ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಿಶ್ವನಾಥ ರೈ ಸುದ್ದಿಗೋಷ್ಠಿ ಯಲ್ಲಿಂದು ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಲು, ವಿದ್ಯುತ್, ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಜನತೆಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಚುನಾವಣೆಯಲ್ಲಿ ನೀಡಿದ ಎರಡು ರೂ.ಗೆ ಕೆ.ಜಿ. ಅಕ್ಕಿ ವಿತರಿಸುವ ಘೋಷಣೆಯನ್ನೇ ಜಾರಿ ಮಾಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ, ರೈತ, ದಲಿತ ಸಂಘಟನೆಗಳು ಸಹ ಹರತಾಳದಲ್ಲಿ ಪಾಲ್ಗೊಳ್ಳಲಿವೆ. ಉಡುಪಿಯಲ್ಲೂ ಹರತಾಳ ನಡೆಸಲಾಗುವುದು. ಈ ಬಗ್ಗೆ ಕಾರ್ಯಕರ್ತರು ಅಂಗಡಿ, ಹೊಟೇಲ್ ಮಾಲಕರಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ. ಎಲ್ಲೂ ಒತ್ತಾಯದ ಬಂದ್ ಮಾಡ ಲಾಗುವುದಿಲ್ಲ. ಸಾರಿಗೆ ಬಂದ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಬೇಡಿಕೆಗಳು:
ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಕೆಗಳನ್ನು ನಿಯಂತ್ರಿಸಬೇಕು. ಕೇಂದ್ರ ಬಜೆಟ್ನಲ್ಲಿ ಮಾಡಿದ ತೈಲ ಹಾಗೂ ರಸಗೊಬ್ಬರ ದರ ಏರಿಕೆ ಹಿಂದೆಗೆದುಕೊಳ್ಳಬೇಕು. ರಾಜ್ಯ ಸರಕಾರ ಇತ್ತೀಚೆಗೆ ಹೆಚ್ಚಿಸಿದ ವಿದ್ಯುತ್, ಹಾಲು, ಬಸ್ ಪ್ರಯಾಣ ದರವನ್ನು ಕೈಬಿಡಬೇಕು. ಹಾಲು ಪೂರೈಸುವ ರೈತರಿಗೆ ಸಬ್ಸಿಡಿ ನೀಡಬೇಕು. ನೀರಿನ ದರ ಹೆಚ್ಚಿಸುವ ನಿರ್ಧಾರವನ್ನು ಕೈಬಿಡಬೇಕು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಹಾಗೂ ನೀರು ಪೂರೈಕೆಯಾಗಬೇಕು. ಕೆ.ಜಿ.2ರೂ. ನಂತೆ 35 ಕೆ.ಜಿ.ಅಕ್ಕಿ, ಆಹಾರ ಧಾನ್ಯ ರೇಷನ್ ಮೂಲಕ ವಿತರಿಸಬೇಕು. ಬಿಪಿಎಲ್ ಕಾರ್ಡಿನ ಮಿತಿಯನ್ನು 30ಸಾವಿರ ರೂ.ಗೆ ಹೆಚ್ಚಿಸಬೇಕು. ಎಲ್ಲರಿಗೂ ರೇಷನ್ ಕಾರ್ಡ್ ವಿತರಿಸಬೇಕು. ಎಲ್ಲ ಕಾರ್ಡ್ದಾರರಿಗೂ ರೇಷನ್ ನೀಡುವಂತಾಗಬೇಕು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಉಡುಪಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಜೆಡಿಎಸ್ನ ರಾಮ್ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ರಾಷ್ಟ್ರವ್ಯಾಪಿ ನಡೆಯುವ ಮುಷ್ಕರ ಮತ್ತು ಹರತಾಳಕ್ಕೆ ಡಿವೈಎಫ್ಐ ಉಡುಪಿ ಜಿಲ್ಲಾ ಸಮಿತಿ, ಎಸ್ಎಫ್ಐ ಉಡುಪಿ ಜಿಲ್ಲಾ ಸಮಿತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಉಡುಪಿ ಜಿಲ್ಲಾ ಬೀಡಿ ಕೆಲಸಗಾರರ ಸಂಘಗಳು ಬೆಂಬಲ ವ್ಯಕ್ತಪಡಿಸಿದ್ದು, ಕಾರ್ಮಿಕರು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ತಮ್ಮ ಕೆಲಸ ಸ್ಥಗಿತಗೊಳಿಸಿ ಹಾಗೂ ವಿದ್ಯಾರ್ಥಿಗಳು ಆ ದಿನ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದೆ.
ಕೃಪೆ:ವಾರ್ತಾಭಾರತಿ