ಎಲ್ಲರಿಗೂ ರೇಷನ್, ರೇಷನ್ ಕಾರ್ಡಿಗಾಗಿ, ಬೆಲೆ ಏರಿಕೆ ವಿರುದ್ಧ - ಆಹಾರದ ಹಕ್ಕಿಗಾಗಿ : ರಾಜ್ಯವ್ಯಾಪಿ ಚಳುವಳಿ ನಡೆದಿದೆ. ಹಲವು ಹಂತಗಳ ಬಳಿಕ ನವಂಬರ‍್ ೨೫, ೨೦೦೯ ರಂದು ರಾಜಧಾನಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ ಸರ್ಕಾರಕ್ಕೆ ಮನವಿ ನೀಡಲಾಯಿತು. ಆದರೆ ಪ್ರತಿಕ್ರಿಯೆ ಮಾತ್ರ ಶೂನ್ಯ. ಹೀಗಾಗಿ ಮತ್ತೆ ಇದೇ ಜನವರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಜನವರಿ ೨೧ ರಿಂದ ೨೩ ರವರೆಗಿನ ಚಳುವಳಿಗಳ ವರದಿ ಇಲ್ಲಿದೆ. ಈಗಲಾದರೂ ಸರ್ಕಾರ ಕಣ್ಣು ತೆರೆದೀತೇ ?
ಆಹಾರ ಹಕ್ಕಿನ ಆಂದೋಲನ : ಬೀದರ್
23 ಜನವರಿ 2010 ರಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ನೇತೃತ್ವದಲ್ಲಿ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಜನ ಆಹಾರದ ಹಕ್ಕಿಗಾಗಿ ಜಿಲ್ಲಾಧಿಕಾರಿ ಕಚೇರಿಯ ಮುತ್ತಿಗೆ ಹಾಕಿದರು. ಜಿಲ್ಲೆಯ ಎಲ್ಲ ತಾಲ್ಲೂಕಿನಿಂದ ಆಗಮಿಸಿದ ರೈತರು, ಕೂಲಿ ಕಾರ್ಮಿಕರು, ಅಂಗನವಾಡಿ, ನೌಕರರು, ಮಹಿಳೆಯರು, ಯುವಕರು, ವಿಧ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ರೇಷನ್ ಕಾರ್ಡ್ ವಿತರಣೆಯಲ್ಲಾದ ತಾರತಮ್ಯದ ವಿರುದ್ಧ ಆಕ್ರೋಶಿತರಾಗಿ ಪುನಃ ಸರ್ವೇ ಮಾಡಲು ಒತಾಯಿಸಿದರು. ಹದಿನೈದು ದಿನದ ಒಳಗಾಗಿ ಪುನಃ ಸರ್ವೇ ಮಾಡಲು ಮತ್ತು ರೇಷನ್ ಅಂಗಡಿಗಳು ನಿರಂತರ ತಿಂಗಳ ಪೂರ್ತಿ ತೆರೆದಿಡಲು ಅಥವ ರೇಷನ್ ಕಾರ್ಡ್ ದಾರರು ಅನಾಜು (ಧಾನ್ಯ) ಪೂರ್ತಿ ಖರಿದಿಸುವವರೆಗೆ ತೆರೆದಿಡಲು ಒಪ್ಪಿದ ಮೇಲೆ ಹೋರಾಟವನ್ನು ಹಿಂಪಡೆಯಲಾಯಿತು. ಸತತ ನಾಲ್ಕು ಗಂಟೆಗಳವೆರೆ ಮುತ್ತಿಗೆ ಹಾಕಲಾಯಿತು.
ಮೆರವಣಿಗೆಯ ನೇತೃತ್ವವನ್ನು ಪಕ್ಷದ ರಾಜ್ಯದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನೀಲಾ ಕೆ, ಜಿಲ್ಲೆಯ ಪಕ್ಷದ ಮುಖಂಡರಾದ ವಿಜಯಕುಮಾರ ಸೋನಾರೆ, ಆರ್.ಪಿ.ರಾಜಾ, ಶಿವರಾಜ ಪಾಟೀಲ, ವೀರಶೆಟ್ಟಿ ವಟ್ಟಾಂಬೆ, ಬಕುಲದೇವಿ ಶ್ರೀದೇವಿ ಚಿವುಡೆ, ಅಂಬುಬಾಯಿ ಮಾಳಗೆ, ಬಸವರಾಜ ಮಾಳಗೆ, ಇಸಾಮೋದ್ದಿನ್, ಮೆಹತಾಬ ಅಲಿ, ಸಿದ್ದಪ್ಪ ಮೇತ್ರೆ, ದಿನೇಶ ಖೇಡ್ಕರ್, ಅಂಬರೀಶ ಖೇಡಕರ್, ಸಂಗಶೆಟ್ಟಿ ಪಾಟೀಲ, ಸುಮಿತ್ರಾ, ಶಕುಂತಲಾ ಕುಲ್ಕರ್ಣಿ ಮುಂತಾದವರು ವಹಿಸಿದರು.
ಸರ್ಕಾರವು ರೇಷನ್ ಪದ್ದತಿಯನ್ನು ಬಲಪಡಿಸದಿದ್ದರೆ, ಆಹಾರದ ಬೆಲೆಯನ್ನು ಇಳಿಸದಿದ್ದರೆ, ಎಲ್ಲರಿಗೂ ರೇಷನ್ ಕೊಡದಿದ್ದರೆ, ಎರಡು ರೂಪಾಯಿ ಕೇಜಿಗೆ ಅಕ್ಕಿ ಪ್ರತಿ ಕುಟುಂಬಕ್ಕೆ 35ಕೇಜಿ ಕೊಡದಿದ್ದರೆ ಮತ್ತು ರೇಷನ್ ಅಂಗಡಿ ಮೂಲಕ ಜೀವನಾವಶ್ಯಕ 14 ವಸ್ತುಗಳನ್ನು ಕಡಿಮೆ ದರದಲ್ಲಿ ವಿತರಿಸದಿದ್ದರೆ ಜಿಲ್ಲೆಯಾದ್ಯಂತ ಹೋರಾಟವು ತೀವ್ರ ಸ್ವರೂಪದಲ್ಲಿ ನಡೆಯುವುದು ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ಕೊಡಲಾಯಿತು.
ಕೇಂದ್ರ ಸರಕಾರ ತರಲಿಚ್ಚಿಸುತ್ತಿರುವ ಆಹಾರ ಭದ್ರತಾ ಕಾಯ್ದೆಯು ಜನರ ಜೀವನ ಅಭದ್ರಗೊಳಿಸುವಂತಿದ್ದು ಮೇಲೆ ಸೂಚಿಸಿದ ಬದಲಾವಣೆಗಳನ್ನು ತಂದು ತಕ್ಷಣ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಲಾಯಿತು. ರೈತರನ್ನು ಸಾವಿನಂಚಿಗೆ ದೂಡುತ್ತಿರುವ ಸರಕಾರದ ನೀತಿಯನ್ನು ಖಂಡಿಸಲಾಯಿತು. ರೈತರು ಕೃಷಿ ಕೂಲಿಕಾರರು ಮತ್ತು ದುಡಿಯುವ ಜನರ ಅಭಿವೃದ್ಧಿಯ ಮೂಲಕವೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಉಳ್ಳವರ ಅಭಿವೃದ್ದಿಯ ಮಾನದಂಡದ ಮೂಲಕ ದೇಶದ ಉದ್ಧಾರವಾಗುವ ನೀತಿಯನ್ನು ಕೈ ಬಿಡಲು ಒತ್ತಾಯಿಸಲಾಯಿತು. ನೆರೆ ಬರದ ಧಾಳಿಗೆ ತುತ್ತಾದ ಜನರ ಸಂಕಟವನ್ನು ಸರಕಾರ ಅರಿಯದೆ ಹೋದರೆ ಮುಂದಿನ ದಿನಗಳಲ್ಲಿ ಸರಕಾರಿ ಗೋದಾಮು ಒಡೆದು ರೇಷನ್ ಹಂಚುವಂಥ ಸಮರ ಧೀರ ಚಳುವಳಿಯನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕೊಡಲಾಯಿತು. ಕಾಳಸಂತೆಕೋರರು ಧಾನ್ಯಗಳ ದಾಸ್ತಾನು ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಲಾಯಿತು.
ದಕ್ಷಿಣ ಕನ್ನಡ
ಬೆಲೆ ಏರಿಕೆ ವಿರುದ್ಧ ಹಾಗೂ ಆಹಾರದ ಹಕ್ಕಿನ ಬಗ್ಗೆ ಸಿಪಿಐ(ಎಂ) ರಾಜ್ಯಸಮಿತಿ ಕರೆ ನೀಡಿದ ಧರಣಿ ಸತ್ಯಾಗ್ರಹ ಮತ್ತು ಪಿಕೆಟಿಂಗ್ ಚಳುವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಗಾಗಿ ನಡೆದಿದೆ. ಜಿಲ್ಲಾಮಟ್ಟದ ಮುಂದಾಳುಗಳು ವಲಯ, ತಾಲ್ಲೂಕು ಮಟ್ಟದ ಮೂರು ದಿನಗಳ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ ಹೋರಾಟದ ಉದ್ದೇಶವನ್ನು ವಿವರಿಸಿ ಭಾಷಣ ಮಾಡಿದರು.
ಬೆಳ್ತಂಗಡಿ : 11.01.2010 ರಂದು ಬೆಳ್ತಂಗಡಿ ಸರಕಾರಿ ನೌಕರರ ಭವನದ ಆವರಣದ ಬಳಿಯಿಂದ ಸುಮಾರು 700 ಮಂದಿ ಪಡಿತರ ಚೀಟಿ ಸಂತ್ರಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಮೆರವಣಿಗೆ ಹೊರಟು ಬೆಳ್ತಂಗಡಿ ತಹಶೀಲ್ದಾರರ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಪೊಲೀಸ್ ಇಲಾಖೆ ಮೈಕ್ ಪರವಾನಿಗೆ ನೀಡಲು ನಿರಾಕರಿಸಿದ್ದರೂ ಕೊನೆಗೆ ಹೋರಾಟದ ಮೊನಚನ್ನು ಕಂಡು ಪರವಾನಿಗೆ ನೀಡಿದರು. ಧರಣಿ ಸತ್ಯಾಗ್ರಹವನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ. ವಸಂತ ಆಚಾರಿಯವರು ಉದ್ಘಾಟಿಸಿದರು. ಜಿಲ್ಲಾ ಮುಂದಾಳುಗಳಾದ ಕಾಂ. ಬಿ.ಎಂ.ಭಟ್, ಕಾಂ.ಶಿವಕುಮಾರ್, ಕಾಂ.ಹರಿದಾಸ್ ಅವರುಗಳು ಭಾಷಣ ಮಾಡಿದರು. ಆಹಾರದ ಬವಣೆಯ ಕುರಿತು ಹಾಡನ್ನು ಸಮುದಾಯ ಬೆಳ್ತಂಗಡಿ ತಂಡದಿಂದ ಹಾಡಿದರು. `ಬೀದಿ ನಾಟಕ'ವನ್ನು ಪ್ರದರ್ಶಿಸಲಾಯಿತು. 12, 13 ರಂದು ಧರಣಿ ಸಾಂಕೇತಿಕವಾಗಿ ನಡೆಸಲಾಯಿತು.
ಪುತ್ತೂರು : 12.01.2010 ರಂದು ಪುತ್ತೂರು ಮುಖ್ಯ ನಗರದಲ್ಲಿ 300 ರಷ್ಟು ಜನ ಮೆರವಣಿಗೆ ನಡೆಸಿ ಪುತ್ತೂರು ತಹಶೀಲ್ದಾರರ ಕಛೇರಿ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಜೆ.ಬಾಲಕೃಷ್ಣ ಶೆಟ್ಟಿಯವರು ಧರಣಿಯನ್ನು ಉದ್ಘಾಟಿಸಿದರು. ಜಿಲ್ಲಾ ಮುಂದಾಳುಗಳಾದ ಕಾಂ.ಕೆ.ಪಿ.ಸತೀಶನ್, ಕಾಂ.ಶಿವಕುಮಾರ್, ಕಾಂ.ಬಿ.ಎಂ.ಭಟ್ ರವರುಗಳು ಭಾಷಣ ಮಾಡಿದರು.
ಬಂಟ್ವಾಳ : 11.01.2010 ರಂದು ವಿಟ್ಲ ನಾಡ ಕಛೇರಿ ಮುಂಬಾಗದಲ್ಲಿ ಪಕ್ಷದ 300 ಮಂದಿ ಕಾರ್ಯಕರ್ತರು, ಸಂತ್ರಸ್ಥರು ಧರಣಿ ಸತ್ಯಾಗ್ರಹ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಜೆ.ಬಾಲಕೃಷ್ಣ ಶೆಟ್ಟಿಯವರು ಉದ್ಘಾಟಿಸಿದರು. ಜಿಲ್ಲಾ ಮಂದಾಳುಗಳಾದ ಕಾಂ. ವಾಸುಗಟ್ಟಿ, ತಾಲ್ಲೂಕು ಮುಂದಾಳುಗಳಾದ ರಾಮಣ್ಣ ವಿಟ್ಲ, ನಾರಾಯಣ ಮುಂತಾದವರು ಭಾಷಣ ಮಾಡಿದರು. 12.01.2010 ರಂದು ಬಂಟ್ವಾಳ ತಹಶೀಲ್ದಾರರ ಕಛೇರಿ ಮುಂದುಗಡೆ ನಡೆದ ಧರಣಿ ಸತ್ಯಾಗ್ರಹವನ್ನು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಯ ಕಾಂ.ವಸಂತ್ ಆಚಾರಿಯವರು ಉದ್ಘಾಟಿಸಿದರು. ಕಾಂ.ಬಿ.ವಾಸುಗಟ್ಟಿ, ಸಂಜೀವ್ ಬಂಗೇರ, ಕಾಂ.ಉದಯಕುಮಾರ್, ರಾಮಣ್ಣ ವಿಟ್ಲ, ಕಾಂ.ವಿಮಲ, ಕಾಂ.ಶಿವ ಬಂಗೇರ ನೇತೃತ್ವ ವಹಿಸಿದರು. 13.01.2010 ರಂದು ನಡೆದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಜೆ.ಬಾಲಕೃಷ್ಣ ಶೆಟ್ಟಿ ಯವರು ಮಾತನಾಡಿದರು. ಧರಣಿಯ ನೇತೃತ್ವವನ್ನು ಕಾಂ.ಸಂಜೀವ್ ಬಂಗೇರ, ಕಾಂ.ಮಾರಪ್ಪ, ಕಾಂ.ವಾಸುಗಟ್ಟಿ, ಕಾಂ. ಜಾನಕಿ, ಕಾಂ.ವಿಮಲ ನೇತೃತ್ವ ವಹಿಸಿ ಮುನ್ನಡೆಸಿದ್ದರು.
ಮೂಡುಬಿದ್ರೆ : 12.01.2010 ರಂದು ಬೆಳಿಗ್ಗೆ 10.30 ರಿಂದ, 13.01.2010 ರಂದು ಸಂಜೆ 3.00 ಗಂಟೆಗಳತನಕ ಹಗಲು ರಾತ್ರಿ ಧರಣಿ ಸತ್ಯಾಗ್ರಹವನ್ನು ಮೂಡುಬಿದ್ರೆ ನಾಡ ಕಛೇರಿ ಮುಂದುಗಡೆ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕಾಂ.ಬಿ.ಮಾಧವರವರು ಧರಣಿಯನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿಯವರು ಸಮಾರೋಪ ಭಾಷಣ ಮಾಡಿದರು. ನೇತೃತ್ವವನ್ನು ಕಾಂ.ರಮಣಿ, ಕಾಂ.ಸುಂದರ ಶೆಟ್ಟಿ, ಕಾಂ, ಸೀತಾರಾಮ ಶೆಟ್ಟಿ, ಕಾಂ. ರಾಧಾ, ಕಾಂ.ಗಿರಿಜ ವಹಿಸಿದರು. ಕಾಂ.ಕೆ.ಯಾದವ ಶೆಟ್ಟಿಯವರು ಭಾಷಣ ಮಾಡಿದರು. ಸುಮಾರು 400 ಅರ್ಜಿಯನ್ನು ಆಹಾರ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಗುರುಪುರ : 11, 12, 13 ಜನವರಿ 2010 ರಂದು ಕೈಕಂಬ ನಾಡ ಕಛೇರಿ ಮುಂದುಗಡೆ ಬೆಳಿಗ್ಗೆ 10 ರಿಂದ ಸಂಜೆ ಗಂಟೆ 4.00 ರತನಕ ಧರಣಿ ಸತ್ಯಾಗ್ರಹ ನಡೆಸಲಾಯಿತು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ.ಕೆ.ಆರ್.ಶ್ರೀಯಾನ್ರವರು ಧರಣಿಯನ್ನು ಉದ್ಘಾಟಿಸಿದರು. ಧರಣಿಯನ್ನುದ್ದೇಶಿಸಿ ಕಾಂ.ಸದಾಶಿವದಾಸ್, ಕಾಂ.ಗಂಗಯ್ಯ ಅಮೀನ್, ಕಾಂ.ವಸಂತಿ, ಕಾಂ. ನೋಣಯ್ಯ, ಲೋಕಯ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು 750 ಮಂದಿ ಧರಣಿಯಲ್ಲಿ ಭಾಗವಹಿಸಿದ್ದರು.
ಮಂಗಳೂರು: 11.01.2010 ರಂದು ಮಂಗಳೂರು ತಹಶೀಲ್ದಾರರ ಕಛೇರಿ ಮುಂದುಗಡೆ ಧರಣಿ ಸತ್ಯಾಗ್ರಹವನ್ನು ಜಿಲ್ಲಾ ಕಾರ್ಯದರ್ಶಿ ಕಾಂ. ಬಿ.ಮಾಧವರವರು ಉದ್ಘಾಟನಾ ಭಾಷಣದ ಮುಖಾಂತರ ಪ್ರಾರಂಭಿಸಿದರು. ನಗರ ಸಮಿತಿ ಕಾರ್ಯದರ್ಸಿ ಸುನಿಲ್ಕುಮಾರ್ ಬಜಾಲ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರದ ಮುಖ್ಯ ಕೇಂದ್ರಗಳಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಮೆರವಣಿಗೆ ನಡೆಸಿ ಧರಣಿಯಲ್ಲಿ ಪಾಲ್ಗೊಂಡರು. ಸುಮಾರು 350 ಮಂದಿ ಭಾಗವಹಿಸಿದ್ದರು. 12.01.2010 ರಂದು ಉಳ್ಳಾಲ ವಲಯ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ಕಾರ್ಯದರ್ಶಿ ಕಾಂ.ಕೃಷ್ಣಪ್ಪ ಸಾಲಿಯಾನ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ.ಕೆ.ಆರ್.ಶ್ರೀಯಾನ್ರವರು ಭಾಷಣ ಮಾಡಿದರು. 350 ಮಂದಿ ಭಾಗವಹಿಸಿದ್ದರು. 13.01.2010 ರಂದು ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ನಾಯಕ ಮುನೀರ್ ಕಾಟಿಪಳ್ಳ, ಪಕ್ಷದ ಮುಂದಾಳುಗಳಾದ ಕಾಂ.ಸುಕುಮಾರ್, ಕೃಷ್ಣಪ್ಪ ಕೊಂಚಾಡಿ, ಬಾಬು ದೇವಾಡಿಗ ನಗರಸಮಿತಿ ಮುಂದಾಳುಗಳಾದ ಭಾರತಿ ಬೋಳಾರ, ದಯಾನಂದ ಶೆಟ್ಟಿ ಮುಂತಾದವರು ಭಾಷಣ ಮಾಡಿದರು. ತಲೆ ಹೊರೆ ಕಾರ್ಮಿಕರ ಸಂಘದಿಂದ ನಗರದ ಕೇಂದ್ರ ಮಾರುಕಟ್ಟೆಯಿಂದ ಮೆರವಣಿಗೆ ನಡೆಸಿ ಧರಣಿ ಸತ್ಯಾಗ್ರಹದಲ್ಲಿ ಹಮಾಲಿ ಕಾಮರ್ಿಕರು ಭಾಗವಹಿಸಿ ಬೆಂಬಲ ಸೂಚಿಸಿದರು. ಉದಯವಾಣಿ ಪತ್ರಿಕೆ ಹೊರತುಪಡಿಸಿ ಎಲ್ಲಾ ಪತ್ರಿಕೆಗಳು, ದೃಶ್ಯ ಮಾದ್ಯಮಗಳು ಉತ್ತಮ ಪ್ರಚಾರವನ್ನು ನೀಡಿದವು.
ಪಿಕೆಟಿಂಗ್ : ನಗರದ ಸರಕಾರಿ ನೌಕರರ ಭವನದ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ತನಕ 21, 22 ಜನವರಿ 2010 ರಂದು ಪಿಕೆಟಿಂಗ್ ಚಳುವಳಿ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕಾಂ.ಬಿ. ಮಾಧವ, ರಾಜ್ಯ ಮುಂದಾಳು ಕಾಂ.ಕೆ.ಆರ್.ಶ್ರೀಯಾನ್, ಕಾಂ.ವಸಂತ ಆಚಾರಿ, ಕಾಂ.ಕೆ.ಯಾದವಶೆಟ್ಟಿ, ಕಾಂ. ಸುನಿಲ್ ಕುಮಾರ್, ಕಾಂ.ಕೃಷ್ಣಪ್ಪ ಸಾಲಿಯಾನ್ರವರುಗಳು ಭಾಷಣ ಮಾಡಿದರು. ಉತ್ತಮ ಪ್ರತಿಕ್ರಿಯೆಯೊಂದಿಗೆ ಪಿಕೆಟಿಂಗ್ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಎರಡು ದಿನವೂ ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸಿದ್ದರು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದ್ರೆ, ಗುರುಪುರ, ಮಂಗಳೂರು ಉಳ್ಳಾಲ ವಲಯ ಮಟ್ಟದ ನಾಯಕರು, ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ದಾವಣಗೆರೆಯಲ್ಲಿ ಪ್ರತಿಭಟನೆ - ಮಾತುಕತೆ
ಹರಪ್ಪನಹಳ್ಳಿಯಲ್ಲಿ 11.01.2010 ಆಹಾರದ ಹಕ್ಕಿಗಾಗಿ ಹೋರಾಟ ಸಮಿತಿ ತಾಲ್ಲೂಕು ಕಛೇರಿ ಎದುರು ಧರಣಿ ಹಮ್ಮಿಕೊಂಡಿತ್ತು. 12.01.2010 ರಂದು ಹಳೇ ತಾಲ್ಲೂಕು ಕಛೇರಿಯಿಂದ ಹೋರಾಟ ಸಮಿತಿಯು ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ರಿಗೆ ಮನವಿ ಅರ್ಪಿಸಿದರು. ನೇತೃತ್ವವನ್ನು ತಾಲ್ಲೂಕು ಹೋರಾಟ ಸಮಿತಿಯ ಸಂಚಾಲಕರಾದ ವೆಂಕಟೇಶ್ ಬೋವಿನಹಳ್ಳಿ, ಎಸ್.ಎಫ್.ಐ.ನ ನೇಮ್ಯಾ ನಾಯ್ಕ, ಕೆ.ಪಿ.ಆರ್.ಎಸ್.ನ ವೆಂಕಟೇಶ್, ಹಾಲೇಶ್ ನಾಯ್ಕ, ಜೆ.ಎಂ.ಎಸ್.ನ ಪದ್ಮಾವತಿ, ರೇಣುಕಮ್ಮ, ಸಿಐಟಿಯುನ ಮುಜುಬಾಬಿ ಮೊದಲಾದವರು ವಹಿಸಿದರು. ಸಿ.ಪಿ.ಐ(ಎಂ)ನ ಜಿಲ್ಲಾ ಸಂಘಟನಾ ಕಾಯದರ್ಶಿ ಕೆ.ಎಲ್.ಭಟ್, ಬೆಲೆ ಏರಿಕೆ ವಿರೋಧಿಸಿ, ಸಾರ್ವತ್ರಿಕ ರೇಷನ್ ಪದ್ಧತಿಗಾಗಿ ಆಗ್ರಹಿಸಿ ಮಾತನಾಡಿದರು.
ಜಗಳೂರಿನ ತಾಲ್ಲೂಕು ಕಛೇರಿ ಎದುರು ದಿನಾಂಕ 11, 12 ರಂದು ಗ್ರಾಮ ಪಂಚಾಯ್ತಿ ನೌಕರರು ಧರಣಿ ನಡೆಸಿ ಪುನರ್ವಿಮಶಿಸಿದ ವೇತನಕ್ಕಾಗಿ ಮತ್ತು ಆಹಾರದ ಹಕ್ಕಿಗಾಗಿ ಆಗ್ರಹಿಸಿದರು. ಮೊದಲನೇ ದಿನ ಜಗಳೂರು ಪ್ರವಾಸಿ ಮಂದಿರದಿಂದ ತಾಲ್ಲೂಕು ಕಛೇರಿವರೆಗೆ ಮೆರವಣಿಗೆ ಮೂಲಕ ಒಂದು ಧರಣಿ ನಡೆಸಲಾಯ್ತು. ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಲ್.ಭಟ್ ಜಿಲ್ಲಾ ಖಜಾಂಚಿ ಆರ್.ಓಬಳೇಶ್ ತಾಲ್ಲೂಕು ಕಾರ್ಯದರ್ಶಿ ಸಿದ್ದೇಶ್, ತಾಲ್ಲೂಕು ಅಧ್ಯಕ್ಷ ಬೋಸಪ್ಪ, ಯಶವಂತರಾವ್ ತಿಪ್ಪೇಸ್ವಾಮಿ ಮೊದಲಾದವರಿದ್ದರು. ದಿನಾಂಕ 12 ರಂದು ನಡೆದ ಧರಣಿಯಲ್ಲಿ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಬೈರೊಳೆ ಪಾಲ್ಗೊಂಡಿದ್ದರು. ತಹಶೀಲ್ದಾರರ ಕಛೇರಿಗೆ ತಾಲ್ಲೂಕು ಪಮಚಾಯ್ತಿ ಮುಖ್ಯ ಅಧಿಕಾರಿಯವರನ್ನು ಕರೆಸಿ, ವೇತನ ಪಾವತಿಗೆ ಒತ್ತಾಯಿಸಿ ಮಾತುಕತೆ ನಡೆಸಲಾಯ್ತು.
ಚನ್ನಗಿರಿಯಲ್ಲಿ 13.1.2010 ರಂದು ಗ್ರಾಮ ಪಂಚಾಯ್ತಿ ನೌಕರರು ಮುಖ್ಯ ಬೀದಿಗಳಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಆಹಾರದ ಹಕ್ಕಿಗಾಗಿ ಒತ್ತಾಯಿಸಿ ಮೆರವಣಿಗೆ ಮೂಲಕ ತಾಲ್ಲೂಕು ಪಂಚಾಯ್ತಿ ಎದುರು ಅರ್ಧಗಂಟೆ ಧರಣಿ ನಡೆಸಲಾಯ್ತು. ನಂತರ ತಹಶೀಲ್ದಾರರ ಕಛೇರಿ ಎದುರು 2 ತಾಸು ಧರಣಿ ಸತ್ಯಾಗ್ರಹ ಮಾಡಿ ಮನವಿ ಕೊಡಲಾಯ್ತು. ತಾಲ್ಲೂಕು ಕಛೇರಿಗೆ ತಾಲ್ಲೂಕು ಪಂಚಾಯ್ತಿ ಮುಖ್ಯ ಅಧಿಕಾರಿಯನ್ನು ಬರುವಂತೆ ಒತ್ತಡ ತಂದರು. 31 ಜನವರಿ ಒಳಗೆ ವೇತನ ನೀಡಿದ ಬಗ್ಗೆ ತಾಲ್ಲೂಕಿನ ಎಲ್ಲಾ ಕಾರ್ಯದರ್ಶಿಗಳೂ ತಾಲ್ಲೂಕು ಪಂಚಾಯ್ತಿಗೆ ವರದಿ ನೀಡುವಂತೆ, ತಪ್ಪಿದಲ್ಲಿ ಕಾರ್ಯದರ್ಶಿಗಳ ಮೇಲೆ ಕ್ರಮ ವಹಿಸುವ ಎಚ್ಚರಿಕೆ ನೀಡುವ ಪತ್ರವನ್ನು ಬರೆಸಿ ಅದರ ಪ್ರತಿಯನ್ನು ಪಡೆದ ನಂತರ ಧರಣಿಯನ್ನು ಮುಗಿಸಲಾಯ್ತು. ಕೆ.ಎಲ್.ಭಟ್, ಡಿ.ಎಸ್.ಭೈರೇಶ್, ರಂಗಸ್ವಾಮಿ, ಶಿವಪ್ಪ ಮೊದಲಾದವರು ನೇತೃತ್ವ ವಹಿಸಿದ್ದರು.
ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗೆ ಘೆರಾವ್
ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 11 ರಂದು ಹೊಸಪೇಟೆಯಲ್ಲಿ ಸುಮಾರು 200 ಜನರು ಪಾಲ್ಗೊಂಡ ಪ್ರತಿಭಟನೆ ನಡೆದಿದೆ. ಅಂದು ಜಿಲ್ಲಾಕೇಂದ್ರ ಬಳ್ಳಾರಿಯಲ್ಲಿ 60 ರಿಂದ 70 ಜನರು ಪಾಲ್ಗೊಂಡ ಪ್ರತಿಭಟನೆ, ಕುರುಗೋಡಿನಲ್ಲಿ 500 ರಿಂದ 600 ಜನರು ಪಾಲ್ಗೊಂಡ ಪ್ರತಿಭಟನೆ 4 ದಿನಗಳ ಕಾಲ ನಡೆದಿದೆ. ಕೊನೆಯಲ್ಲಿ ರೇಷನ್ ಕಾರ್ಡಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳ ಪರಿಹಾರದ ಪ್ರಶ್ನೆಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಲಾಗಿದೆ. ಈ ಹಂತದಲ್ಲಿ ಹಗರಿಬೊಮ್ಮನಹಳ್ಳಿ, ಸಿರುಗುಪ್ಪಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.
ಜನವರಿ 21 ರಂದು ಜಿಲ್ಲಾಕೇಂದ್ರ ಬಳ್ಳಾರಿಯಲ್ಲಿ 700 ರಿಂದ 800 ಜನರು ಪಾಲ್ಗೊಂಡು ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ನಡೆದಿದೆ. ಪೊಲೀಸರ ತಡೆಯಿಂದ ತಳ್ಳಾಟ, ನೂಕಾಟ, ತಿಕ್ಕಾಟಗಳು ನಡೆದಿವೆ. ಸುಮಾರು 250 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಜನವರಿ ಮತ್ತು 13 ರಂದು ಮುಂಡಗೋಡಿನಲ್ಲಿ ಸುಮಾರು 250 ಜನರು ಪಾಲ್ಗೊಂಡ ಪ್ರತಿಭಟನೆಗಳು ನಡೆದಿವೆ. 12 ರಂದು ದಾಂಡೇಲಿಯಲ್ಲಿ 55 ರಿಂದ 60 ಜನರು ಪಾಲ್ಗೊಂಡ ಪ್ರತಿಭಟನೆ, ಹಳಿಯಾಳದಲ್ಲಿ, ಅಂಕೋಲಾದಲ್ಲಿ, ಕಾರವಾರ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾಗಳಲ್ಲಿ ಸುಮಾರು 40 ರಿಂದ 50 ಜನರು ಪಾಲ್ಗೊಂಡ ಪ್ರತಿಭಟನೆಗಳು ನಡೆದಿವೆ.
ಜನವರಿ 21 ರಂದು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ 500 ರಿಂದ 600 ಜನರ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು 200 ಜನರನ್ನು ಬಂಧಿಸಿದ್ದಾರೆ.
ಭಟ್ಕಳ- ಬಿಗಿಪಟ್ಟು: ಸಿಪಿಐ(ಎಂ) ರಾಜ್ಯಸಮಿತಿ ಕರೆಯಂತೆ ಜನವರಿ 11 ರಂದು ಭಟ್ಕಳ ತಹಶೀಲ್ದಾರರ ಕಛೇರಿ ಎದುರು ಸಿಪಿಐ(ಎಂ), ಸಿಐಟಿಯು ಮತ್ತು ರೇಶನ್ ಕಾರ್ಡುದಾರರ ಹೋರಾಟ ಸಮಿತಿ ಜಂಟಿಯಾಗಿ ಚಳುವಳಿ ಪ್ರಾರಂಭಿಸಿತು. ಸಿಪಿಐ(ಎಂ) ಕಾರ್ಯಕರ್ತರು ಒಳಗೊಂಡು ಭಟ್ಕಳ ತಾಲ್ಲೂಕಿನ ಗ್ರಾಮೀಣ ಪ್ರದೇಶದ ನೂರಾರು ಮಹಿಳೆಯರು ಮತ್ತು ಭಟ್ಕಳ ಪ್ರದೇಶದ ನೂರಾರು ಅಲ್ಪಸಂಖ್ಯಾತ ಬುರ್ಖಾಧಾರಿ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಿದ್ದು ವಿಶೇಷ. ಮೊದಲ ದಿನ ಸ್ವತ: ತಹಶೀಲ್ದಾರ ಎಸ್.ಎಮ್. ನಾಯ್ಕ ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ನಂತರ ಸಿಪಿಐ(ಎಂ) ಮುಖಂಡರು ಭಟ್ಕಳ ತಾಲ್ಲೂಕಿನಲ್ಲಿ ಆದ ಅವೈಜ್ಞಾನಿಕ ಸರ್ವೇ, ಕಾರ್ಡು ಹಂಚಿಕೆಯಲ್ಲಿ ಭ್ರಷ್ಟಾಚಾರದ ಕುರಿತು ಎಳೆ ಎಳೆಯಾಗಿ ವಿವರಿಸಿದರು. ತಹಶೀಲ್ದಾರರು ನಾವು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುತ್ತೇನೆ ಎನ್ನುವಾಗಲೇ ನೆರೆದ ಮಹಿಳೆಯರು ನೇರವಾಗಿ ``ನೀವು ಇದೇ ರೀತಿ ಹೇಳುತ್ತಿದ್ದೀರಿ. ನಮ್ಮ ಬೇಡಿಕೆ ಈಡೇರುವತನಕ ನಾವು ಇಲ್ಲಿಂದ ಕದಲುವುದಿಲ್ಲ" ಎಂದು ಬಿಗಿ ಪಟ್ಟು ಹಿಡಿದರು. ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಸಂಜೆತನಕ ಧರಣಿ ಮುಂದುವರಿಸಿದರು.
ಮಾರನೇ ದಿನ ಜನವರಿ 12 ರಂದು 10.30 ಕ್ಕೆ ಜಮಾವಣೆಗೊಂಡ 4.00 ಮಿಕ್ಕಿ ಮಹಿಳೆಯರು ತಮ್ಮ ಸಹನೆ ಮೀರಿ ಆಹಾರ ನಿರೀಕ್ಷಕರು ಕಛೇರಿ ಪ್ರವೇಶಿಸುವಾಗ ಅವರನ್ನು ಘೇರಾವ್ ಹಾಕಿ ಛೀಮಾರಿ ಹಾಕಿದರು. ಅವರು ಪೊಲೀಸ್ ರಕ್ಷಣೆಯೊಂದಿಗೆ ಕಛೇರಿ ಪ್ರವೇಶಿಸಿದರು. ಸುಮಾರು 11 ಗಂಟೆಗೆ ತಹಶೀಲ್ದಾರರು ಕಛೇರಿಗೆ ಬಂದಾಗ ಟೆಂಟ್ ಬಿಟ್ಟು ಕಛೇರಿ ಆವರಣದ ಒಳನುಗ್ಗಿದ ಪ್ರತಿಭಟನಾಕಾರರು ಅವರ ಛೇಂಬರ್ ಒಳಗೆ ನುಗ್ಗಿದರು. ಇದರಿಂದ ವಿಚಲಿತರಾದ ತಹಶೀಲ್ದಾರರು ಪೊಲೀಸ್ ಪಡೆಯನ್ನು ಕರೆಯಿಸಿದರು. ಅದರಲ್ಲಿ ಒಬ್ಬ ಪ್ರತಿಭಟನಾಕಾರ, ಗ್ರಾಮ ಲೆಕ್ಕಿಗರು ಪಡೆದ ಲಂಚದಲ್ಲಿ ನಿಮ್ಮ ಪಾಲು ಇದೆ ಎಂದು ನೇರವಾಗಿ ಆಪಾದಿಸಿದಾಗ ಅವನನ್ನು ಬಂಧಿಸಿರಿ ಎಂದು ಪೊಲೀಸ್ ಅಧಿಕಾರಿಗೆ ಆದೇಶಿಸಿದರು. ಸಿಪಿಐ(ಎಂ) ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಮತ್ತು ಮಹಿಳೆಯರು ಅದನ್ನು ತಡೆದರು. ತಹಶೀಲ್ದಾರರನ್ನು ಮಧ್ಯಾಹ್ನ ಊಟಕ್ಕೆ ಸಹ ಬಿಡದೇ ಕಛೇರಿ ಬಾಗಿಲಲ್ಲೇ ಧರಣಿ ಮುಂದುವರಿಸಿದರು. ಒಟ್ಟಾರೆ ಈ ಹೋರಾಟ ಭಟ್ಕಳ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದು ವಿಶೇಷವೇ ಸರಿ.
ಬಿಜಾಪುರ
ಸಿಂಧಗಿ ತಾಲ್ಲೂಕಿನಲ್ಲಿ ಜನವರಿ 20 ರಿಂದ 23 ರವರೆಗೆ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆದಿದೆ. 23 ರಂದು ಸುಮಾರು 500 ಜನರು ಪಾಲ್ಗೊಂಡ ಮೆರವಣಿಗೆ ತಹಶೀಲ್ದಾರರ ಕಛೇರಿಯ ಪಿಕೆಟಿಂಗ್ ಕಾರ್ಯಕ್ರಮ ನಡೆದಿದೆ. ಜಿಲ್ಲಾಕೇಂದ್ರ ಬಿಜಾಪುರದಲ್ಲಿ 21 ರಿಂದ 23 ರವರೆಗೆ ಧರಣಿ ನಡೆದಿದೆ. ಜನವರಿ 25 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಮುತ್ತಿಗೆ ನಡೆದಿದೆ. ಇದಲ್ಲದೆ ಪ್ರತಿಭಟನೆಗೆ ಸರಿಯಾಗಿ ಸ್ಪಂದಿಸದೇ ಕಛೇರಿಯಿಂದ ಹೊರಗೆ ಹೋದ ಜಿಲ್ಲಾಧಿಕಾರಿಗಳು ಮರಳಿ ಮದ್ಯಾಹ್ನ ವಾಪಸ್ ಬಂದಾಗ ಸಂಜೆ 4 ಗಂಟೆಯವರೆಗೆ ಘೇರಾವ್ ಹಾಕಲಾಗಿದೆ. ಸುಮಾರು 600 ರಿಂದ 700 ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ.
ಮೈಸೂರು
ಜನವರಿ 11ರಿಂದ ಆರಂಭವಾದ ಹೋರಾಟದ ಹಂತದಲ್ಲಿ ಮೈಸೂರಿನಲ್ಲಿ ಜನವರಿ 11 ರಂದು ಸುಮಾರು 100ಜನರ ಪ್ರತಿಭಟನೆ ನಡೆದಿದೆ. ಹುಣಸೂರಿನಲ್ಲಿ ಜನವರಿ 12ರಂದು ಸುಮಾರು 500 ಜನರು ಪಾಲ್ಗೊಂಡ ಪ್ರತಿಭಟನೆ ನಡೆದಿದೆ. ಅದೇ ರೀತಿ ನಂಜನಗೂಡಿನಲ್ಲಿ ಜನವರಿ 13 ರಂದು ಸುಮಾರು 100 ಜನರು ಪಾಲ್ಗೊಂಡ ಪ್ರತಿಭಟನೆ ನಡೆದಿದೆ. ಈ ಎಲ್ಲ ಪ್ರತಿಭಟನೆಗಳು ಸಹ ತಹಸೀಲ್ದಾರರ ಕಛೇರಿ ಬಳಿ ನಡೆದಿದೆ.
ಜನವರಿ 21ರಂದು ಸುಮಾರು 500ರಿಂದ600 ರಷ್ಟಿದ್ದ ಪ್ರತಿಭಟನಾಕಾರರು ಸಿ.ಪಿ.ಐ.(ಎಂ) ಜಿಲ್ಲಾ ಕಾರ್ಯದರ್ಶಿ ಜಗನಾಥ್, ಜಿಲ್ಲಾ ಮುಖಂಡರಾದ ಜಯರಾಮು, ಬಾಲಾಜಿ, ವಿ.ಬಸವರಾಜು, ಸೋಮ ಶೇಖರ್ ಮುಂತಾದವರ ನೇತೃತವದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯನ್ನು ಮುತ್ತಿಗೆ ಹಾಕಿದ್ದಾರೆ. ನಂತರ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಬೇಡಿಕೆಗಳ ಬಗ್ಗೆ ಜೊತೆಗೆ ಆಹಾರಕ್ಕೆ ಸಂಬಂಧಿಸಿದ ಸ್ಥಳೀಯ ಬೇಡಿಕೆಗಳ ಬಗೆಗೆ ಚರ್ಚೆಯಾಗಿದೆ.
ಮಂಡ್ಯ: ಮುತ್ತಿಗೆ - ತೀವ್ರ ಜಟಾಪಟಿ
ಮಂಡ್ಯಜಿಲ್ಲೆ ಮಳವಳ್ಳಿಯಲ್ಲಿ ಜನವರಿ 11ರಂದು 300-350 ಜನರ ಪ್ರತಿಭಟನಾ ರ‍್ಯಾಲಿ ನಡೆದಿದೆ. ಪುರಸಭೆಯ ಕಛೇರಿಯಿಂದ ಹೊರಟ ಮೆರವಣಿಗೆ ನಂತರ ತಹಸೀಲ್ದಾರರ ಕಛೇರಿಯನ್ನು ಮುತ್ತಿಗೆ ಹಾಕಿದೆ. ಜನವರಿ 11ರ ಹಗಲು ರಾತ್ರಿ ಪ್ರತಿಭಟನೆ ಮುದುವರಿಸಿ ಪ್ರತಿಭಟನಾಕಾರರು, ಜನವರಿ 12 ಕ್ಕೂ ಪ್ರತಿಭಟನೆ ಮುಂದುವರೆಸಿದರು. ಮದ್ದೂರು ತಾಲ್ಲೂಕಿನಲ್ಲಿ ಜನವರಿ 11 ರಂದು ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಸುಮಾರು 200 ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 11ರ ಹಗಲು ಮತ್ತು ರಾತ್ರಿಯೂ ಪ್ರತಿಭಟನೆ ಮುಂದುವರಿಸಿ ಜನವರಿ 12ರಂದು ಸಹ ಪ್ರತಿಭಟನೆಯಲ್ಲಿ ಪ್ರವಾಸಿ ಮಂದಿರದಿಂದ ಸುಮಾರು 200 ಜನ ಕಾರ್ಯಕರ್ತರು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯ ನಗರದಲ್ಲಿ ಜನವರಿ 12ರಂದು ಸುಮಾರು 20 ಜನರ ಸಾಂಕೇತಿಕ ಪ್ರತಿಭಟನಾ ಧರಣಿ ನದೆದಿದೆ. ಪಾಂಡವಪುರದಲ್ಲಿ ಜನವರಿ 12 ರಂದು ಸುಮಾರು 100 ಜನರು ಪಾಲ್ಗೊಂಡ ಧರಣಿ ನಡೆದಿದೆ. ಈ ಮೇಲಿನ ಎಲ್ಲ ಪ್ರತಿಭಟನೆಗಳು ಸಹ ತಹಸಿಲ್ದಾರರ ಕಛೇರಿ ಬಳಿ ನಡೆದಿವೆ. ಜನವರಿ 21, ರಂದು ಮಂಡ್ಯ ನಗರದಲ್ಲಿ 2000 ಕ್ಕೂ ಹೆಚ್ಚು ಜನರು ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ. ಸುಮಾರು 300 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ಸಹ ನಡೆದಿದೆ.
ತುಮಕೂರು: ಜಗ್ಗಾಟ-ಬಂಧನ
ಮೊದಲ ಹಂತದ ಹೋರಾಟದಲ್ಲಿ ಕೊರಟಗೆರೆಯಲ್ಲಿ ಜನವರಿ 11, 12, 13, ಈ ಮೂರು ದಿನಗಳಲ್ಲೂ ಸುಮಾರು 150 ಜನರು ತಹಸಿಲ್ದಾರರ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದಾರೆ. ತುರುವೇಕೆರೆಯಲ್ಲಿ ಜನವರಿ 13 ರಂದು 3ದಿನ ಸುಮಾರು 120 ಜನರು ಪಾಲ್ಗೊಂಡ ಧರಣಿ, ತಿಪಟೂರಿನಲ್ಲಿ ಜನವರಿ 13 ರಂದು ಸುಮಾರು 80 ಜನರು ಪಾಲ್ಗೊಂಡ ಪ್ರತಿಭಟನಾಧರಣಿ, ಶಿರಾದಲ್ಲಿ ಜನವರಿ 13 ರಂದು 50 ಜನರು ಪಾಲ್ಗೊಂಡ ಪ್ರತಿಭಟನಾ ಧರಣಿ ನಡೆದಿದೆ. ಜನವರಿ 21 ರ ಹಂತದಲ್ಲಿ ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ದಲಿತ ಕ್ರೈಸ್ತ ಒಕ್ಕೂಟ, ಕೊಳಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ, ಹಾಗೂ ಸಿಪಿಐಗಳಿಂದ ಜಂಟಿಯಾಗಿ 21,22,23 ರಂದು ಮೂರು ದಿನಗಳಕಾಲ ಪ್ರತಿಭಟನೆ ನಡೆದಿದೆ. 21 ರಂದು ಸುಮಾರು 500 ಜನರು, 22ರಂದು ಸುಮಾರು 100 ಜನರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜನವರಿ 23 ರಂದು ಸುಮಾರು 800 ಜನರ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗಿದೆ. ಪ್ರತಿಭಟನಾಕಾರರನ್ನು ಒಳಕ್ಕೆ ಬಿಡುವುದಿಲ್ಲವೆನ್ನುವ ಪೋಲಿಸರಿಗೂ ಜನರಿಗೂ ಸಾಕಷ್ಟು ತಳ್ಳಾಟ ಜಗ್ಗಾಟಗಳು ನಡೆದಿದೆ. ಪ್ರತಿಭಟನೆಯಲ್ಲಿ ಹಲವರಿಗೆ ಪೆಟ್ಟುಗಳು ಸಹ ಬಿದ್ದಿವೆ. ಸುಮಾರು 400 ಜನರನ್ನು ಪೋಲಿಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಹಾಸನ: ಪ್ರತಿಭಟನಾ ಪ್ರದರ್ಶನ
ಜನವರಿ 13 ಹಾಸನದಲ್ಲಿ ಹೊಳೆನರಸೀಪುರದಲ್ಲಿ ಸಿಐಟಿಯು ಸಂಗಾತಿಗಳಾದ ಲತಾ, ಪುಷ್ಪ ಅವರ ನೇತೃತ್ವದಲ್ಲಿ ಸುಮಾರು 200 ರಷ್ಟು ಜನರು ಪ್ರತಿಭಟನಾ ಪ್ರದರ್ಶನ ನಡೆಸಿದ್ದಾರೆ. ಹಾಸನದಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಸುಮಾರು 50-60ಜನರು ಪಾಲ್ಗೊಂಡ ಪ್ರತಿಭಟನೆ, ಬೇಲೂರಿನಲ್ಲಿ ಸುಮಾರು 120 ಜನರು ಪಾಲ್ಗೊಂಡ ಪ್ರತಿಭಟನೆ ನಡೆದಿದೆ. ಜನವರಿ 23 ರಂದು ಹಾಸನದಲ್ಲಿ ಹೇಮಾವತಿ ಪ್ರತಿಮೆ ಬಳಿಯಿಂದ ಸುಮಾರು 500 ಜನರು ಪಾಲ್ಗೊಂಡ ಮೆರವಣಿಗೆ ನಡೆದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ನಡೆದಿದೆ. ಕಾಂ|| ಸುಕುಮಾರ್, ಧರ್ಮೇಶ್, ಸತ್ಯನಾರಾಯಣ, ಜಿ.ಟಿ, ಕೆ.ಬಿ.ಮಂಜುನಾಥ, ಪೃಥ್ವಿ, ಶಾವಲ್ ಹಮೀದ್ ಮುಂತಾದವರು ನೇತೃತ್ವ ವಹಿಸಿದ್ದರು.
ಗದಗ್ : ಪರಿಹಾರದ ಭರವಸೆ
ಆಹಾರದ ಹಕ್ಕಿಗಾಗಿ ಆಗ್ರಹಿಸಿ ಗದಗ್ ಜಿಲ್ಲೆಯಲ್ಲಿ ಪ್ರತಿಭಟನಾ ಮೆರವಣಿಗೆ ಕಾಲ್ನಡಿಗೆ ಜಾಥಾ ಇತ್ಯಾದಿಗಳು ನಡೆದಿವೆ. ಜನವರಿ 11,12,13 ರಂದು ಗದಗ್ ಜಿಲ್ಲೆಯ ಗಜೇಂದ್ರಗಢದಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ 3ದಿನಗಳ ಕಾಲ ಪ್ರತಿಭಟನಾ ಧರಣ ನಡೆದಿದೆ. ಈ ಪ್ರತಿಭಟನೆ ಸುಮಾರು 200 ಜನರು ಪಾಲ್ಗೊಂಡಿದ್ದಾರೆ. ನಡುವೆ ಮಳೆ ಬಂದರೂ ಜನರು ಜಗ್ಗದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ರೋಣ ತಾಲ್ಲೂಕಿನ ತಹಸೀಲ್ದಾರರು ಧರಣಿ ಸ್ಥಳಕ್ಕೇ ಬಂದು ಮಾತುಕತೆ ನಡೆಸಿದ್ದಾರೆ. ವಿಶೇಷ ತಹಸೀಲ್ದಾರರು ಸಹ ಭೇಟಿನೀಡಿ ಸ್ಥಳೀಯ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದ್ದಾರೆ. ಜನವರಿ 12ರಂದು ಗದಗನಲ್ಲಿ ಸಿಐಟಿಯು ಸಂಗಾತಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ.
ಸೌಜನ್ಯ: ಜನಶಕ್ತಿ