ಬೆಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ.
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿತ್ತು.
ನನ್ನ ಸಾವಿಗೆ ಈಶ್ವರಪ್ಪ ಕಾರಣ. 40 ಪರ್ಸೆಂಟ್ ಕಮಿಷನ್ ಕೊಡುವಂತೆ ಸಚಿವ ಈಶ್ವರಪ್ಪ ಒತ್ತಾಯಿಸಿದ್ದರು ಎಂದು ಮೃತಪಡುವ ಮುನ್ನ ಸಂತೋಷ ಪಾಟೀಲ್ ನೇರ ಆರೋಪ ಮಾಡಿದ್ದರು.
ಉಡುಪಿಯ ಲಾಡ್ಜ್‌ವೊಂದರಲ್ಲಿ ಗುತ್ತಿಗೆದಾರ ಸಂತೋಷ ಶವವಾಗಿ ಪತ್ತೆಯಾಗಿದ್ದರು. ಸಾಯುವ ಮುನ್ನ ವಾಟ್ಸ್ ಆ್ಯಪ್ ಮೂಲಕ ಮಾಧ್ಯಮದವರಿಗೆ ಸಂದೇಶ ರವಾನಿಸಿದ್ದರು. ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದೂ ದೂರಿದ್ದರು.
ಆದರೆ ನಿನ್ನೆಯಷ್ಟೆ ಪ್ರತಿಕ್ರೀಯಿಸಿದ ಈಶ್ವರಪ್ಪ ನನಗೂ ಅವರ ಸಾವಿಗೂ ಯಾವುದೇ ಸಂಬಂಧ ಇಲ್ಲ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ. ಎಂದಿದ್ದರು.
ಅದರೆ ಸಂತೋಷ್ ಆತ್ಮಹತ್ಯೆ ಪ್ರಕರಣ ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಶ್ವರಪ್ಪನನ್ನು ಬಂಧಿಸಬೇಕು, ಮೃತನ ಕುಟುಂಬಕ್ಕೆ ಸರ್ಕಾರ 1 ಕೋಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಅಹೋರಾತ್ರಿ ಧರಣಿ ಆರಂಭಿಸಿದ್ದರು. ಇವೆಲ್ಲ ಬೆಳವಣಿಗೆ ಮಧ್ಯೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.