ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವಿದ್ಯಾರ್ಥಿಗಳಿಗೆ ಕಡಿತರಹಿರ ವಿದ್ಯುತ್ -ಠುಸ್ಸಾದ ಭರವಸೆ - ಕೈ ಚೆಲ್ಲಿದ ಸರ್ಕಾರ

ಬೆಂಗಳೂರು: ವಿದ್ಯಾರ್ಥಿಗಳಿಗೆ ಕಡಿತರಹಿರ ವಿದ್ಯುತ್ -ಠುಸ್ಸಾದ ಭರವಸೆ - ಕೈ ಚೆಲ್ಲಿದ ಸರ್ಕಾರ

Fri, 29 Jan 2010 10:42:00  Office Staff   S.O. News Service

ಬೆಂಗಳೂರು,ಜನವರಿ ೨೯: ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಬೆಳಿಗ್ಗೆ ಹಾಗೂ ಸಂಜೆ ತಡೆರಹಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ಯಾವುದೇ ಸಿದ್ಧತೆಮಾಡಿಕೊಳ್ಳದೇ ಕೈ ಚಲ್ಲಿ ಕುಳಿತಿದೆ.

 

 

ಫೆಬ್ರವರಿ ಒಂದರಿಂದ ಬೆಳಿಗ್ಗೆ ೫ ರಿಂದ ೭ ಹಾಗೂ ಸಂಜೆ ೬ ರಿಂದ ೧೧ ಗಂಟೆವರೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ. ಜೈರಾಜ್, ಈ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಸಿದ್ಧತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಜ್, ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಪ್ರತಿನಿತ್ಯ ೪೦೦ ರಿಂದ ೫೦೦ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಬೇಕಾಗಿದೆ. ಏಳರಿಂದ ಎಂಟು ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆ ಮಾಡಬೇಕಾಗಿದೆ.

 

 

ಆದರೆ ವಿದ್ಯುತ್ ಖರೀದಿಗೆ ಸರ್ಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಸೂಚನೆ ಬಂದಿಲ್ಲ. ಸರ್ಕಾರ ಸೂಕ್ತ ಹಣಕಾಸಿನ ನೆರವು ನೀಡಿದರೆ ವಿದ್ಯುತ್ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

 

ವಿದ್ಯುತ್ ಖರೀದಿಗಾಗಿ ಸದ್ಯಕ್ಕೆ ಕನಿಷ್ಠ ೧೦೦ ಕೋಟಿ ರೂಪಾಯಿ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಆದರೆ ಅದು ಅನುಷ್ಠಾನದ ರೂಪಕ್ಕೆ ಬಂದಿಲ್ಲ. ಸರ್ಕಾರ ಹಣ ನೀಡಿದರೆ ವಿದ್ಯುತ್ ಖರೀದಿ ನಡೆಯಲಿದೆ ಎಂದು ಜೈರಾಜ್ ಹೇಳಿದರು.

 

ರಾಜ್ಯದಲ್ಲಿ ಅಸಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಸರ್ಕಾರ ಒತ್ತು ನೀಡಿದೆ. ಹಸಿರು ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುವಂತೆ ಕೈಗಾರಿಕೆಗಳ ಮೇಲೆ ಗ್ರೀನ್ ಸೆಸ್ ವಿಧಿಸಲು ತೀರ್ಮಾನಿಸಲಾಗಿದೆ.

 

 

ಇಂತಹ ಸೆಸ್‌ನಿಂದ ರಾಜ್ಯದಲ್ಲಿ ಬರುವ ವರ್ಷದ ವೇಳೆಗೆ ೫೦ ರಿಂದ ೬೦ ಕೋಟಿ ರೂಪಾಯಿ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ೨೫೦೦ ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದನ್ನು ೪೦೦೦ ಮೆಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.


Share: