ಬೆಂಗಳೂರು,ಏ,೧೯-ಕೇಂದ್ರ ಸಚಿವ ಶಶಿ ತರೂರ್ ತಲೆದಂಡದ ಬೆನ್ನಲ್ಲೇ ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಇದೀಗ ಕಳಂಕಿತ ಸಚಿವರಾದ ಜನಾರ್ಧನ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.
ದೆಹಲಿಯಲ್ಲಿ ಕೇಂದ್ರದ ಸಾಗರೋತ್ತರ ಸಚಿವ ವಯಲಾರ್ ರವಿ ಹಾಗೂ ಅಭಿಷೇಕ್ ಸಿಂಘ್ವಿ ಅವರು ಈ ಸಮರಕ್ಕೆ ಚಾಲನೆ ನೀಡಿದ್ದರೆ ಕರ್ನಾಟಕದಲ್ಲಿ ಕೆಪಿಸಿಸಿ ನಾಯಕ ಆರ್.ವಿ.ದೇಶಪಾಂಡೆ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಕತ್ತಿ ಝಳಪಿಸಿದ್ದಾರೆ.
ವಯಲಾರ್ ರವಿ ಹಾಗೂ ಅಭಿಷೇಕ್ ಸಿಂಘ್ವಿ ಅವರುಗಳು ಕೇಂದ್ರ ಸಚಿವ ಸಂಪುಟಕ್ಕೆ ಶಶಿ ತರೂರ್ ರಾಜೀನಾಮೆ ನೀಡಿರುವುದನ್ನು ಮಾದರಿಯಾಗಿಟ್ಟುಕೊಂಡು ಕರ್ನಾಟಕದಲ್ಲಿ ಕಳಂಕಿತರಾಗಿರುವ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ.
ಈ ಹೋರಾಟಕ್ಕೆ ಕರ್ನಾಟಕದಲ್ಲಿ ಬಿರುಸು ನೀಡಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ,ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಎಂಬುದೇನಾದರೂ ಇದ್ದರೆ ಗಣಿರೆಡ್ಡಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಿದ್ಧರಾಮಯ್ಯ ಮಾತನಾಡಿ,ತಮ್ಮ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಮಾಡಬಾರದ ತಪ್ಪು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗೋಳಾಡಿದ್ದರು.ಅರ್ಥಾತ್ ಗಣಿರೆಡ್ಡಿ ಸಚಿವರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂಬುದನ್ನು ಸೂಚಿಸಿದರು.
ಈ ಗಣಿರೆಡ್ಡಿಗಳು ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ.ಅವರನ್ನು ಸಚಿವ ಸಂಪುಟದಲ್ಲಿಟ್ಟುಕೊಳ್ಳುವ ಬದಲು ತಕ್ಷಣವೇ ಅವರನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತ್ಯೇಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ,ಕಳಂಕಿತ ಗಣಿರೆಡ್ಡಿ ಸಚಿವರನ್ನು ಇಟ್ಟುಕೊಂಡು ಯಡಿಯೂರಪ್ಪ ಎಷ್ಟು ದಿನ ಮುಂದುವರಿಯುತ್ತಾರೆ?ಎಂದು ಪ್ರಶ್ನಿಸಿದರು.
ನಿಜಕ್ಕೂ ಯಡಿಯೂರಪ್ಪ ಅವರಿಗೆ ಆತ್ಮಗೌರವ ಎಂಬುದಿದ್ದರೆ ತಕ್ಷಣವೇ ಲೂಟಿಕೋರ ಸಚಿವರನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ ಅವರು,ಆ ಮೂಲಕ ತಮ್ಮ ಗೌರವವನ್ನು ಯಡಿಯೂರಪ್ಪ ಉಳಿಸಿಕೊಳ್ಳಬೇಕು ಎಂದರು.
ಗಣಿರೆಡ್ಡಿಗಳ ದುಡ್ಡಿನಲ್ಲಿ ಯಡಿಯೂರಪ್ಪ ಚುನಾವಣೆ ನಡೆಸಿದರು.ಆದರೆ ಎಷ್ಟು ದಿನ ಅಂತ ಈ ರೀತಿ ಮಾಡುತ್ತಾರೆ?ಎಂದು ಪ್ರಶ್ನಿಸಿದ ಅವರು,ಕರ್ನಾಟಕವನ್ನು ಲೂಟಿ ಮಾಡುತ್ತಿರುವವರನ್ನು ಅವರು ಸಂಪುಟದಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.