ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರೈತರ ಮೇಲಿ ದೌರ್ಜನ್ಯ ಸಹಿತ ಇನ್ನಿತರ ವಿಷಯ ಚರ್ಚಿಸಲು ಅಧಿವೇಶನ ಕರೆಯಲು ಮೋಟಮ್ಮ ಆಗ್ರಹ

ಬೆಂಗಳೂರು: ರೈತರ ಮೇಲಿ ದೌರ್ಜನ್ಯ ಸಹಿತ ಇನ್ನಿತರ ವಿಷಯ ಚರ್ಚಿಸಲು ಅಧಿವೇಶನ ಕರೆಯಲು ಮೋಟಮ್ಮ ಆಗ್ರಹ

Fri, 29 Jan 2010 10:53:00  Office Staff   S.O. News Service

ಬೆಂಗಳೂರು,ಜನವರಿ ೨೯:ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ತುರ್ತು ವಿಧಾನಮಂಡಲ ಅಧಿವೇಶನವನ್ನು ಕರೆಯುವಂತೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ ಇಂದಿಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,ರಾಜ್ಯವನ್ನು ಹಲವು ಸಮಸ್ಯೆಗಳು ಕಾಡುತ್ತಿದ್ದು ಇದೆಲ್ಲದರ ಬಗ್ಗೆ ಚರ್ಚಿಸಲು ವಿಧಾನಮಂಡಲ ಅಧಿವೇಶನವನ್ನು ಕರೆಯಬೇಕು ಎಂದು ಅಗ್ರಹಿಸಿದರು.

 

ಇವತ್ತು ನಾನಾ ಯೋಜನೆಗಳ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ.ಇದರ ಪರಿಣಾಮವಾಗಿ ರೈತರು ಆತಂಕದಲ್ಲಿದ್ದಾರೆ.ಈ ಮಧ್ಯೆ ಆಡಳಿತ ಯಂತ್ರ ಸಮರ್ಪಕವಾಗಿ ಸಾಗದೇ ಇರುವುದರಿಂದ ಜನಸಾಮಾನ್ಯರು ಬೇಸತ್ತಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ಆಂತರಿಕ ಭಿನ್ನಮತದಿಂದ ಕಂಗಾಲಾಗಿದ್ದು ತಮ್ಮ ಖುರ್ಚಿ ಅಭದ್ರವಾಗಿದೆ ಎಂಬ ಭೀತಿಯಲ್ಲಿ ನರಳುತ್ತಿದ್ದಾರೆ.ಇದರ ಪರಿಣಾಮವಾಗಿ ಉತ್ತಮ ಆಡಳಿತ ಕೊಡಲು ಅವರ ಕೈಲಾಗುತ್ತಿಲ್ಲ ಎಂದು ಹೇಳಿದರು. ಸರ್ಕಾರ ಯಾವ ಕ್ಷಣದಲ್ಲಾದರೂ ಬೀಳಬಹುದು ಎಂಬ ಆತಂಕವಿರುವುದರಿಂದಲೇ ಯಡಿಯೂರಪ್ಪ ಅಧಿಕಾರಿಗಳಿಗೆ ಮತ್ತು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸಮರ್ಪಕವಾಗಿ ಕೆಲಸ ಮಾಡಿ ಎಂದು ಹೇಳುವ ಪರಿಸ್ಥಿತಿಯಲ್ಲಿಲ್ಲ ಎಂದರು. ಇವತ್ತು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದರೆ,ಮಂತ್ರಿಗಳಿಗೆ ಗುರಿಯತ್ತ ಗಮನ ಹರಿಸಿ ಎಂದು ಹೇಳಿದ್ದರೆ ಆಡಳಿತ ಯಂತ್ರ ಹೀಗಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

 

ಹೀಗಾಗಿಯೇ ಎಲ್ಲ ವಿಷಯಗಳ ಬಗ್ಗೆ ಕೂಲಂಕುಷವಾದ ಚರ್ಚೆ ನಡೆಸುವ ದೃಷ್ಟಿಯಿಂದ ತುರ್ತು ವಿಧಾನಮಂಡಲ ಅಧಿವೇಶನವನ್ನು ಕರೆಯುವಂತೆ ಮೋಟಮ್ಮ ಸರ್ಕಾರವನ್ನು ಒತ್ತಾಯಿಸಿದರು.

 

ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಮುಂದೂಡುವ ಪರಿಸ್ಥಿತಿ ಸೃಷ್ಟಿಯಾಗಲು ಸರ್ಕಾರವೇ ಕಾರಣ ಎಂದು ಇದೇ ಸಂಧರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು,ಸುಪ್ರೀಂಕೋರ್ಟ್‌ನ ತೀರ್ಪು ಸರ್ಕಾರಕ್ಕೆ ರೋಗಿ ಬಯಸಿದ್ದೂ ಹಾಲು ಅನ್ನ,ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತಾಗಿದೆ ಎಂದು ಹೇಳಿದರು.

 

ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಸಮರ್ಪಕವಾಗಿ ಮಾಡಿದ್ದರೆ ಸಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿತ್ತು.ಆದರೆ ಸರ್ಕಾರಕ್ಕೆ ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲ ಎಂದು ಆರೋಪಿಸಿದರು.

 

ಎಲ್ಲಕ್ಕಿಂತ ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ನಡೆದು ಜನಪ್ರತಿನಿಧಿಗಳು ಬಂದರೆ ದರೋಡೆ ಮಾಡಲು ಸಾಧ್ಯವಿಲ್ಲ. ಅದರ ಬದಲು ಅಧಿಕಾರಿಗಳ ಹಿಡಿತದಲ್ಲೇ ಬಿಬಿ‌ಎಂಪಿ ಇದ್ದರೆ ದರೋಡೆ ಮಾಡುವುದು ಸುಲಭ ಎಂಬ ಲೆಕ್ಕಾಚಾರ ಸರ್ಕಾರದ್ದು ಎಂದು ದೂರಿದರು.

 

 

ಬಳ್ಳಾರಿಯಲ್ಲಿ ನಡೆದ ಕಟ್ಟಡ ದುರಂತದಲ್ಲಿ ಹನ್ನೆರಡು ಜನ ಮೃತಪಟ್ಟ ಬೆಳವಣಿಗೆ ಬಗ್ಗೆ ವಿಷಾದಿಸಿದ ಅವರು, ಕಾನೂನು ಉಲ್ಲಂಘಿಸಿ ಮೂರು ಅಂತಸ್ತುಗಳ ಬದಲು ಐದು ಅಂತಸ್ತನ್ನು ಕಟ್ಟಲು ಹೋಗಿದ್ದರಿಂದ ಇಂತಹ ದುರಂತ ಸಂಭವಿಸಿದೆ. ಸರ್ಕಾರ ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

 

ಇದೇ ರೀತಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ತುರ್ತಾಗಿ ಪರಿಹಾರ ಒದಗಿರುವ ಕೆಲಸವಾಗಬೇಕು ಎಂದ ಅವರು,ಹಂಪಿಯಲ್ಲಿ ನಡೆದ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವಕ್ಕೆ ಬಂದಿದ್ದ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್ ದುರಂತ ನಡೆದ ಜಾಗಕ್ಕೆ ಬಂದು ಸಾಂತ್ವನ ಹೇಳುವ ಔದಾರ್ಯ ತೋರಲಿಲ್ಲ ಎಂದು ವಿಷಾದಿಸಿದರು.

 

 

(ವಿಶೇಷ ಪ್ರತಿನಿಧಿಯಿಂದ) 

 


Share: