ಕುಂದಾಪೂರ: ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕ್‌ಗಳಲ್ಲಿ ಬರುವ ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಭದ್ರತೆ ಒದಗಿಸಲು ವಿಶೇಷ ಕಾರ್ಯಪಡೆ ರಚಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪಿ. ಹೇಮಲತಾ ರವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜರುಗಿದ ಗ್ರಾಮ ಪಂಚಾಯತ್‌ನ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಜಿಲ್ಲಾ ಮಟ್ಟದ ಆದಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕ್‌ಗಳ ಕೇಂದ್ರ ಸ್ಥಾನದಲ್ಲಿ ಮೇ ೧೭ ರಂದು ನಡೆಯುವ ಏಣಿಕಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವುದಲ್ಲದೇ ಪ್ರತಿಯೊಂದು ತಾಲ್ಲೂಕಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ಗುರುತಿಸಿ ವರದಿಯನ್ನು ಜಿಲ್ಲಾಧಿಕಾರಿಯವರ ಕಛೇರಿಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿವರು ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು. ಚುನಾವಣೆಯ ನಿಮಿತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳ ಸೇವೆಯು ಅತ್ಯಾವಶ್ಯಕವಾಗಿರುವುದರಿಂದ ಅವರು ಕೇಂದ್ರಸ್ಥಾನದಲ್ಲಿಯೇ ಇರುವಂತೆ ಹಾಗೂ ಯಾವುದೇ ಕಾರಣಕ್ಕೂ ಅವರಿಗೆ ದೀರ್ಘ ರಜೆ ಮಂಜೂರು ಮಾಡಬಾರದುದೆಂದು ಸೂಚಿಸಬೇಕೆಂದುರಲ್ಲದೇ ತಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಾಹನಗಳು ಸುಸ್ಥಿತಿಯಲ್ಲಿ ಇಡಬೇಕೆಂದು ಹಾಗೂ ಜಿಲ್ಲಾಡಳಿತದಿಂದ ಬೇಡಿಕೆ ಬಂದ ಕೂಡಲೇ ವಾಹನ ಒದಗಿಸಬೇಕು, ಪ್ರಥಮ ಮತ್ತು ದ್ವಿತೀಯ ಹಂತದ ಚುನಾವಣೆಯ ದಿನಗಳೆಂದು ಗ್ರಾಮ ಪಂಚಾಯತ್‌ನಲ್ಲಿ ಜರುಗುವ ಸಂತೆ ಹಾಗೂ ಜಾತ್ರೆಗಳ ವಿವರಗಳನ್ನು ಒದಗಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಡಿ. ಪ್ರಾಣೇಶ್ ರಾವ್ ರವರಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಚುನಾವಣೆಯ ಸಮಯದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸುವ ಮದ್ಯಪಾನ ನಿಷೇದ ಆದೇಶದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಹಾಗೂ ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಬೇಕು ಅಲ್ಲದೇ ನಗರ ಪ್ರದೇಶದಿಂದ ಹಳ್ಳಿಗಳಿಗೆ ಅಕ್ರಮವಾಗಿ ಸಾಗಿಸುವ ಮದ್ಯ ಸ್ಪಿರಿಟ್ ಸಾಗಿಸುವಾಗ ಅಂತಹ ವಾಹನಗಳನ್ನು ಜಪ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರವರು ಸೂಚಿಸಿದರು.
ಚುನಾವಣೆಯ ಮತದಾನದ ದಿನಕ್ಕೆ ವಾಹನಗಳನ್ನು ಒದಗಿಸಬೇಕೆಂದು ಹಾಗೂ ಪ್ರತಿಯೊಂದು ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂದು ಜಿಲ್ಲಾಧಿಕಾರಿಯವರು ಪ್ರಾದೇಶಿಕ ಸಾರಿಗೆ ಅಧಿಕಾರಿವರಿಗೆ ಸೂಚಿಸಿದರಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿರುವ ಶಾಲೆಗಳ ಬೀಗದ ಕೀ ಹಾಗೂ ಪೀಠೋಪಕರಣಗಳ ಸಹಿತ ಮೇ ೬ ರೊಳಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ವಶಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿ ಯವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಡಿ. ಪ್ರಾಣೇಶ್ ರಾವ್, ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ್, ಕುಂದಾಪುರ ಉಪ ವಿಭಾಗಾಧಿಕಾರಿ ಶ್ರೀ ಕೆ. ಎನ್. ರಮೇಶ್, ಕುಂದಾಪುರ ಅರಣ್ಯ ವಿಭಾಗಾಧಿಕಾರಿ ಎ.ಸಿ.ಎಫ್. ಶ್ರೀ ಮಂಜುನಾಥ್ ಶೆಟ್ಟಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.