ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ಮುಂಬರುವ ಸಾಲಿನಲ್ಲಿ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ - ಬಚ್ಚೇಗೌಡ

ಬೆಂಗಳೂರು: ಮುಂಬರುವ ಸಾಲಿನಲ್ಲಿ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ - ಬಚ್ಚೇಗೌಡ

Wed, 03 Feb 2010 03:15:00  Office Staff   S.O. News Service

ಬೆಂಗಳೂರು,ಫೆಬ್ರವರಿ೨: ಮುಂಬರುವ ಸಾಲಿನಲ್ಲಿ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳ ೧೫.೩೭ ಲಕ್ಷ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೇ ಸದರಿ ಯೋಜನೆ ಮೈಸೂರು, ಶಿವಮೊಗ್ಗ, ಬೆಳಗಾಂ, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಗೊಂಡಿದ್ದು ಬಾಕಿ ಉಳಿದ ಜಿಲ್ಲೆಗಳಲ್ಲಿ ೨೦೧೦-೨೦೧೧ ನೇ ಸಾಲಿನಲ್ಲಿ ಜಾರಿಯಾಗುವ ನಿರೀಕ್ಷೆಯಿದೆ ಎಂದರು.

ಕೇಂದ್ರ ಸರ್ಕಾರದ ನೆರವಿನ ಈ ಯೋಜನೆಯಡಿ ಈಗಾಗಲೇ ಐದು ಜಿಲ್ಲೆಗಳ ೩.೮೧ ಲಕ್ಷ ಕಾರ್ಮಿಕ ಕುಟುಂಬಗಳು ಸವಲತ್ತು ಪಡೆಯುತ್ತಿದ್ದು ಉಳಿದ ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬಂದರೆ ಇನ್ನೂ

೧೫.೩೭ ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

 

ಯೋಜನೆಗೆ ೧೧೫ ಕೋಟಿ ರೂ ವೆಚ್ಚವಾಗಲಿದ್ದು ಈ ಪೈಕಿ ಕೇಂದ್ರ ಸರ್ಕಾರ ೮೬.೪೯ ಕೋಟಿ ರೂಗಳನ್ನು ಒದಗಿಸಲಿದ್ದರೆ,ರಾಜ್ಯ ಸಕಾರ ೨೮.೮೩ ಕೋಟಿ ರೂಗಳನ್ನು ಒದಗಿಸಲಿದೆ ಎಂದು ವಿವರ ನೀಡಿದರು.

 

ಪ್ರತೀ ಕುಟುಂಬಗಳ ಐದು ಮಂದಿ ಸದಸ್ಯರಿಗೆ ಈ ಯೋಜನೆಯಡಿ ವಾರ್ಷಿಕ ೩೦ ಸಾವಿರ ರೂವರೆಗೆ ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದ ಅವರು,ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಕುಟುಂಬಗಳನ್ನು ಸೇರಿಸಲು ಪೂರಕವಾಗುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದರು.

ಯೋಜನೆಯಡಿ ದರ್ಜಿ,ದೋಬಿ,ಹಮಾಲಿ,ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು,ಹೋಟೆಲ್ ಕಾರ್ಮಿಕರಿಗೂ ಅನುಕೂಲ ಒದಗಿಸಿಕೊಡಲು ಕೋರಲಾಗಿದೆ ಎಂದು ವಿವರಿಸಿದರು.

ಭದ್ರತಾ ಮಂಡಳಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಕಲ್ಯಾಣ ಯೋಜನೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚಿಸಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಅವರು ತಿಳಿಸಿದರು.

 

ಕಾರ್ಮಿಕ ಸಚಿವರು ಅಧ್ಯಕ್ಷರಾಗಿರುವ ಮಂಡಳಿಯಲ್ಲಿ ಇಪ್ಪತ್ತೆಂಟು ಸದಸ್ಯರಿರುತ್ತಾರೆ ಎಂದ ಅವರು,ಈ ಮಂಡಳಿ ನಡೆಸಿದ ಮೊದಲ ಸಭೆಯಲ್ಲಿ ದರ್ಜಿಗಳು,ದೋಬಿಗಳು,ಹಮಾಲರು,ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಹೋಟೆಲ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಕಲ್ಯಾಣ ಯೋಜನೆಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಎಂಇ‌ಎಸ್ ಯೋಜನೆಯಡಿಯಲ್ಲಿ ೪೪೮ ವೃತ್ತಿ ತರಬೇತಿ ಕೇಂದ್ರಗಳಲ್ಲಿ ೬೮,೩೫೦ ಜನರಿಗೆ ತರಬೇತಿ ನೀಡಲಾಗಿದ್ದು ಯೋಜನೆಯಡಿಯಲ್ಲಿ ಅಭ್ಯರ್ಥಿಗೆ ಗಂಟೆಯೊಂದಕ್ಕೆ ನೀಡಲಾಗುವ ತರಬೇತಿ ವೆಚ್ಚವನ್ನು ಹದಿನೈದು ರೂಗಳಿಂದ ಇಪ್ಪತ್ತೈದು ರೂಗಳಿಗೆ ಹೆಚ್ಚಿಸಲು ಕೋರಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಅವರು ಹೇಳಿದರು.

ಸರ್ಕಾರೀ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲಾಗಿದ್ದು ಖಾಲಿಯುಳಿದಿರುವ ೧೦೯೮ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳನ್ನು ಸಧ್ಯದಲ್ಲೇ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಹೊಸತಾಗಿ ನೂರು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಲಾಗಿದೆ.ಅದೇ ರೀತಿ ಹಿಂದುಳಿದ ಪ್ರದೇಶಗಳಲ್ಲಿ ಶೇಕಡಾ ೫೦:೫೦ ಅನುಪಾತದೊಂದಿಗೆ ೫೦ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಅನುಮತಿ ಕೋರಲಾಗಿದೆ ಎಂದರು.

 

 

ಮಾಸಾಂತ್ಯದಲ್ಲಿ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

 

 

ಬೆಂಗಳೂರು,ಫೆಬ್ರವರಿ೨:ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಈ ಮಾಸಾಂತ್ಯದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.

 

 

ಮಾಸಾಂತ್ಯದಲ್ಲಿ ಅಧಿವೇಶನ ಕರೆಯುತ್ತಿದ್ದು, ಮಾರ್ಚ್ ಆದಿಭಾಗದಲ್ಲಿ ಬರುವ ೨೦೧೦ -೧೧ ನೇ ಸಾಲಿನ ಮುಂಗಡ ಪತ್ರ ಮಂಡಿಸಲಾಗುವುದು. ಇದಕ್ಕಾಗಿ ಸಿದ್ಧತೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ ಎಂದರು.

 

 

ಈ ವರ್ಷ ಕನಿಷ್ಠ ೬೦ ದಿನಗಳ ಕಾಲವಾದರೂ ಅಧಿವೇಶನ ಕರೆಯಲು ನಿರ್ಧರಿಸಲಾಗಿದ್ದು, ಈ ಕುರಿತು ವಿಧಾನಸಭಾಧ್ಯಕ್ಷರು, ಮೇಲ್ಮನೆ ಸಭಾಪತಿ ಅವರೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 


 


Share: