ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೃಹಬಳಕೆ ಎಲ್‌ಪಿಜಿ ದರ ಸಾವಿರದ ಸನಿಹಕ್ಕೆ! 50ರೂ ಹೆಚ್ಚಳ

ಗೃಹಬಳಕೆ ಎಲ್‌ಪಿಜಿ ದರ ಸಾವಿರದ ಸನಿಹಕ್ಕೆ! 50ರೂ ಹೆಚ್ಚಳ

Mon, 09 May 2022 12:41:58  Office Staff   Vb

ಹೊಸದಿಲ್ಲಿ: ಕಳೆದ ವಾರವಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆಯ ಆಘಾತ ನೀಡಿದ್ದ ಕೇಂದ್ರ ಸರಕಾರ ಗಾಯದ ಮೇಲೆ ಬರೆ ಎಳೆದಂತೆ ಶನಿವಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಏರಿಕೆ ಇಂದಿನಿಂದಲೇ ಜಾರಿಗೊಂಡಿದ್ದು, ದಿಲ್ಲಿಯಲ್ಲಿ ಈಗ 14.5 ಕೆ.ಜಿ.ಎಲ್‌ಪಿಜಿ ಸಿಲಿಂಡರ್‌ ಬೆಲೆ 999.50 ರೂ.ಆಗಿದೆ.

ಮೇ 1ರಂದು ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್‌ನ ಬೆಲೆಯನ್ನು 102 ರೂ.ಹೆಚ್ಚಿಸಲಾಗಿದ್ದು, ಅದು ದಿಲ್ಲಿಯಲ್ಲಿ 2,355.50 ರೂ.ಗೆ ತಲುಪಿದೆ. ಐದು ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನೂ 569 ರೂ.ನಿಂದ 655 ರೂ.ಗೆ ಹೆಚ್ಚಿಸಲಾಗಿತ್ತು. ಸ್ಥಳೀಯ ತೆರಿಗೆ ಗಳನ್ನು ಅವಲಂಬಿಸಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ಮಾ.10ರಂದು ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ಗಳು ಪ್ರಕಟವಾದ ಬಳಿಕ ಎಲ್‌ ಪಿಜಿ ಮತ್ತು ಇಂಧನ ಬೆಲೆಗಳನ್ನು ಹಲವಾರು ಸಲ ಹೆಚ್ಚಿಸಲಾಗಿದೆ. 

ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ಕೋಟ್ಯಂತರ ಭಾರತೀಯ ಕುಟುಂಬಗಳು ತೀವ್ರ ಹಣದುಬ್ಬರ, ನಿರುದ್ಯೋಗ ಮತ್ತು ಕಳಪೆ ಆಡಳಿತದ ವಿರುದ್ಧ ಕಠಿಣ ಹೋರಾಟವನ್ನು ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವು ಎಲ್‌ಪಿಜಿ ಸಿಲಿಂಡರ್ ಬೆಲೆಏರಿಕೆಯನ್ನು  ಹಿಂದೆಗೆದು ಕೊಳ್ಳಬೇಕು ಮತ್ತು ಅದನ್ನು 2014ರಲ್ಲಿದ್ದ ಸಬ್ಸಿಡಿ ದರದ ಮಟ್ಟಕ್ಕೆ ಇಳಿಸಬೇಕು ಎಂದಿರುವ ರಾಹುಲ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಡಿ ಎಲ್‌ಪಿಜಿ ಸಿಲಿಂಡರ್ ಬೆಲೆ 414 ರೂ.ಆಗಿತ್ತು ಮತ್ತು ಪ್ರತಿ ಸಿಲಿಂಡರ್‌ಗೆ 827 ರೂ.ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಇಂದು ಸಿಲಿಂಡರ್‌ ಬೆಲೆ 999 ರೂ.ಆಗಿದೆ ಮತ್ತು ಸಬ್ಸಿಡಿ ಶೂನ್ಯಕ್ಕಿಳಿದಿದೆ ಎಂದರು.


Share: