ಕಾರವಾರ : ರಾಜ್ಯದ ಬಡವರು, ಜನಸಾಮಾನ್ಯರಿಗೆ ಅನುಕೂಲವಾಗಲು ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಹೇಳಿದರು.
ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶನಿವಾರ "ಗೃಹಜ್ಯೋತಿ" ಯೋಜನೆಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಿ ಅವರು ಮಾತನಾಡಿದರು.
ಗೃಹಜ್ಯೋತಿ ಯೋಜನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಪ್ರತಿವರ್ಷಕ್ಕೆ 300 ಕೋಟಿ ರೂಪಾಯಿಗಳನ್ನು ಸರಕಾರವು ನೀಡಲಿದೆ. ಇದು ಮಕ್ಕಳ ಶಿಕ್ಷಣ ಹಾಗೂ ಬಡ ಕುಟುಂಬಗಳ ನಿರ್ವಹಣೆಗೆ ಈ ಯೋಜನೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಗೃಹಜ್ಯೋತಿ ಯೋಜನೆಯಿಂದ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. 200 ಯುನಿಟ್ ಗಿಂತ ಹೆಚ್ಚಿನ ಯುನಿಟ್ ಬಳಸಿದ್ದಲ್ಲಿ ಪೂರ್ತಿ ಯನಿಟ್ ನ ವಿದ್ಯುತ್ ಬಿಲ್ಲು ಕಟ್ಟಬೇಕು. ಎಂದರು.
ಚುನಾವಣೆಯಲ್ಲಿ ನೀಡಿರುವ ಗ್ಯಾರಂಟಿಯ ಪ್ರಕಾರ "ಗೃಹಜ್ಯೋತಿ" ಯೋಜನೆಯನ್ನು ಅನುಷ್ಢಾನಗೊಳಿಸುವ ಮೂಲಕ ನಮ್ಮ ಸರಕಾರವು ನುಡಿದಂತೆ ನಡೆದಿದೆ. ಇನ್ನುಳಿದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳನ್ನು ಸದ್ಯದಲ್ಲೇ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲೆ ಈಗಾಗಲೇ ಗೃಹಜ್ಯೋತಿ ಯೋಜನೆಯಡಿ 3,26,978 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
ಶಾಸಕ ಭೀಮಣ್ಣ ಟಿ ನಾಯ್ಕ ಮಾತನಾಡಿ, ಗೃಹಜ್ಯೋತಿಯು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಹಸಿವು ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಈಗಾಗಲೇ 5 ಕೆ.ಜಿ. ಅಕ್ಕಿಯ ಜತೆ ಉಳಿದ 5 ಕೆ.ಜಿ. ಅಕ್ಕಿಯ ಮೊತ್ತವನ್ನು ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಜಮಾ ಮಾಡಗಿದೆ ಎಂದು ಹೇಳಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಬಡವರ ಹಿತರಕ್ಷಣೆಗಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಗೃಹಜ್ಯೋತಿ ಯೋಜನೆಯು ಪ್ರತಿ ಕುಟುಂಬಕ್ಕೆ ತಲುಪಿಸಲಾಗುವುದು. ಗೃಹಲಕ್ಷ್ಮೀ ಯೋಜನೆ ಕೂಡ ಇನ್ನು ಕೆಲವೇ ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. ಬಡವರಪರ ಕಾಳಜಿ ಇರುವುದರಿಂದ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಸರ್ಕಾರದ ಅರ್ಥಪೂರ್ಣ ಯೋಜನೆ ಗೃಹ ಜ್ಯೋತಿ ಯೋಜನೆಯು ಕರ್ನಾಟಕ ಇತಿಹಾಸದಲ್ಲೆ ಪ್ರಥಮವಾಗಿ ಜಾರಿಗೆ ತರಲಾಗಿದೆ. 200 ಯುನಿಟ್ ಒಳಗೆ ಬಳಕೆ ಮಾಡುವವರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಇಲ್ಲವಾದಲ್ಲಿ ಪೂರ್ಣ ಪ್ರಮಾಣದ ಮೊತ್ತವನ್ನು ಕಟ್ಟಬೇಕು. ಹಾಗೆಯೇ ಜೂನ್ ತಿಂಗಳಿನ ಅಂತ್ಯದವರೆಗೆ ಬಾಕಿ ಇರುವ ಮೊತ್ತವನ್ನು ಕಟ್ಟಲೇಬೇಕು.
ಜಿಲ್ಲೆಯಲ್ಲಿ 4,18,592 ಯೋಜನೆಯ ಪಲಾನುಭವಿಗಳಿದ್ದು, ಅದರಲ್ಲಿ ಈಗಾಗಲೇ 3,26,978 ಪಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ 91,614 ಪಲಾನುಭವಿಗಳು ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳುವಂತೆ ಡಿಸಿ ಹೇಳಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದೂ, ಹೆಸ್ಕಾಂ ಶಿರಶಿ ವೃತ್ತದ ಅಧೀಕ್ಷಕ ಇಂಜಿನಿಯರ್ ದೀಪಕ ಬಿ ಕಾಮತ, ಹೆಸ್ಕಾಂ ಇಲಾಖೆಯ ಇತರೆ ಅಧಿಕಾರಿಗಳು, ಪಲಾನುಭವಿಗಳು, ಇತರರು ಇದ್ದರು.