ಚಾಮರಾಜನಗರ: ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲ್ವಾಡಿಯ ಬಿಳಿ ಕಲ್ಲು ಕ್ವಾರಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಕಾಗಲವಾಡಿ ಮೋಳೆ ಗ್ರಾಮದ ಕುಮಾ (28), ಶಿವರಾಜು (35) ಹಾಗೂ ಸಿದ್ದರಾಜು (27) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ತಮಿಳುನಾಡು ಮೂಲದ ಭಾಸ್ಕರ್ ಎಂಬವರ ಪತ್ನಿ ರೇಣುಕಾದೇವಿ ಎಂಬವರಿಗೆ ಸೇರಿದ ಬಿಳಿಕಲ್ಲು ಕ್ವಾರಿ ಎಂದು ತಿಳಿದುಬಂದಿದೆ.
ಕಾರ್ಮಿಕರೊಬ್ಬರು ಕ್ವಾರಿಯ ಗೋಡೆಯ ಮಧ್ಯದಲ್ಲಿ ಕಲ್ಲು ಸ್ಫೋಟಿಸಲು ಕುಳಿ ಹೊಡೆಯುತ್ತಿದ್ದರು. ಇನ್ನಿಬ್ಬರು ಕೆಳಗಡೆ ನಿಂತು ಅವರಿಗೆ ನೆರವಾಗುತ್ತಿದ್ದರು. ಈ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿ ತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಶೀಲ್ದಾ ಬಸವರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮಡಹಳ್ಳಿಯಗುಮ್ಮಕಲ್ಲುಗುಡ್ಡದ ಕಲ್ಲು ಕ್ವಾರಿಯಲ್ಲಿ ಕಳೆದ ಮಾರ್ಚ್ 4ರಂದು ಬಂಡೆ ಕುಸಿದು ಬಿಹಾರ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.