ಕಾರವಾರ : ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಶನಿವಾರ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸಿಎಂ ಹಾಸ್ಟೆಲ್, ಗ್ರಂಥಾಲಯ, ಎನ್ಆರ್ಎಲ್ಎಂ ವರ್ಕ್ ಶೆಡ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೊಟೆಗಾಳಿ ಗ್ರಾಮದಲ್ಲಿರುವ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಒ, ಕುಡಿಯುವ ನೀರಿನ ಮೂಲಗಳ ಬಗ್ಗೆ ವಿಚಾರಿಸಿ ಆಗಾಗ ನೀರಿನ ಪರೀಕ್ಷೆ ನಡೆಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗಲೆಂದು ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ರಂಥಾಲಯ ನಾಮ ಮಾತ್ರವಾಗಿದ್ದು, ತ್ವರಿತವಾಗಿ ಗ್ರಂಥಾಲಯಕ್ಕೆ ಅವಶ್ಯಕವಿರುವ ಪುಸ್ತಕಗಳು, ಕಂಪ್ಯೂಟರ್ ಹಾಗೂ ಪೀಠೋಪಕರಣಗಳ ವ್ಯವಸ್ಥೆಯಾಗಬೇಕು. ಹಾಸ್ಟೆಲ್ ಆರಂಭವಾದಾಗಿನಿಂದ ಮಕ್ಕಳಿಗೆ ಕಿಟ್ ವ್ಯವಸ್ಥೆ ಕಲ್ಪಿಸಿಲ್ಲ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದಲ್ಲಿ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಹಣಕೋಣ ಗ್ರಾಮ ಪಂಚಾಯತ್ನ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ವೀಕ್ಷಿಸಿ ಗ್ರಂಥಾಲಯ ಉತ್ತಮವಾಗಿ ನಿರ್ಮಾಣವಾಗಿದೆ. ಕಾಮಗಾರಿ ಆದಷ್ಟೂ ಶೀಘ್ರ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ತದನಂತರ ಘಾಡಸಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಜಾಗದ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಜಾಗದಲ್ಲಿನ ಮರಗಳನ್ನು ತೆರವುಗೊಳಿಸಿ ಅಲ್ಲಿಯೇ ಘಟಕ ಹಾಗೂ ಎನ್ಆರ್ಎಲ್ಎಮ್ ವರ್ಕ್ ಶೆಡ್ ನಿರ್ಮಿಸುವಂತೆ ಹಾಗೂ ಪಂಚಾಯತ್ ಕಟ್ಟಡವನ್ನು ಜಿಲ್ಲಾ ಪಂಚಾಯತ್ ಅಧಿನದಲ್ಲಿರುವ ಗೋಮಾಳ ಜಾಗದಲ್ಲಿ ನಿರ್ಮಿಸಿಕೊಳ್ಳಲು ಸಲಹೆ ನೀಡಿದರು. ಈ ವೇಳೆ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಶಾಲಾ ಕಾಂಪೌಂಡ್ ವೀಕ್ಷಿಸಿದರು. ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ಪಂಚಾಯತ್ ಸಿಬ್ಬಂದಿಗಳ ಬಗ್ಗೆ ವಿಚಾರಣೆ ನಡೆಸಿದರು.
ನಂತರ ಮುಡಗೇರಿ ಗ್ರಾಮ ಪಂಚಾಯತ್ನ ಅರ್ಥಲಾವ ಕೆರೆಗೆ ಭೇಟಿ ಕೊಟ್ಟು ಪ್ರವಾಸಿ ತಾಣದಂತಿರುವ ಈ ಅಭಿವೃದ್ಧಿಪಡಿಸಿ ಕೆರೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆನಂದಕುಮಾರ ಬಾಲಪ್ಪನವರ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ, ಪಿಆರ್ಇಡಿ ಎಇಇ, ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ವಸತಿ ನಿಲಯದ ಮೇಲ್ವಿಚಾರಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಹಾಗೂ ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.