ಬೆಂಗಳೂರು, ಜನವರಿ 18: ಕನ್ನಡ ಚಿತ್ರರಂಗದ ಚಾಮಯ್ಯ ಮೇಸ್ಟ್ರು ಇನ್ನಿಲ್ಲ. ಈ ಮೂಲಕ ಕನ್ನಡ ಚಿತ್ರರಂಗದ ದೈತ್ಯ ಅಶ್ವತ್ಥ ವೃಕ್ಷ ಉರುಳಿ ಬಿದ್ದಿದೆ.
ಚಿತ್ರರಂಗದಲ್ಲಿ ಅಪ್ಪ ಎಂದೇ ಖ್ಯಾತಿ ಪಡೆದಿದ್ದ ಕೆ.ಎಸ್. ಅಶ್ವತ್ಥ್, ಮೈಸೂರಿನ ಬಸಪ್ಪ ಮೆಮೋರಿಯಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆ ಎರಡು ಗಂಟೆಗೆ ನಿಧನರಾದರು. ಅಶ್ವತ್ಥ್ ಚಿತ್ರರಂಗದಲ್ಲಿ ಅಭಿನಯಿಸದ ಪಾತ್ರಗಳೇ ಇಲ್ಲ. ನಾಯಕನಟ, ಖಳನಾಯಕ, ಹಾಸ್ಯ, ಪೋಷಕನಟ ಹೀಗೆ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದ್ದ ಅವರು ನೈಜ ನಟನೆಗೆ ಹೆಸರಾಗಿದ್ದರು. ಕಳೆದ ಮೂರು ವಾರಗಳ ಹಿಂದೆ ತಮ್ಮ ಶಿಷ್ಯ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡಿದ್ದ ಅಶ್ವತ್ಥ್, ಕಾಕತಾಳೀಯ ಎಂಬಂತೆ ಇಂದು ತಮ್ಮ ಶಿಷ್ಯನನ್ನೇ ಹುಡುಕಿಕೊಂಡು ಹೊರಟಿದ್ದಾರೆ.
ಕನ್ನಡ ಚಿತ್ರಪ್ರಪಂಚದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಹೆಸರುವಾಸಿಯಾಗಿದ್ದ ಹಿರಿಯ ಹಾಗೂ ಪ್ರತಿಭಾವಂತ ನಟ ಅಶ್ವತ್ಥ್ ಅಳಿಸಲಾಗದ ನೆನಪುಗಳನ್ನು ಬಿಟ್ಟು, ಬಣ್ಣದ ಬದುಕನ್ನು ಕಳಚಿಕೊಂಡು ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅಶ್ವತ್ಥ್ ಮೈಸೂರಿನ ಬಸಪ್ಪ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇರುವ ಹರೀಶ್ಚಂದ್ರ ಘಾಟ್‌ನಲ್ಲಿ ನಡೆಯಿತು.
ಅಶ್ವತ್ಥ್, ಕೆ ಎಸ್ : ವ್ಯಕ್ತಿ ಪರಿಚಯ
(೧೯೨೫-೨೦೧೦). ಸುಮಾರು ಐದು ದಶಕಗಳ ಅವಧಿಯಲ್ಲಿ ೩೭೦ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟ. ಅಶ್ವತ್ಥ್, ಶಿಸ್ತು, ಸಮಯಪಾಲನೆ, ಸುಸಂಸ್ಕೃತ ನಡವಳಿಕಡೆಗೆ ಹೆಸರಾದವರು. ತಮ್ಮ ನಡೆನುಡಿಯಿಂದ ಚಿತ್ರರಂಗದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾದ ವ್ಯಕ್ತಿ ಅಶ್ವತ್ಥ್. ಅವರ ಹಿರಿಯರು ಹೊಳೆನರಸೀಪುರ ತಾಲ್ಲೂಕಿನ ಕರಗದಹಳ್ಳಿಯವರು. ತಂದೆ ಸುಬ್ಬರಾಯರು. ಮಾರ್ಚ್ ೨೫, ೧೯೨೫ರಲ್ಲಿ ಜನನ. ಮೊದಲ ಹೆಸರು ಅಶ್ವತ್ಥನಾರಾಯಣ. ಚಿತ್ರರಂಗಕ್ಕೆ ಬಂದ ನಂತರ ನಾರಾಯಣ ಕಳಚಿಕೊಂಡಿತು. ಓದಿದ್ದು ಇಂಟರ್‌ಮೀಡಿಯಟ್‌ವರೆಗೆ, ಆದರೆ ಅವರ ಅನುಭವ, ನಟನೆಯಲ್ಲಿ ಒಂದು ವಿಶ್ವವಿದ್ಯಾಲಯವೇ ಆಗಿದ್ದರು.
ಅಶ್ವತ್ಥ್ ಕೇವಲ ನಟರಾಗಿರಲಿಲ್ಲ. ಅಪ್ಪಟ ದೇಶಭಕ್ತ. ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದು ಅವರ ಹಿರಿಮೆಗೆ ಸಾಕ್ಷಿ. ಂತ್ರರಂಗಕ್ಕೂ ಮುನ್ನ ೧೯೪೪ ರಲ್ಲಿ ಆಹಾರ ಇಲಾಖೆಯಲ್ಲಿ ನೌಕರಿಯಲ್ಲಿದ್ದು. ನಾಟಕದ ಗೀಳು, ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದುಡಿಮೆ; ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾಯರಿಂದ ಅಭಿನಯದಲ್ಲಿ ತರಬೇತಿ ಪಡೆಯುವ ಅವಕಾಶ ಅಶ್ವತ್ಥ್ ಅವರಿಗೆ ಲಭ್ಯವಾಯಿತು.
ಆರಂಭದಲ್ಲಿ ಅಶ್ವತ್ಥ್ ಅವರಿಗೆ ಚಲನಚಿತ್ರ ಸೇರಬೇಕೆಂಬ ಕಲ್ಪನೆಯೇ ಇರಲಿಲ್ಲ. ಅವಕಾಶ ತಾನಾಗಿಯೇ ಒದಗಿ ಬಂತು. ನಾಟಕದಲ್ಲಿನ ಇವರ ಅಭಿನಯ, ಭಾಷೆಯ ಸ್ಪಷ್ಟ ಉಚ್ಚಾರ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಆಹ್ವಾನ ಬಂತು. ಮೈಸೂರಿನ ಪ್ರಿಮಿಯರ್‌ನಲ್ಲಿ ತಯಾರಾದ, ಭಾಗಶಃ ವರ್ಣದಲ್ಲಿ ಚಿತ್ರಣವಾದ ಮೊದಲ ‘ಸ್ತ್ರೀ ರತ್ನ’(೧೯೫೫) ಚಿತ್ರದಲ್ಲಿ ಅವರು ನಾಯಕ ನಟ.
‘ಸ್ತ್ರೀ ರತ್ನ’ ಚಿತ್ರದ ನಂತರ, ಚಿತ್ರರಂಗದಲ್ಲೆ ಮುಂದುವರೆಯುವ ನಿರ್ಧಾರ. ಆದರೆ ಆ ಅವಧಿಯಲ್ಲಿ ಕನ್ನಡ ಚಿತ್ರ ನಿರ್ಮಾಣ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಆದರೂ ಚಿತ್ರರಂಗದ ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಲು ಸಂಕಲ್ಪಿಸಿದ್ದ ಅಶ್ವತ್ಥ್, ಆಗ ಕನ್ನಡ ಚಿತ್ರ ನಿರ್ಮಾಣದ ಕೇಂದ್ರವಾಗಿದ್ದ ಮದರಾಸಿನಲ್ಲೇ ನೆಲೆಸಲು ನಿರ್ಧರಿಸಿದ್ದರು.
ನಾಯಕ ಪಾತ್ರಗಳಿಂದ ಹಿಂದೆ ಸರಿದು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಸಂಕಲ್ಪ ಮಾಡಿದರು. ಕ್ರಮೇಣ ಈ ನಿರ್ಧಾರವೂ ಅವರಿಗೆ ಯೋಗ್ಯವಾದುದೇ ಆಗಿತ್ತು. ಇದರಿಂದ ಅವರ ಬಹುಮುಖ ಪ್ರತಿಭೆಯು ಪ್ರಕಾಶಕ್ಕೆ ಮುಕ್ತ ಅವಕಾಶ ದೊರೆಯಿತು.
ಆರಂಭದದಿನಗಳಲ್ಲಿ ತಯಾರಾಗುತ್ತಿದ್ದದು ಹೆಚ್ಚಾಗಿ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಾರದನ ಪಾತ್ರಗಳು ಅವರನ್ನು ಅರಸಿ ಬಂದವು. ‘ಮಹಿಷಾಸುರ ಮರ್ದಿನಿ’, ‘ಸ್ವರ್ಣಗೌರಿ’, ‘ಭಕ್ತ ಪ್ರಹ್ಲಾದ’, ‘ದಶಾವತಾರ’, ‘ನಾಗಾರ್ಜುನ’-ಇವೇ ಮೊದಲಾದ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಜನಮೆಚ್ಚುಗೆಗೆ ಪಾತ್ರವಾಯಿತು.
ಅಶ್ವತ್ಥ್ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ; ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜನರಿಗೆ ಅಪ್ತವಾದುದು ತಂದೆಯ ಪಾತ್ರ; ಮನೆಯ ಹಿರಿಯಣ್ಣನ ಪಾತ್ರ, ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪ್ರಧಾನ ಪೋಷಕ ಪಾತ್ರಗಳಿಗೆ ಆಯ್ಕೆ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಸ್ಟ್ರು, ಮಕ್ಕಳಿಲ್ಲದ ಮೇಸ್ಟ್ರು. ತಾನು ಅತಿಯಾಗಿ ಪ್ರೀತಿಸುವ ತಂಟೆಕೋರ ವಿದ್ಯಾರ್ಥಿ. ಇವರಿಬ್ಬರ ನಡುವಣ ಮಾನವೀಯ ಸಂಬಂಧಗಳು, ಸಮಸ್ಯೆಗಳು, ದುರಂತದಲ್ಲಿ ಕೊನೆಗೊಳ್ಳುವ ಈ ಚಿತ್ರದಲ್ಲಿ ಮನಮಿಡಿಯುವಂತಹ ಅಭಿನಯ. ‘ಕಸ್ತೂರಿ ನಿವಾಸ’ದ ನಿಷ್ಠಾವಂತ ಸೇವಕ ರಾಮಯ್ಯ, ‘ಮಗ ಮೊಮ್ಮಗ’, ‘ತಂದೆ-ಮಕ್ಕಳು’ ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ‘ಸರ್ವಮಂಗಳ’ ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು.
ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಚೊಕ್ಕ ಅಭಿನಯ ಇದು ಅವರ ಹಿರಿಮೆ. ಪ್ರಧಾನ ಪೋಷಕ ಚಿತ್ರಗಳಲ್ಲಿ ಅಶ್ವತ್ಥ-ಪಂಢರಿಬಾಯಿ ಜೋಡಿ ಅತ್ಯಂತ ಜನಪ್ರಿಯ.
‘ನಮ್ಮ ಮಕ್ಕಳು’, ‘ನಾಗರಹಾವು’, ‘ಮುತ್ತಿನಹಾರ’ ಚಿತ್ರಗಳ ಅಭಿನಯಕ್ಕಾಗಿ ‘ಶ್ರೇಷ್ಠ ಪೋಷಕ ನಟ’ರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಅಭಿನಯ, ಗಾಯನದಿಂದ ಕನ್ನಡ ಚಲನ ಚಿತ್ರೋದ್ಯಮಕ್ಕೆ ಘನತೆ, ಸ್ಥಿರತೆ ತಂದ ಡಾ.ರಾಜಕುಮಾರ್ ಹೆಸರಿನಲ್ಲಿ ಸರಕಾರ ಚಲನಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿದವರಿಗೆ ೧೯೯೩-೯೪ನೇ ಸಾಲಿನಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ನಟ-ಕೆ.ಎಸ್. ಅಶ್ವತ್ಥ್.
೧೯೯೫ರಲ್ಲಿ ಅಶ್ವತ್ಥ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಅದು ಅವರ ಅಭಿಮಾನಿ ಪ್ರೇಕ್ಷಕರಿಗೆ ಅಘಾತವಾಗಿತ್ತು. ಆದರೆ ‘ಶಬ್ದವೇಧಿ’ ಚಿತ್ರದ ಮೂಲಕ ಅವರ ಪುನರಾಗಮನವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದ್ದರು. ಆದರೀಗ ಚಿತ್ರರಂಗಕ್ಕಷ್ಟೇ ಅಲ್ಲದೇ ಅಶ್ವತ್ಥ್ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದಾರೆ.
ರಾಜ್ಯಪಾಲರು, ಮುಖ್ಯಮಂತ್ರಿ ಶೋಕ
ಪ್ರತಿಭಾವಂತ ನಟ ಕೆ.ಎಸ್.ಅಶ್ವತ್ಥ್ ಅವರ ನಿಧನಕ್ಕೆ ರಾಜ್ಯದ ರಾಜ್ಯ ಪಾಲ ಎಚ್.ಆರ್.ಭಾರಧ್ವಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಕಂಬನಿ ಮಿಡಿದಿದ್ದಾರೆ. ಕೆ.ಎಸ್.ಅಶ್ವತ್ಥ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ಕಷ್ಟವನ್ನು ತಂದೊಡ್ಡಿದೆ. ಒಬ್ಬ ಪ್ರತಿಭಾವಂತ ನಟನ ಕಣ್ಮರೆಯಿಂದ ಇಂದು ಕನ್ನಡ ಚಿತ್ರರಂಗ ತೀವ್ರ ಬಡವಾಯಿತು ಎಂದು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.