ಸಕಲೇಶಪುರ, ಜನವರಿ 16 : ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಜಿಲ್ಲಾ ಬಿ.ಜೆ.ಪಿ. ಮಾಜಿ ಉಪಾಧ್ಯಕ್ಷ ಕ್ಯಾಮನಹಳ್ಳಿ ಕೃಷ್ಣೇಗೌಡ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಬಿ.ಜೆ.ಪಿ. ಕಾರ್ಯಕರ್ತರು ಅಭಿಮಾನಿಗಳು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಹೆಸರಿಸಿದ್ದರು. ಆಯ್ಕೆಯ ಸಮಯದಲ್ಲಿ ನನ್ನ ಹೆಸರು ಪ್ರಸ್ತಾಪಕ್ಕೆ ಬಂತು. ಪಕ್ಷದ ವರಿಷ್ಟರ ನಿರ್ಧಾರದಂತೆ ನಾನು ವಾಪಾಸ್ಸು ಪಡೆದುಕೊಂಡೆ ಎಂದು ಹೇಳಿದರು.
ನಾನು ಜಿಲ್ಲೆಯ ಬಿ.ಜೆ.ಪಿ.ಯಲ್ಲಿ ೨ ಬಾರಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ತದನಂತರ ರಾಜ್ಯದಲ್ಲಿ ಯಾವುದೇ ಸ್ಥಾನಗಳಿಸಿರುವುದಿಲ್ಲ. ಜಿಲ್ಲೆಗೆ ಹೆಚ್ಚು ಅನುದಾನ ಸಿಗುವಂತೆ ಮಾಡುವ ಜೊತೆಗೆ ಜನರ ಸೇವೆಗೆ ಇದರಿಂದ ಒಂದು ಅವಕಾಶ ಸಿಗಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಗ್ರಾಮೀಣ ಮಟ್ಟದ ಕಾರ್ಯಕರ್ತರು ಕೂಡ ರಾಜ್ಯದ ಅಧ್ಯಕ್ಷನಾಗಬಹುದು ಎನ್ನುವುದು ಬಿ.ಜೆ.ಪಿ. ಯಿಂದ ಮಾತ್ರ ಸಾಧ್ಯ. ಮಲೆನಾಡಿನ ವ್ಯಕ್ತಿಯೊಬ್ಬರಿಗೆ ಈ ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ರಾಜ್ಯ ಮಟ್ಟದಲ್ಲಿ ನನ್ನ ಪರವಾಗಿ ಅನೇಕ ನಾಯಕರು ಶಿಫಾರಸ್ಸು ಮಾಡಿದ್ದಾರೆ. ರಾಜ್ಯ ನಾಯಕರು ನನ್ನ ಸೇವೆಯನ್ನು ಗುರುತಿಸಿದ್ದಾರೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಯಾವುದೇ ರೀತಿಯ ಲಾಬಿ ಮಾಡುವುದಾಗಲೀ, ಅನ್ಯ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಜನರ ಪರವಾದ ಸರಕಾರ ನಡೆಯಬೇಕು ಎನ್ನುವ ಒಳ್ಳೆಯ ಅಭಿಪ್ರಾಯ ಜೆ.ಡಿ.ಎಸ್.ಗೆ ಇದ್ದರೆ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ಬಿ.ಜೆ.ಪಿ.ಗೆ ಬೇಷರತ್ ಬಾಹ್ಯ ಬೆಂಬಲ ನೀಡಬೇಕು. ದೇವೇಗೌಡರಿಗೆ ವಯಸ್ಸಾಗಿದೆ. ಅವರಿಗೆ ನಿವೃತ್ತಿ ನೀಡಿ. ಹೆಚ್.ಡಿ. ರೇವಣ್ಣರವರನ್ನು ಬದಿಗೊತ್ತಿ, ರಾಜ್ಯದ ಹಿತಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ಈ ಹೆಜ್ಜೆ ಇಡುವುದು ನಾಡಿನ ಹಿತಕ್ಕೆ ಅಗತ್ಯವಾಗಿದೆ. ಈ ಮೂಲಕ ಜಿಲ್ಲೆಗೆ ಹೆಚ್ಚಿನ ಅನುದಾನ ಪಡೆಯಲು ಸಹಕಾರಿಯಾಗಿರುತ್ತದೆ ಎಂದು ಅಬಿಪ್ರಾಯಿಸಿದರು.
ಈ ಹಿಂದೆ ಬಿ.ಜೆ.ಪಿ. ಬೆಂಬಲದಿಂದ ಹೆಚ.ಡಿ. ಕುಮಾರಸ್ವಾಮಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಿತ್ತು. ಇದು ಬಿ.ಜೆ.ಪಿ. ಬೆಂಬಲ ಹಾಗೂ ಅಂದಿನ ಶಾಸಕ, ಮಂತ್ರಿಗಳಿಂದ ಸಾಧ್ಯವಾಯಿತು ಎನ್ನುತಾ ಜೆ.ಡಿ.ಎಸ್. ಮುಖಂಡರು ಕುಮಾರಸ್ವಾಮಿ ಓಕೆ, ರೇವಣ್ಣ ಯಾಕೆ ದೇವೇಗೌಡ ರಿಟೈರ್ ಎಂಬ ತತ್ವವನ್ನು ಅನುಸರಿಸಬೇಕು. ಇದರಿಂದ ರಾಜ್ಯದಲ್ಲಿ ಉದ್ಭವಿಸಿರುವ ದಳ್ಳುರಿಯನ್ನು ನಿಭಾಯಿಸಲು ಸಾಧ್ಯ ಎಂದು ಹೇಳಿದರು.