ಜನಕನ್ನಿಕಾದ ಜೊತೆಗೇ ಹಿಂದಿರುಗುತ್ತಿದ್ದ ಮತ್ತೊಂದು ದೋಣಿ ‘ತರಂಗಿಣಿ’ಯ ಪ್ರಯಾಣಿಕರು ಈ ದುರಂತವನ್ನು ಕಣ್ಣಾರೆ ಕಂಡರೂ ತತ್‌ಕ್ಷಣದಲ್ಲಿ ಏನೂ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದಡ ತಲುಪಿ ಅವರು ವಿಷಯ ಮುಟ್ಟಿಸಿದ ಬಳಿಕ ಪರಿಹಾರ ಕಾರ್ಯಕರ್ತರನ್ನು ಸ್ಥಳಕ್ಕೆ ರವಾನಿಸಲಾಯಿತು.
ಕಳೆದ ಜೂನ್‌ನಿಂದ ಕಾರ್ಯ ಆರಂಭಿಸಿದ್ದ ಹೊಸ ದೋಣಿ ಜಲಕನ್ನಿಕಾ ಪ್ರಯಾಣ ಯೋಗ್ಯ ಪ್ರಮಾಣಪತ್ರಗಳನ್ನು ಪಡೆದಿತ್ತು. ಆದರೆ ಪ್ರಯಾಣಿಕರೆಲ್ಲರೂ ಒಂದೇ ಬದಿ ಸರಿದಾಗ ಉಂಟಾಗುವ ಅಪಾಯದಿಂದ ಪಾರಾಗುವ ಬಗ್ಗೆ ದೋಣಿಯ ಸಿಬ್ಬಂದಿಗೆ ತರಬೇತಿ ಇರಲಿಲ್ಲ ಎಂದು ಹೇಳಲಾಗಿದೆ.
ಅಗತ್ಯದ ಸೌಲಭ್ಯ ಇರಲಿಲ್ಲ: ದೋಣಿಯಲ್ಲಿ ಜೀವರಕ್ಷಕ ಜಾಕೆಟ್‌ನಂತಹ ಅಗತ್ಯದ ವಸ್ತುಗಳು ಇರಲಿಲ್ಲ ಎಂದು ಅಪಘಾತ ಸ್ಥಳದ ಸಮೀಪವೇ ಇದ್ದ ಮತ್ತೊಂದು ದೋಣಿಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನತದೃಷ್ಟ ದೋಣಿಯಲ್ಲಿದ್ದ ಹೆಚ್ಚಿನ ಮಂದಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ದೆಹಲಿಯಿಂದ ್ಗಂದಿದ್ದ ಪ್ರವಾಸಿಗರು ಎಂದು ಅವರು ಹೇಳಿದ್ದಾರೆ.
ದುರಂತ ನಡೆದ 30 ನಿಮಿಷಗಳ ಬಳಿಕವಷ್ಟೇ ಪೊಲೀಸರು ಮತ್ತು ಇತರ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸಾವಿನ ಸಂಖ್ಯೆ ಹೆಚ್ಚಲು ಇದೂ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂತ್ರಸ್ತರ ಕಡೆಯವರಿಗಾಗಿ ಕೇರಳ ಸರ್ಕಾರ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಸಂಬಂಧಪಟ್ಟವರು ದೂರವಾಣಿ ಸಂಖ್ಯೆ 0471- 2331403/ 2333198/0486-9222620/ 9222111/ 94460 52361 ಸಂಪರ್ಕಿಸಬಹುದು.
3ನೇ ದೊಡ್ಡ ದುರಂತ: ಕೇರಳದಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಮೂರನೇ ದೊಡ್ಡ ದೋಣಿ ದುರಂತ ಇದು. 2002ರ ಜುಲೈ 27ರಂದು ಮುಹಮ್ಮ-ಕುಮಾರಕೋಂ ನಡುವಿನ ವೆಂಬಾನಾಡ್ ಸರೋವರದಲ್ಲಿ ದೋಣಿ ಮುಳುಗಿ 29 ಮಂದಿ ಸತ್ತಿದ್ದರು. 2007ರಲ್ಲಿ ಎರ್ನಾಕುಲಂ ಜಿಲ್ಲೆಯ ತಟ್ಟಕ್ಕಾಡ್ ಪಕ್ಷಿಧಾಮದಲ್ಲಿ ದೋಣಿ ಮುಳುಗಿ 15 ಶಾಲಾ ಮಕ್ಕಳು ಮತ್ತು ಮೂವರು ಶಿಕ್ಷಕರು ಮೃತಪಟ್ಟಿದ್ದರು.