ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಪು: ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಲಿ: ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್ ದಶಮಾನೋತ್ಸವ ಮಹಾಸಮ್ಮೇಳನ ಉದ್ಘಾಟಿಸಿದ ಅಲ್‌ಹಾಜ್ ಅಲಿ ಕುಂಞಿ ಮುಸ್ಲಿಯಾರ್

ಕಾಪು: ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಲಿ: ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್ ದಶಮಾನೋತ್ಸವ ಮಹಾಸಮ್ಮೇಳನ ಉದ್ಘಾಟಿಸಿದ ಅಲ್‌ಹಾಜ್ ಅಲಿ ಕುಂಞಿ ಮುಸ್ಲಿಯಾರ್

Sat, 12 Dec 2009 16:55:00  Office Staff   S.O. News Service
ಕಾಪು, ಡಿ.೧೨: ಎಲ್ಲ ಧರ್ಮೀಯರು ಪರಸ್ಪರ ಪ್ರೀತಿಯಿಂದ ಬದುಕುವ ಮೂಲಕ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗ ಬೇಕಾಗಿದೆ. ಇತರ ಧರ್ಮಿಯರನ್ನು ಗೌರವದಿಂದ ಕಾಣುವ ಮೂಲಕ ಸಹಬಾಳ್ವೆ ನಡೆಸಬೇಕೆಂದು ಅಲ್ ಹಾಜ್ ಅಲಿ ಕುಂಞಿ ಮುಸ್ಲಿಯಾರ್ ಪೊಯತ್ತಬೈಲ್ ಹೇಳಿದ್ದಾರೆ.

ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಂಸ್ಥೆ ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್‌ನ ದಶಮಾನೋತ್ಸವ ಮಹಾಸಮ್ಮೇಳನ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
15637_1.jpg

ಅಲ್ಲಾಹು ಹಾಗೂ ಅವನ ಪ್ರವಾದಿ ಹೇಳಿರುವ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಅದರಂತೆ ನಡೆಯಬೇಕು. ಯಾವುದೇ ಕಾರ್ಯವನ್ನು ಮಾಡುವಾಗ ದೇವರು ನಮ್ಮನ್ನು ನೋಡುತ್ತಿರುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು. ಮಕ್ಕಳಿಗೆ ಧಾರ್ಮಿಕ ಹಾಗೂ ಮಾನಯ ಮೌಲ್ಯಗಳನ್ನು ಬೋಧಿಸುವ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅಲಿ ಕುಂಞಿ ಮುಸ್ಲಿಯಾರ್  ತಿಳಿಸಿದರು.
15637_2.jpg

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ರಶೀದ್ ಝೈನಿ, ಅಬೂಸುಪ್ಯಾನ್ ಇಬ್ರಾಹೀಂ ಮದನಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಯ್ಯಿದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್, ಮಂಜನಾಡಿ ಅಲ್‌ಮದೀನಾ ಅಧ್ಯಕ್ಷ ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್, ಅಲ್‌ಹಾಜ್ ಮುಹಮ್ಮದ್ ಬಾಖವಿ ಪೂಂಜಾಲ್‌ಕಟ್ಟೆ, ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ವಳವೂರು ಮುಹಮ್ಮದ್ ಸ‌ಅದಿ, ಸುನ್ನಿ ಗೈಡೆನ್ಸ್‌ಬ್ಯೂರೊ ಕಾರ್ಯದರ್ಶಿ ತೋಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಮುಳೂರು ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಮದನಿ,  ಹಾರೂನ್ ಅಹ್ಸನಿ ಕೋಟೆಕಾರ್, ಇಸ್ಮಾಯೀಲ್ ಮೊದಲಾದವರು ಉಪಸ್ಥಿತರಿದ್ದರು.

ಮರ್ಕಝ್ ತ‌ಅಲೀಮಿಲ್ ಇಹ್ಸಾನ್‌ನ ಮ್ಯಾನೇಜರ್ ಮೌಲಾನ ಯು.ಕೆ.ಮುಸ್ತಫಾ ಸ‌ಅದಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಮಾಸ್ಟರ್ ಪಯ್ಯಾರ್ ವಂದಿಸಿದರು.
15637_3.jpg

ಅಧ್ಯಾಪಕರು ಹೊಸ ವಿಚಾರಗಳ  ಅನ್ವೇಷಣೆಯಲ್ಲಿ ತೊಡಗಲಿ: ಸಮ್ಮೇಳನದಲ್ಲಿ ನಡೆದ ಮು‌ಅಲ್ಲಿಂ ಸಮಾವೇಶದಲ್ಲಿ ಬಶೀರ್ ಮುಸ್ಲಿಯಾರ್ ಚೆರೂಪ

ಅಧ್ಯಾಪಕರು ಹೊಸ ಹೊಸ ವಿಷಯಗಳ ಅನ್ವೇಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾ ಗಿದೆ. ಇದರಿಂದ ಜ್ಞಾನವೃದ್ಧಿಯಾಗಿ ವೃತ್ತಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಕೇರಳದ ಬಶೀರ್ ಮುಸ್ಲಿಯಾರ್ ಚೆರೂಪ ಅಭಿಪ್ರಾಯಪಟ್ಟಿದ್ದಾರೆ.

ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್‌ನ ದಶಮಾನೋತ್ಸವ ಮಹಾಸಮ್ಮೇಳನದ ಅಂಗವಾಗಿ ಶನಿವಾರ ಆಯೋಜಿಸಲಾದ ಮು‌ಅಲ್ಲಿಂ ಸಮಾವೇಶ ದಲ್ಲಿ ಅವರು ‘ದೀನಿ ದ‌ಅವಾ ಕ್ಷೇತ್ರದಲ್ಲಿ ಮು‌ಅಲ್ಲಿಮರ ಹೊಣೆಗಾರಿಕೆಗಳು’ ಕುರಿತು ವಿಷಯ ಮಂಡಿಸಿದರು.

ಕೇವಲ ಸೀಮಿತವಾದ ವಿಷಯಗಳನ್ನು ಮಾತ್ರ ಮಕ್ಕಳಿಗೆ ಕಲಿಸದೆ ಸಮಾಜದ ಉನ್ನತಿಯ ದೃಷ್ಟಿಯಲ್ಲಿ ಹಲವು ಉತ್ತಮ ವಿಚಾರಗಳನ್ನು ಅವರಿಗೆ  ಬೋಧಿಸಬೇಕಾಗಿದೆ. ಅದು ಇಂದಿನ ಅನಿವಾರ್ಯತೆ ಯಾಗಿದೆ ಎಂದು ಬಶೀರ್ ಮುಸ್ಲಿಯಾರ್ ತಿಳಿಸಿದರು.

ಸಮಾವೇಶವನ್ನು ಜಂಇಯ್ಯತುಲ್ ಮು‌ಅಲ್ಲಿಮೀನ್ ಗುರುಪುರ ರೇಂಜ್ ಅಧ್ಯಕ್ಷ ಪಿ.ಎಸ್.ಉಮರ್ ಫೈಝಿ ಉದ್ಘಾಟಿಸಿದರು. ಅಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ದು‌ಆ: ನೆರವೇರಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಎಸ್‌ಇಡಿಸಿ ಅಧ್ಯಕ್ಷ ಆತೂರು ಸ‌ಅದ್ ಮುಸ್ಲಿಯಾರ್ ವಹಿಸಿದ್ದರು.

ಸಯ್ಯಿದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್, ಜಂಇಯ್ಯತುಲ್ ಮು‌ಅಲ್ಲಿಮೀನ್ ಕಣ್ಣಂಗಾರ್ ರೇಂಜ್ ಅಧ್ಯಕ್ಷ ಅಲ್‌ಹಾಜ್ ಬಿ.ಕೆ. ಅಬೂಬಕರ್ ಮುಸ್ಲಿಯಾರ್, ಉಡುಪಿ ರೇಂಜ್ ಅಧ್ಯಕ್ಷ ಮುಹಮ್ಮದ್ ಹನೀಫ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಎಂ.ಇ.ಅಬ್ದುಲ್ ಗಫೂರ್ ಸಖಾಫಿ ಮಂಜನಾಡಿ ಸ್ವಾಗತಿಸಿದರು. ಬಿ.ಎ.ಅಬ್ದುಸ್ಸಲಾಂ ಸ‌ಅದಿ ಪಾಣೆಮಂಗಳೂರು ವಂದಿಸಿದರು.

ದರ್ಗಾ ಝಿಯಾರತ್: ಬೆಳಗ್ಗೆ ಮೂಳೂರು ಅಲ್‌ಇಹ್ಸಾನ್ ದರ್ಸ್ ಮುದರ್ರಿಸ್ ಅಲ್‌ಹಾಜ್ ಮುಹಮ್ಮದ್ ಬಾಖವಿ ಪೂಂಜಾಲ್‌ಕಟ್ಟೆಯವರ ನೇತೃತ್ವದಲ್ಲಿ ಮೂಳೂರು ಸೈಯದ್ ಅರಬೀ ವಲಿಯುಲ್ಲಾ ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು. ಬಳಿಕ ದರ್ಗಾದಿಂದ ಕಾರ್ಯಕ್ರಮ ನಡೆಯುವ ಮೈದಾನದ ವರೆಗೆ ಬೃಹತ್ ರ‍್ಯಾಲಿ ಏರ್ಪಡಿಸಲಾಗಿತ್ತು. 
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್‌ರ ನೇತೃತ್ವದಲ್ಲಿ ಮೂಳೂರು ಜುಮಾ ಮಸೀದಿಯ ಅಧ್ಯಕ್ಷ ಎಂ.ಎಚ್.ಬಿ. ಮುಹಮ್ಮದ್ ಧ್ವಜಾರೋಹಣ ನೆರವೇರಿಸಿದರು. 

ಈ ಸಂದರ್ಭದಲ್ಲಿ ಸಯ್ಯಿದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್ ಉಪಸ್ಥಿತರಿದ್ದರು. ಬುಕ್‌ಫೇರ್‌ನ್ನು ಕಾಪು ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮೂಳೂರು ಉದ್ಘಾಟಿಸಿದರು.

ಯಶಸ್ವಿಗೊಳಿಸಲು ಕರೆ: ಡಿ.೧೩ರಂದು ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್‌ನ ದಶಮಾನೋತ್ಸವ ಮಹಾಸಮ್ಮೇಳನದ ಸಮಾರೋಪದಲ್ಲಿ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹಾಗೂ ಇನ್ನಿತರ ವಿದ್ವಾಂಸರು ಭಾಗವಹಿಸಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಮನವಿ ಮಾಡಿದೆ. 

ಸ್ಟೂಡೆಂಟ್ಸ್ ಮೀಟ್

ಮೂಳೂರು ಮರ್ಕಝ್ ತ‌ಅಲೀಮಿಲ್ ಇಹ್ಸಾನ್‌ನ ದಶಮಾನೋತ್ಸವ ಮಹಾಸಮ್ಮೇಳನದ ಪ್ರಯುಕ್ತ ಸ್ಟೂಡೆಂಟ್ಸ್ ಮೀಟ್ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಮಂಜುನಾಥಯ್ಯ ಉದ್ಘಾಟಿಸಿದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ವಸಂತ ಕುಮಾರ್ ನಿಟ್ಟೆ ವಿಷಯ ಮಂಡಿಸಿದರು. 

ಅಧ್ಯಕ್ಷತೆಯನ್ನು ಮೂಳೂರು ಅಲ್‌ಇಹ್ಸಾನ್ ಅಕಾಡಮಿ ಸ್ಕೂಲ್‌ನ ಸಂಚಾಲಕ ವೈ.ಮುಹಮ್ಮದ್ ಬ್ಯಾರಿ ಎಡಪದವು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ವ ಎಂಎಸ್‌ಆರ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ವೈ.ಭಾಸ್ಕರ್ ಶೆಟ್ಟಿ, ನ್ಯಾಯವಾದಿಗಳಾದ ಚಂದ್ರಶೇಖರ್, ಮುಹಮ್ಮದ್ ಇಕ್ಬಾಲ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಮಣಿಪಾಲ್ ಎಂಎಸ್‌ಇ‌ಎಂ ಯೂನಿರ್ವಸಿಟಿಯ ಫೆಸಿಲಿಟಿ ಮ್ಯಾನೇಜರ್ ಹಾಜಿ ಅಬ್ದುರ್ರಹ್ಮಾನ್,  ಉಪನ್ಯಾಸಕ ಸಮೀಯುಲ್ಲಾ ಬಂಟ್ವಾಳ್ ಉಪಸ್ಥಿತರಿದ್ದರು.

ಬಶೀರ್ ಅಲಿ ವೈ.ಬಿ.ಸಿ. ಸ್ವಾಗತಿಸಿದರು. ಬಶೀರ್ ಮಾಸ್ಟರ್ ವಂದಿಸಿದರು. ಸಾದಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Share: