ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಳಿಯಾಳ: ವ್ಯಕ್ತಿಯೋರ್ವನ ಮೇಲೆ ಧಾಳಿ ನಡೆಸಿದ ಕರಡಿ

ಹಳಿಯಾಳ: ವ್ಯಕ್ತಿಯೋರ್ವನ ಮೇಲೆ ಧಾಳಿ ನಡೆಸಿದ ಕರಡಿ

Wed, 21 Oct 2009 15:09:00  Office Staff   S.O. News Service
ಹಳಿಯಾಳ, ಅಕ್ಟೋಬರ್ 20:  ಹಳಿಯಾಳ ಸಮೀಪದ ತಟ್ಟಿಗೇರಾ ಗ್ರಾಮದ ಕೃಷ್ಣಪ್ಪ ದೊಡ್ಮನಿ ಎಂಬುವರ ಮೇಲೆ ಕರಡಿಯೊಂದು ಧಾಳಿ ನಡೆಸಿದ ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಿಕ್ಕೆ ತಟ್ಟಿಹಳ್ಳ ಅಣೆಕಟ್ಟಿನ ಬಳಿ ಇನ್ನಿಬ್ಬರು ಸಂಗಡಿಗರ ಸಹಿತ ಮೀನು ಹಿಡಿಯಲು ಹೋಗಿದ್ದ ಕೃಷ್ಣಪ್ಪ ಒಂಟಿಯಾಗಿ ಹಿಂದಿರುಗುತ್ತಿದ್ದಾಗ ಕರಡಿ ಧಾಳಿಮಾಡಿದೆ.  

ಕರಡಿ ತನ್ನ ಮರಿಗಳೊಂದಿಗಿದ್ದಿದ್ದು ಕೋಪ ಪ್ರಕಟಿಸಿದ್ದು ಒಂದು ಕಣ್ಣು, ಮೂಗು, ತಲೆಯ ಭಾಗಕ್ಕೆ ಬಲವಾದ ಗಾಯಗಳಾಗಿವೆ. ಎಡಗೈ ಮೂಳೆ ಜರಿತ, ಹೊಟ್ಟೆಯ ಭಾಗದಲ್ಲಿ ತರಚಿತ ಗಾಯಗಳಾಗಿವೆ.  ಸುಮಾರು ಹತ್ತು ನಿಮಿಷಗಳವರೆಗೆ ಹೋರಾಡಿದ ಕೃಷ್ಣಪ್ಪ ಕಡೆಗಳಿಘೆಯಲ್ಲಿ ನೆರವಿಗಾಗಿ ಕೂಗಿಕೊಂಡಾಗ ಸನಿಹದಲ್ಲಿದ್ದ ಸ್ನೇಹಿತರು ಆಗಮಿಸಿ ಗಲಭೆ ಎಬ್ಬಿಸಿದ ಬಳಿಕ ಕರಡಿ ಅಲ್ಲಿಂದ ಪರಾರಿಯಾಗಿದೆ.

ಸುದ್ದಿ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಕೂಡಲೇ 108 ಸೇವೆಯ ಮೂಲಕ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನಡೆಸಿ ಬಳಿಕ ಶಸ್ತ್ರಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಸುದ್ದಿ ತಿಳಿದಾಕ್ಷಣ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಭಟ್, ವಲಯ ಅರಣ್ಯಾಧಿಕಾರಿಗಳಾದ ಅಜಪ್ಪಾ ಕುರುಬರ, ಮಹೇಶ ಕೆಂಚಪ್ಪನವರ, ವನಪಾಲಕ ಜಾನ್ ಡಿಸೋಜಾ, ಶಿವಾನಂದ ಪೂಜಾರಿ, ಗಾರ್ಡ್ ಹರೀಶ್ಚಂದ್ರ ಮತ್ತು ಹರೀಶ ಪಟಗಾರ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಸಂಯೋಜಕ ಜಿಲ್ಲಾ ಕಾರ್ಯದರ್ಶಿ ರವಿ ಹಂಚಿನಮನಿ ಹಾಗೂ ಡಿ.ಎಸ್.ಎಸ್. ಸಿ. ವಿಭಾಗ ಸಂಚಾಲಕ ಚಂದ್ರಕಾಂತ ಕಾದ್ದೊಳ್ಳಿ ಮತ್ತಿತರರು ಭೇಟಿ ನೀಡಿ ಸಾಂತ್ವಾನ ನೀಡಿದರು.

ಘಟನೆಯ ಕುರಿತು ಅರಣ್ಯಾಧಿಕಾರಿಗಳು ತುರ್ತು ಚಿಕಿತ್ಸೆಗೆ ವೈಯಕ್ತಿಕವಾಗಿ ರೂ. ಐದುಸಾವಿರ ರೂಪಾಯಿಗಳನ್ನು ನೀಡಿದ್ದಾರೆ.  ಸರ್ಕಾರದಿಂದ ಹೆಚ್ಚಿನ ಸಹಾಯ ಪಡೆಯಲು ಮನವಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗೌಳಿಗ ವ್ಯಕ್ತಿಯೋರ್ವರ ಮೇಲೆ ಆನೆ ಧಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿತ್ತು.  



Share: