ಹೊಸದಿಲ್ಲಿ, ಎ.20: ಒತ್ತಡಕ್ಕೆ ಮಣಿದಿರುವ ಬಿಸಿಸಿಐಯ ಮಾಜಿ ವರಿಷ್ಠ ಶರದ್ ಪವಾರ್, ವಿವಾದಿತ ಐಪಿಎಲ್ ಆಯುಕ್ತ ಲಲಿತ್ ಮೋದಿಯವರ ರಾಜೀನಾಮೆ ಕೇಳಲು ಒಪ್ಪಿದ್ದು, ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಐಪಿಎಲ್ ವರಿಷ್ಠನಾಗಿ ಹೊಣೆ ಸ್ವೀಕರಿಸಲಿದ್ದಾರೆ.
ಬಿಸಿಸಿಐ, ಐಪಿಎಲ್ ವಿವಾದದ ಕುರಿತು ಆಂತರಿಕ ತನಿಖೆಯೊಂದಕ್ಕೆ ಆದೇಶಿಸಿದ್ದು, ಟ್ವೆಂಟಿ-20 ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದ ಬಳಿಕ ಮೋದಿ ಕೆಳಗಿಳಿಯುವ ಸಂಭವವಿದೆಯೆನ್ನಲಾಗಿದೆ. ಎ.26ರಂದು ನಡೆಯುವ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಮೋದಿ ತನ್ನ ರಾಜೀನಾಮೆ ಪತ್ರ ನೀಡಲಿದ್ದಾರೆಂದು ಹೇಳಲಾಗಿದೆ.
ಮುಂಬೈಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮೋದಿಯವರ ರಾಜೀನಾಮೆ ಕೇಳುವ ಸಾಧ್ಯತೆಯಿದೆ. ಶರದ್ ಪವಾರ್ ಕೂಡ ಇದಕ್ಕೆ ಒಪ್ಪಿದ್ದಾರೆಂದು ಬಿಸಿಸಿಐಯ ಉನ್ನತ ಮೂಲಗಳು ತಿಳಿಸಿವೆ.ಐಪಿಎಲ್ ಹಾಗೂ ಬಿಸಿಸಿಐಯ ಹಿತಾಸಕ್ತಿಯ ದೃಷ್ಟಿಯಿಂದ ಮೋದಿ ಐಪಿಎಲ್ ಆಯುಕ್ತನ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ.
ಅವರು ರಾಜೀನಾಮೆ ನೀಡದಿದ್ದಲ್ಲಿ ಆಡಳಿತ ಮಂಡಳಿಯು ಅವರ ಉಚ್ಚಾಟನೆಯ ನಿರ್ಣಯವೊಂದನ್ನು ಅಂಗೀಕರಿಸಬೇಕಾಗಬಹುದೆಂದು ಅವು ಹೇಳಿವೆ. ಮೋದಿ ಕೆಳಗಿಳಿಯಬೇಕೆಂಬ ಬಗ್ಗೆ ಆಡಳಿತ ಮಂಡಳಿಯಲ್ಲಿ ಬಹುತೇಕ ಏಕಾಭಿಪ್ರಾಯವಿದೆ. ಅವರಿಗೆ ಬೇರೆ ಆಯ್ಕೆಯಿಲ್ಲ. ಇದು ತಾಂತ್ರಿಕ ಅಂತ್ಯವಾಗಿರುತ್ತದೆಂದು ಮೂಲಗಳು ಅಭಿಪ್ರಾಯಿಸಿವೆ