ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳ್ತಂಗಡಿಯಲ್ಲಿ ತುಳು ಚಲನ ಚಿತ್ರೋತ್ಸವದ ಉದ್ಘಾಟನೆ: ತುಳು ಚಲನಚಿತ್ರ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿ: ಜಯಮಾಲಾ

ಬೆಳ್ತಂಗಡಿಯಲ್ಲಿ ತುಳು ಚಲನ ಚಿತ್ರೋತ್ಸವದ ಉದ್ಘಾಟನೆ: ತುಳು ಚಲನಚಿತ್ರ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿ: ಜಯಮಾಲಾ

Sat, 21 Nov 2009 03:14:00  Office Staff   S.O. News Service
ಬೆಳ್ತಂಗಡಿ, ನ.೨೦: ತುಳು ಚಲನ ನಿರ್ಮಾಣವಾಗಬೇಕಾದರೆ ಇಲ್ಲಿ ಒಗ್ಗಟ್ಟಿನ ಅಗತ್ಯವಿದ್ದು, ತುಳುನಾಡಿನಲ್ಲಿ ಎಲ್ಲವೂ ಇದೆ. ಆದರೆ ತುಳು ಚಲನಚಿತ್ರ ಗಳು ನಿರ್ಮಾಣವಾಗದಿರುವುದಕ್ಕೆ ನಮ್ಮಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಹೇಳಿದರು. 

ಬೆಳ್ತಂಗಡಿಯಲ್ಲಿ ಭಾರತ್ ಚಲನಚಿತ್ರ ಮಂದಿರದಲ್ಲಿ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ತುಳು ಚಲನಚಿತ್ರೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. 

ಚಲನಚಿತ್ರ ಮಂದಿರಗಳ ದುಃಸ್ಥಿತಿಯ ಬಗೆಗೆ ಗಮನ ಸೆಳೆದ ಅವರು, ಬೆಳ್ತಂಗಡಿ ಯಲ್ಲಿ ಚಲನಚಿತ್ರ ಮಂದಿರವನ್ನೇ ಉದಾಹರಣೆಯಾಗಿಸಿ ಇಂತಹ ಚಲನ ಚಿತ್ರ ಮಂದಿರದಲ್ಲಿ ಚಲನಚಿತ್ರ ನೋಡ ಬೇಕು ಎಂದರೆ ಹೇಗೆ ನೋಡಲು ಸಾಧ್ಯ. ಚಲನ ಚಿತ್ರ ಮಂದಿರಗಳ ಅಭಿವೃದ್ಧಿಗೆ ಸಾಲದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಂದಿರಗಳನ್ನು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು. 

ತುಳು ಚಿತ್ರ ನಿರ್ಮಾಪಕ, ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ತುಳು ಚಲನ ಚಿತ್ರಗಳನ್ನು ಮಾಡಿ ಕೈ ಸುಟ್ಟುಕೊಂಡವರು ಹೆಚ್ಚಾಗಿದ್ದಾರೆ. ಚಲನಚಿತ್ರಗಳನ್ನು ನೋಡುವವರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಚಲನಚಿತ್ರ ಮಂದಿರಗಳನ್ನು ಸಾಲ ತೆಗೆದು ಅಭಿವೃದ್ಧಿ ಪಡಿಸಿದರೆ ಬಡ್ಡಿ ಕಟ್ಟಲೂ ಕಲೆಕ್ಷನ್ ಸಾಕಾಗುವುದಿಲ್ಲ. ಚಲನಚಿತ್ರ ಮಂದಿರ ಗಳನ್ನು ಉಳಿಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ ಎಂದರು. 

ಈ ಸಂದರ್ಭದಲ್ಲಿ ಚಲನಚಿತ್ರ ನಟ, ನಿರ್ಮಾಪಕ ಕೆ.ಎನ್.ಟೈಲರ್, ಚಿತ್ರ ಭಾರತಿ ಡಿಸ್ಟ್ರಿಬ್ಯೂಟರ‍್ಸ್‌ನ ಟಿ.ವಿ. ಶ್ರೀನಿವಾಸ ಹಾಗೂ ಡಾ.ರಿಚರ್ಡ್ ಕ್ಯಾಸ್ಟಲಿನೋರನ್ನು ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎನ್. ಟೈಲರ್, ತುಳು ಸಿನಿಮಾ ಮಾಡಿ ಕಳೆದು ಕೊಂಡಿರುವುದೇ ಹೆಚ್ಚು. ಸಿನಿಮಾ ತೆಗೆ ಯಿರಿ ಎಂದು ಹೇಳುವವರಿದ್ದರು. ಆದರೆ ಮಾಡುವವರು ಇಲ್ಲ. ಧರ್ಮಾಧಿಕಾರಿ ಡಿ.ರೇಂದ್ರ ಹೆಗ್ಗಡೆಯಂತವರು ತುಳು ಸಿನಿಮಾಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಿ ಎಂದರು. 

ಟಿ.ವಿ.ಶ್ರೀನಿವಾಸ್ ಮಾತನಾಡಿ, ಸಿನಿಮಾದ ಕಷ್ಟಗಳ ಬಗೆಗೆ ವಿವರಿಸಿ, ತುಳುವರಲ್ಲಿ ಶೇ.೧೦ಜನ ಸಿನಿಮಾ ನೋಡಿದರೂ ತುಳು ಸಿನಿಮಾಗಳು ಯಶಸ್ವಿಯಾಗುತ್ತವೆ. ೪೦ತುಳು ಚಲನ ಚಿತ್ರಗಳು ಬಂದಿದ್ದು, ಇದೀಗ ಕೇವಲ ಆರು, ಏಳು ಸಿನಿಮಾ ಗಳ ಪ್ರಿಂಟ್‌ಗಳು ಮಾತ್ರ ಲಭ್ಯವಿದೆ  ತುಳು ಸಿನಿಮಾಗಳ ಪ್ರಿಂಟ್‌ಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಎಂದರು. 

ತುಳು ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುರೇಂದ್ರಕುಮಾರ್ ಧರ್ಮಸ್ಥಳ, ಡಾ.ಬಿ. ಯಶೋವರ್ಮ, ಅಶೋಕ್ ಸುವರ್ಣ, ರಘುನಾಥ ರೈ, ಲೋಕೇಶ್ ಎಂ.ವಿ, ಮುರಳೀಧರ ರಾವ್, ಭರತ್‌ಕುಮಾರ್ ಉಪಸ್ಥಿತರಿದ್ದರು. ಯದುಪತಿ ಗೌಡ ಸ್ವಾಗತಿಸಿದರು. ಹೆಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿ ದರು. ಮೋಹನ್ ಶೆಟ್ಟಿಗಾರ್ ವಂದಿಸಿದರು.


Share: