ಗಂಗೊಳ್ಳಿ, ಅಕ್ಟೋಬರ್ ೨೭: ಇಲ್ಲಿನ ಬಾಬಾಶಾ ಮೊಹಲ್ಲಾದ ನಿವಾಸಿ ಹಜ್ಜಿ ಸಾಹೇಬ್ ಎಂಬುವರ ಪತ್ನಿ ರಜಿಯಾ ಬಾನು ಎಂಬುವರು ಸೋಮವಾರ ರಾತ್ರಿ ಎಳನೀರು ತರಲು ಅಂಗಡಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಓರ್ವ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿದ್ದುದನ್ನು ಕಂಡರು. ಸಾರ್ವಜನಿಕ ಸಂಚಾರದ ಸ್ಥಳದಲ್ಲಿ ಅಸ್ವಚ್ಛಗೊಳಿಸುತ್ತಿರುವುದನ್ನು ಆಕ್ಷೇಪಿಸಿದ ಆಕೆಯನ್ನು ಬಳಿಕ ಅ ವ್ಯಕ್ತಿ ತನ್ನ ಸ್ನೇಹತರೊಂದಿಗೆ ಮರಳಿ ಬಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ರಾತ್ರಿ ಸುಮಾರು ಹತ್ತು ಘಂಟೆಯ ಹೊತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯ ಹೆಸರು ಗೋಪಾಲ ಖಾರ್ವಿ. ತನ್ನ ಕೆಲಸವಕ್ಕೆ ಆ ಮಹಿಳೆ ಅಕ್ಷೇಪ ವ್ಯಕ್ತಪಡಿಸಿದ್ದನ್ನು ಸಹಿಸದ ಗೋಪಾಲ ಬಳಿಕ ತನ್ನ ಸಹಚರರಾದ ರಾಮಕೃಷ್ಣ ಸಿಪಾಯಿ ಮತ್ತಿಬ್ಬರನ್ನು ಕರೆದುಕೊಂಡು ಹಿಂದಿರುಗುತ್ತಿದ್ದ ರಜಿಯಾ ಬಾನುರವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆಗ ಕೂಗಿಕೊಂಡ ರಜಿಯಾ ಬಾನುರವರ ದನಿಯನ್ನು ಕೇಳಿ ಅವರ ಇಬ್ಬರು ಅತ್ತಿಗೆಯರಾದ ಶ್ರೀಮತಿ ಅಮೀನಾ ಮತ್ತು ಬೆನಜೀರ್ ಬಾನು ಧಾವಿಸಿದರು. ನೆರವು ಬರುತ್ತಿರುವುದನ್ನು ಕಂಡ ಈ ನಾಲ್ವರು ಕೂಡಲೇ ಜಾಗ ಖಾಲಿ ಮಾಡಿದ್ದಾರೆ.
ರಜಿಯಾ ಬಾನುರವರಿಗೆ ತುಟಿ ಮತ್ತು ಬೆನ್ನಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ತಮ್ಮ ಮೇಲಿನ ಹಲ್ಲೆಯ ಕುರಿತು ಅವರು ಕುಂದಾಪುರ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಜಾಮಿಯಾ ಮೊಹಲ್ಲಾ ಮತ್ತು ಬಾಬಾಜಿ ಮೊಹಲ್ಲಾದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.


ಉನ್ನತ ಪೋಲೀಸ್ ಅಧಿಕಾರಿಗಳು ಬಳಿಕ ಗಂಗೊಳ್ಳಿಗೆ ಭೇಟಿ ನೀಡಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಪ್ರತಿದೂರು: ಇದೇ ವೇಳೆ ಚಂದ್ರ ಖಾರ್ವಿ ಎಂಬುವರು ಇನ್ನೊಂದು ದೂರನ್ನು ನೀಡಿ ಪ್ರಕರಣಕ್ಕೆ ತಿರುವು ನೀಡಿದ್ದಾರೆ. ಮೀನುಗಾರಿಕೆ ಮುಗಿಸಿ ಮನೆಗೆ ಬರುತ್ತಿದ್ದಾಗ ವೆಲ್ಡರ್ ಜಾಫರ್, ಬಸ್ ಏಜೆಂಟ್ ಹಮೀದ್, ತೌಫೀಕ್, ಬಾಷಾ ಹಾಗೂ ಯೂಸುಫ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆಸಿದ್ದು ನೆರವಿಗೆ ಬಂದ ರಾಮಕೃಷ್ಣ ಸಿಪಾಯಿ ಎಂಬುವರಿಗೂ ಹಲ್ಲೆಯಾಗಿದೆ, ಈ ಹಲ್ಲೆಯಿಂದ ರಾಮಕೃಷ್ಣ ಸಿಪಾಯಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ದೂರಿದ್ದಾರೆ. ಎರೆಡೂ ಪ್ರಕರಣಗಳನ್ನು ದಾಖಲಿಸಿರುವ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ.