ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗುಜರಾತ್: ದೋಣಿ ದುರಂತ 14 ಶಾಲಾ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರ ಸಾವು

ಗುಜರಾತ್: ದೋಣಿ ದುರಂತ 14 ಶಾಲಾ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರ ಸಾವು

Fri, 19 Jan 2024 14:50:23  Office Staff   Vb/S O News

ಗಾಂಧಿನಗರ: ಗುಜರಾತ್ ವಡೋದರ ನಗರದ ಹೊರವಲಯದಲ್ಲಿರುವ ಹರಣಿ ಸರೋವರದಲ್ಲಿ ಗುರುವಾರ ದೋಣಿ ಮಗುಚಿ ಅದರಲ್ಲಿದ್ದ ಇಬ್ಬರು ಶಿಕ್ಷಕರು ಹಾಗೂ 14 ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.

ದುರಂತಕ್ಕೆ ಒಳಗಾದ ದೋಣಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಖಾಸಗಿ ಶಾಲೆಯ 27 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು. ಯಾರೊಬ್ಬರೂ ಜೀವ ರಕ್ಷಕ ಜಾಕೆಟ್ ಧರಿಸಿರಲಿಲ್ಲ. ಈ ದುರ್ಘಟನೆ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

'ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿ ಹರಣಿ ಸರೋವರದಲ್ಲಿ ಗುರುವಾರ ಅಪರಾಹ್ನ ಮಗುಚಿ ದುರಂತ ಸಂಭವಿಸಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಇತರ ವಿದ್ಯಾರ್ಥಿಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ" ಎಂದು ವಡೋದರ ಅಗ್ನಿ ಶಾಮಕ ದಳದ ಮುಖ್ಯಾಧಿಕಾರಿ ಪಾರ್ಥ ಬ್ರಹ್ಮಭಟ್ ತಿಳಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತನ್ನ 'ಎಕ್ಸ್'ನ ಪೋಸ್ಟ್‌ನಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸುವ ಮುನ್ನ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.


Share: