಯಿಂದ ಬಡತನ ಇಳಿಯುತ್ತಿದೆ ಎಂದಿದ್ದಾರೆ.

ವಿದೇಶಾಂಗ ಮಂತ್ರಿಗಳಿಗೆ ಕಿರಿಕಿರಿಯಾದ  ತನ್ನದೇ ಕಿರಿಯ ಮಂತ್ರಿಯ 'ಚಿಲಿಪಿಲಿ'

ವಿದೇಶಾಂಗ ಮಂತ್ರಿ ಕೃಷ್ಣ ರವರು ತಾನೇ 'ಬಾಸ್' ಎಂದು ತನ್ನ ಇಲಾಖೆಯ ಕಿರಿಯ ಮಂತ್ರಿ ಶಶಿ ತರೂರ್ ಗೆ ನೆನಪಿಸಬೇಕಾಗಿ ಬಂದಿದೆ ಎಂದು ಮಾಧ್ಯಮಗಳು ಟಿಪ್ಪಣೆ ಮಾಡಿವೆ. ಈ ಹಿಂದೆಯೇ ಎಲ್ಲಾ ರಾಜಕಾರಣಿಗಳಿಗೆ ಸಲಹೆ, ಬುದ್ಧಿವಾದಗಳನ್ನು ಹೇಳುತ್ತಿದ್ದ ಬುದ್ಧಿಜೀವಿ ಶಶಿ ತರೂರ್ ತಿರುವನಂತಪುರದಿಂದ ಎಡಪಂಥೀಯರನ್ನು 'ಸೋಲಿಸಿ' ಕಾಂಗ್ರೆಸ್ ಎಂ.ಪಿ,ಯಾಗಿ  ತಕ್ಷಣವೇ ಕೇಂದ್ರಮಂತ್ರಿಯೂ ಆದ ಮೇಲೆ ಬಹಳ ಸುದ್ದಿಯಲ್ಲಿದ್ದಾರೆ, ಬಹುಪಾಲು ಇಂಟರ್ನೆಟ್ನಲ್ಲಿ ತಮ್ಮ 'ಟ್ವಿಟರ್'ಗಳಿಂದಾಗಿ. 'ಟ್ವಿಟರ್' ಅಂದರೆ ಚಿಲಿಪಿಲಿ ಎಂದು ಭಾವಾರ್ಥ. ಈ ಪ್ರತಿ ಸುದ್ದಿಯೂ, 'ಚಿಲಿಪಿಲಿ'ಯೂ ಕಾಂಗ್ರೆಸಿಗೆ, ಯುಪಿಎಗೆ ಇರುಸು ಮುರಿಸು ತಂದಿದೆ. ಕಳೆದ ವಾರ ಅಮೆರಿಕನ್ ನಾಗರಿಕ ಹೆಡ್ಲಿಗಡ ವೀಸಾ ನಿರಾಕರಿಸಲು ಹೇಗೆ ತಾನೇ ಸಾಧ್ಯ ಎಂದ ಈತ ಈ ವಾರ ಅದೇ ಹೆಡ್ಲಿ ಪ್ರಸಂಗದ ಹಿನ್ನೆಲೆಯಲ್ಲಿ ವೀಸಾ ನೀಡಿಕೆಯನ್ನು ಬಿಗಿಗೊಳಿಸಬೇಕು ಎಂಬ ತನ್ನದೇ ಇಲಾಖೆಯ ನಿರ್ಧಾರದ ವಿರುದ್ಧ 'ಚಿಲಿಪಿಲಿ' ಮಾಡಿರುವುದು ಕೃಷ್ಣರವರನ್ನು ಕೆರಳಿಸಿದೆಯಂತೆ, ಕಾಂಗ್ರೆಸ್ ಪಕ್ಷಕ್ಕೂ ಬಹಳ ಅಸಮಾಧಾನವಾಗಿದೆಯಂತೆ.

ಎಂ.ಪಿ.ಗಳ ಹಣಕಾಸು ಮಾಹಿತಿ ನಿಮಗೇಕೆ?

ಹೀಗೆಂದು ರಾಜ್ಯಸಭೆಯ ನೈತಿಕ ಸಮಿತಿ ಈ ಪ್ರಶ್ನೆ ಮತದಾರರನ್ನು ಪ್ರಶ್ನಿಸುತ್ತಿದ್ದೆಯೇ? ಮಾಹಿತಿ ಹಕ್ಕಿನ ಕಾನೂನಿನ ಅಡಿಯಲ್ಲಿ ರಾಜ್ಯಸಭಾ ಸದಸ್ಯರಿಗೂ ಉದ್ದಿಮೆಗಳಿಗೂ ಇರುವ ಸಂಬಂಧವೇನು, ಅವರ ಹಣಕಾಸು ಹಿತಾಸಕ್ತಿಗಳೇನು ಎಂದು ಜನತೆಗೆ ತಿಳಿಯಬೇಕು ಎಂದು ಒಬ್ಬರು ಕೇಳಿದಾಗ ಇಂತಹ ಮಾಹಿತಿಗಳನ್ನು ಕೊಡುವುದರಿಂದ 'ಸಾರ್ವಜನಿಕ ಹಿತಾಸಕ್ತಿಗೇನೂ ಪ್ರಯೋಜನವಿಲ್ಲ' ಎಂದಿರುವ ಆ ಸಮಿತಿ ಇಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿಲ್ಲ ಎಂದಿದೆಯಂತೆ. ತಮ್ಮ ಹಣಕಾಸು ಮತ್ತು ವ್ಯಾವಹಾರಿಕ ಕ್ಷೇತ್ರಗಳಿಗೆ ಸಂಬಂಧಪಟ್ಟ ಸಂಸದೀಯ ಸಮಿತಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನಗಳು ವಿವಾದವನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಬಂದಿದೆ.

ಮಾಹಿತಿ ಹಕ್ಕು ಇದೆ, ಆದರೆ.........

ಮಾಹಿತಿ ಹಕ್ಕು ಕಾನೂನು ಯುಪಿಎ-1 ಆಡಳಿತದ ಒಂದು ಪ್ರಮುಖ ಸಾಧನೆ ಯೆಂದು ಪರಿಗಣಿಸಲಾಗಿದೆ. ಇದರ ಹಿಂದೆ ಎಡಪಕ್ಷಗಳ ಒತ್ತಡವಿತ್ತು ಬೇರೆ ಹೇಳಬೇಕಾಗಿಲ್ಲ. 2005ರಲ್ಲಿ ಇದು ಬಂತು. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತಕ್ಕೆ ಸಂಬಂಧಪಟ್ಟಂತೆ ಕೇಳುವ ಯಾವುದೇ ಮಾಹಿತಿಯನ್ನು 30 ದಿನಗಳಲ್ಲಿ ಒದಗಿಸಬೇಕು. 2007-08ರಲ್ಲಿ ಮಾಹಿತಿ ಕೇಳಿ 2,63,261 ಅರ್ಜಿಗಳು ಬಂದಿದ್ದುವಂತೆ. ಒಂದು ಸರ್ವೆಯ ಪ್ರಕಾರ 13 ಶೇ. ಗ್ರಾಮೀಣ ಜನರಿಗೆ ಹಾಗೂ 33 ಶೇ. ನಗರವಾಸಿಗಳಿಗೆ ಈ ಕಾನೂನು ಇದೆ ಎಂಬುದು ತಿಳಿದಿದೆ. ಆದರೆ 75 ಶೇ. ನಾಗರಿಕರಿಗೆ ತಾವು ಪಡೆದಿರುವ ಮಾಹಿತಿಯ ಬಗ್ಗೆ ತೃಪ್ತಿಯಿಲ್ಲವಂತೆ.

ಮಾವೋವಾದಿಗಳಿಗೆ ಮಮತಾ ಬ್ಯಾನರ್ಜಿ ಸವಾಲು?

ರೈಲು ಹಳಿಗಳಲ್ಲಿ ಬಾಂಬು ಇಡುವುದು ನಿಲ್ಲಿಸಿ, ಮಾತುಕತೆಗೆ ಬನ್ನಿ ಎಂದು ಮಮತಾ ಬ್ಯಾನರ್ಜಿ ಮಾವೋವಾದಿಗಳಿಗೆ ಹೇಳಿದ್ದಾರಂತೆ. ಹೌರಾದಲ್ಲಿ ಹೊಸ ರೈಲ್ವೆ ಸಂಕೀರ್ಣವನ್ನು ಹಾಗು ಒಂದಷ್ಟು ಹೊಸ ರೈಲುಗಳನ್ನು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಶ್ಚಿಮ ಬಂಗಾಳ ಮತ್ತು ಇತರೆಡೆಗಳಲ್ಲಿ ರೈಲ್ವೆ ಹಳಿಗಳಲ್ಲಿ ಬುಡಮೇಲು ಕೃತ್ಯಗಳನ್ನು ಮಾಡಿ ಜನಗಳನ್ನು ಸಾಯಿಸುವ ಬದಲು ತನ್ನನ್ನು ರಾಜಕೀಯವಾಗಿ ಎದುರಿಸಿ ಎಂದು ಸವಾಲು ಹಾಕಿದರಂತೆ. ಲಾಲ್ಗಡದಲ್ಲಿ  ಮಾವೋವಾದಿಗಳ ಹಿಂಸಾಚಾರವನ್ನು ನಿಲ್ಲಿಸಲು ಆರಂಭಿಸಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಈಕೆ ಮತ್ತು ಇವರ ತೃಣಮೂಲ ಕಾಂಗ್ರೆಸ್ ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.

 

ಸೌಜನ್ಯ: ಜನಶಕ್ತಿ 


Share: